-ಶ್ರೀಕಾಂತ ಹೆಮ್ಮಾಡಿ, ಕುಂದಾಪುರ
ಕುಂದಾಪುರ: ಕರೋನಾ ವೈರಸ್ ತಡೆಗಾಗಿ ಪ್ರಧಾನಿ ಮೋದಿ ಭಾನುವಾರ ಕರೆಕೊಟ್ಟಿರುವ ಜನತಾ ಕರ್ಪ್ಯೂಗೆ ತಾಲೂಕಿನಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಭಾನುವಾರ ರಜೆಯ ದಿನವಾದ್ದರಿಂದ ಮತ್ತು ಕೊರೋನಾ ವೈರಸ್‍ನಿಂದಾಗಿ ಭಯಭೀತರಾಗಿದ್ದರಿಂದ ಸಾಮಾಜಿಕ ಕಳಕಳಿಗಿಂತಲೂ ಸ್ವಯಂ ರಕ್ಷಣೆ ಅನಿವಾರ್ಯ ಎನ್ನುವುದನ್ನು ಎಲ್ಲರೂ ಒಪ್ಪಿಕೊಂಡಿರುವುದು ಭಾನುವಾರದ ನಡೆದಿರುವ ಬೆಳವಣಿಗೆ ಸಾಕ್ಷೀಕರಿಸಿದೆ.
ಕುಂದಾಪುರದ ಪ್ರಮುಖ ಪೇಟೆಗಳಲ್ಲಿನ ವ್ಯಾಪಾರಸ್ಥರು ತಮ್ಮ ಅಂಗಡಿಗಳ ಬಾಗಿಲು ತೆರೆಯದೇ ಬಂದ್‍ಗೆ ಬೆಂಬಲ ಸೂಚಿಸಿದ ಪರಿಣಾಮ ಮುಖ್ಯ ಪೇಟೆಯ ರಸ್ತೆಗಳೆಲ್ಲಾ ಜನಸಂಚಾರವಿಲ್ಲದೆ ಬಿಕೋ ಎನ್ನುತ್ತಿದ್ದವು. ಬಸ್ ನಿಲ್ದಾಣಗಳಲ್ಲಿ ಬಸ್‍ಗಳಿಲ್ಲದೇ ಜನರೂ ಇಲ್ಲದೇ ಖಾಲಿಖಾಲಿಯಾಗಿತ್ತು. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರಿಗೆ ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಕುಂದಾಪುರದ ಮೀನು ಮಾರುಕಟ್ಟೆ, ಮಟನ್ ಸ್ಟಾಲ್‍ಗಳು, ಕೋಳಿ ಅಂಗಡಿಗಳು, ಹೊಟೇಲ್ ಮಾಲೀಕರು ತಮ್ಮ ಅಂಗಡಿಗಳನ್ನು ಬಂದ್ ಮಾಡಿ ಜನತಾ ಕಫ್ರ್ಯೂಗೆ ಬೆಂಬಲ ಸೂಚಿಸಿದರು. ಕುಂದಾಪುರ ನಗರವಲ್ಲದೇ ತಾಲೂಕಿನ, ತಲ್ಲೂರು, ಹೆಮ್ಮಾಡಿ, ಮುಳ್ಳಿಕಟ್ಟೆ, ತ್ರಾಸಿ, ಗಂಗೊಳ್ಳಿ, ಮರವಂತೆ, ನಾವುಂದ ನಾಗೂರು, ಉಪ್ಪುಂದ ಬೈಂದೂರು, ಹೊಸಂಗಡಿ ಸೇರಿದಂತೆ ಎಲ್ಲಾ ಊರುಗಳ ಅಂಗಡಿ ಮಾಲೀಕರು, ಆಟೋ, ಟೂರಿಸ್ಟ್ ವಾಹನ ಚಾಲಕರು ಬಂದ್ ನಡೆಸಿದರು.
ಪ್ರಯಾಣಿಕರ ಪರದಾಟ:
ಶನಿವಾರ ಸಂಜೆ ಬೆಂಗಳೂರು, ಮೈಸೂರು, ಹುಬ್ಬಳ್ಳಿ ಮೊದಲಾದೆಡೆಗಳಿಂದ ಊರಿಗೆ ಹೊರಟಿದ್ದ ಪ್ರಯಾಣಿಕರು ಭಾನುವಾರ ಬೆಳಿಗ್ಗೆ ಕುಂದಾಪುರ ತಲುಪಿದ್ದು, ತಮ್ಮ ಮನೆಗಳಿಗೆ ಹೋಗಲು ಯಾವುದೇ ವಾಹನಗಳಿಲ್ಲದೇ ಪರದಾಟ ನಡೆಸುತ್ತಿರುವ ದೃಶ್ಯಗಳು ಕಂಡುಬಂದಿತು. ಆಟೋ ರಿಕ್ಷಾಗಳೂ ನಿಲ್ದಾಣಗಳಿಗೆ ಬಾರದೇ ಇದ್ದಿದ್ದರಿಂದ ಪ್ರಯಾಣಿಕರಿಗೆ ಸಮಸ್ಯೆಯಾಗಿತ್ತು. ಈ ಹಿಂದಿನ ಬಂದ್‍ನಂತೆಯೇ ಈ ಬಾರಿ ಆಗಬಹುದು ಎಂದು ಲೆಕ್ಕಾಚಾರ ಹಾಕಿದ್ದ ಪ್ರಯಾಣಿಕರನ್ನು ಭಾನುವಾರದ ಕರ್ಪ್ಯೂ ಕಂಗೆಡಿಸಿತು. ಆದರೆ ಕರ್ತವ್ಯನಿರತ ಕೆಲ ಪತ್ರಕರ್ತರು ಲಾರಿಗಳನ್ನು ಅಡ್ಡಗಟ್ಟಿ ಪ್ರಯಾಣಿಕರನ್ನು ಹತ್ತಿಸಿ ಅವರವರ ಊರುಗಳಿಗೆ ಹೋಗುವ ವ್ಯವಸ್ಥೆ ಮಾಡಿಕೊಟ್ಟರು.
ಕಫ್ರ್ಯೂ ಲೆಕ್ಕಸಿದೆ ನಗರ ಸ್ವಚ್ಛತೆ!:
ಪತ್ರಿಕಾ ಏಜೆಂಟ್ ಶಂಕರಾಚಾರ್ಯ ಬೆಳಗ್ಗಿನ ಸುದ್ಧಿಗಳಿಗಾಗಿ ಅಂಗಡಿ ಹಾಗೂ ಇಂದಿರಾ ಕ್ಯಾಂಟೀನ್ ತೆರೆದಿದ್ದರೆ, ಕುಂದಾಪುರದಲ್ಲಿರುವ ಉಳಿದೆಲ್ಲಾ ಅಂಗಡಿಗಳು ಬಾಗಿಲು ತೆರೆಯದೇ ಜನತಾ ಕರ್ಪ್ಯೂ ಆಚರಿಸಿದ್ದಾರೆ. ಕುಂದಾಪುರ ಪುರಸಭೆಯ ಕಾರ್ಮಿಕರು ಮಾತ್ರ ಕರ್ಪ್ಯೂ ಲೆಕ್ಕಿಸದೇ ತಮ್ಮ ಸ್ವಚ್ಚತಾ ಕಾರ್ಯದಲ್ಲಿ ನಿರತರಾಗಿದ್ದುದು ಕಂಡು ಬಂತು.
ಕಾಲೇಜು ವಿದ್ಯಾರ್ಥಿಗಳ ಬೈಕ್ ರೈಡ್ ಕ್ರೇಜ್!:
ವಾಹನಗಳ ಸಂಚಾರವಿಲ್ಲದೆ ಬಿಕೋ ಎನ್ನುತ್ತಿದ್ದ ರಾ.ಹೆದ್ದಾರಿಯಲ್ಲಿ ಕೆಲ ಯುವಕರು ದ್ವಿಚಕ್ರವಾಹನಗಳಲ್ಲಿ ತಂಡೋಪತಂಡವಾಗಿ ಬೈಕ್ ರೈಡ್ ನಡೆಸುತ್ತಿರುವುದು ಕಂಡು ಬಂತು.
ಬಸ್‍ಗಳ ಸೇವೆ ಸ್ಥಗಿತ:
ರಾಜ್ಯ ಸಂಚಾರಿ ಸಾರಿಗೆ ನಿಗಮದ ಸರ್ಕಾರಿ ಬಸ್‍ಗಳನ್ನು ಕುಂದಾಪುರದ ಡಿಪೋ ಹಾಗೂ ಬಸ್ ನಿಲ್ದಾಣದಲ್ಲಿ ಸಾಲಾಗಿ ನಿಲ್ಲಿಸುವ ಮೂಲಕ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು. ಖಾಸಗಿ ಬಸ್‍ಗಳೂ ರಸ್ತೆಗೆ ಇಳಿಯದೇ ಇದ್ದುದರಿಂದ ಗ್ರಾಮೀಣ ಭಾಗಗಳಲ್ಲಿಯೂ ಸ್ವಯಂ ಪ್ರೇರಿತ ಬಂದ್ ಯಶಸ್ವಿಯಾಗಿದೆ.
ಗಂಗೊಳ್ಳಿ ಬಂದರು ಖಾಲಿ ಖಾಲಿ:
ಗಂಗೊಳ್ಳಿಯ ಬಂದರಿನಲ್ಲಿ ಮೀನುಗಾರರು ಕೂಡ ಮೀನುಗಾರಿಕೆಗೆ ತೆರಳಿಗೆ ಬಂದ್‍ಗೆ ಬೆಂಬಲ ಸೂಚಿಸಿದರು. ಸಾಕಷ್ಟು ಮೀನುಗಾರರಿಂದ ಗಿಜುಗುಡುತ್ತಿದ್ದ ಗಂಗೊಳ್ಳಿ ಬಂದರು ಭಾನುವಾರ ಮಾತ್ರ ನಿಶಬ್ಧವಾಗಿತ್ತು. ಕೆಲ ಮೀನುಗಾರರು ಬೋಟಿನಲ್ಲೇ ಆಹಾರ ತಯಾರಿಸಿ ಊಟ ಮಾಡುತ್ತಿದ್ದರು. ಇನ್ನೂ ಕೆಲವರು ಬೋಡಿನಲ್ಲೇ ಮಲಗಿ ವಿಶ್ರಾಂತಿ ಪಡೆಯುತ್ತಿರುವ ದೃಶ್ಯ ಗಂಗೊಳ್ಳಿ ಬಂದರಿನಲ್ಲಿ ಭಾನುವಾರ ಕಂಡುಬಂದಿತು.
ಪೊಲೀಸ್ ಠಾಣೆಯಲ್ಲಿ ಜನರಿಲ್ಲ:
ಕುಂದಾಪುರ ಪೊಲೀಸ್ ಠಾಣೆ ಹಾಗೂ ಸಂಚಾರಿ ಠಾಣೆಯಲ್ಲಿ ಜನರಿಲ್ಲದೇ ಹೊರಗಿರುವ ಬೆಂಚುಗಳು ಖಾಲಿಯಾಗಿದ್ದವು. ಸಂಚಾರಿ ಪೊಲೀಸರು ಠಾಣೆಯ ಎದುರು ಬಕೆಟ್‍ನಲ್ಲಿ ನೀರು ಹಾಗೂ ಸ್ಯಾನಿಟೈಸರ್‍ಗಳನ್ನಿಟ್ಟು ಕೈತೊಳೆದು ಒಳಗೆ ಬನ್ನಿ ಎನ್ನುವ ಬರಹಗಳುಳ್ಳ ಬೋರ್ಡ್ ನೇತು ಹಾಕಿ ಸರ್ಕಾರ ಹೊರಡಿಸಿರುವ ಆದೇಶವನ್ನು ಪಾಲಿಸಿದರು.
ದಿನಸಿ ವಸ್ತುಗಳಿಗಾಗಿ ಪರದಾಟ ಇಲ್ಲ:
ಜನತಾ ಕಫ್ರ್ಯೂ ಪರಿಣಾಮ ಮಾಧ್ಯಮಗಳು ನಿರಂತರವಾಗಿ ವರದಿ ಪ್ರಕಟಿಸಿದ್ದರಿಂದಾಗಿ ಜನರು ಎಚ್ಚೆತ್ತುಕೊಂಡು ಗೃಹ ಬಳಕೆಗೆ ಬೇಕಾಗುವಂತಹ ಪ್ರಮುಖ ದಿನಸಿ ಸಾಮಾಗ್ರಿಗಳನ್ನು ಶನಿವಾರವೇ ಖರೀದಿಸಿದ್ದರು. ಆನತಾ ಕಫ್ರ್ಯೂಗೆ ಸಾಕಷ್ಟು ತಯಾರಿ ನಡೆಸಿದ ಹಿನ್ನೆಲೆಯಲ್ಲಿ ಭಾನುವಾರ ಯಾರೂ ಕೂಡ ಅಗತ್ಯ ವಸ್ತುಗಳಿಗಾಗಿ ಪರದಾಟ ನಡೆಸಿಲ್ಲ.
ಫ್ಲೈಓವರ್ ಕಾಮಗಾರಿ ಬಂದ್:
ಸಾಕಷ್ಟು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕುಂದಾಪುರ ಫ್ಲೈಓವರ್ ಕಾಮಗಾರಿಗೆ ಇದೀಗ ಸಾಕಷ್ಟು ವೇಗ ಪಡೆದುಕೊಂಡಿದೆ. ರಾತ್ರಿ-ಹಗಲು ಕೆಲಸ ನಡೆಸುತ್ತಿರುವ ಕಾರ್ಮಿಕರು ಭಾನುವಾರ ಕಾಮಗಾರಿ ಸ್ಥಳಕ್ಕೆ ಬಾರದೆ ಬಂದ್‍ಗೆ ಬೆಂಬಲ ಸೂಚಿಸಿದರು.
ಆಸ್ಪತ್ರೆ ದಾದಿಯರ ಪರದಾಟ:
ನಗರದ ವಿವಿಧ ಖಾಸಗಿ ಆಸ್ಪತ್ರೆಗಳ ದಾದಿಯರು ರಾತ್ರಿ ಪಾಳಯದಲ್ಲಿ ಕರ್ತವ್ಯ ನಿರ್ವಹಿಸಿ ಬೆಳಗ್ಗೆ ತಮ್ಮ ತಮ್ಮ ಮನೆಗೆ ವಾಪಾಸಾಗುವ ವೇಳೆಯಲ್ಲಿ ಪರದಾಟ ನಡೆಸಿದರು. ಬಸ್ ಸಂಚಾರ ಇಲ್ಲದಿರುವುದರಿಂದ ಕೆಲವರು ತಮ್ಮ ತಮ್ಮ ಮನೆಗಳಿಂದ ದ್ವಿಚಕ್ರ ವಾಹನ ಕರೆಸಿ ಮನೆಗೆ ವಾಪಾಸಾದ ದೃಶ್ಯ ಕಂಡುಬಂದಿತು.