ಕುಂದಾಪುರ: ಗೋಹತ್ಯೆ ಧಾರ್ಮಿಕ ನಂಬಿಕೆ ಮೇಲಿನ ಆಕ್ರಮಣ

ಕುಂದಾಪುರ: ಹಸುಗಳ ಜತೆ ಮಾನವೀಯ ಒಡನಾಟ ಹಾಗೂ ಅಟ್ಯಾಚ್ಮೆಂಟ್ ಇರುತ್ತದೆ. ಮಕ್ಕಳಂತೆ ಲಾಲನೆ ಪಾಲನೆ ಮಾಡಿ, ಇದ್ದಕ್ಕಿದ್ದಂತೆ ಹಟ್ಟಿ‌ಉಯಲ್ಲಿರುವ ಹಸು ಕಾಣೆಯಾಯ್ತು ಎಂದರೆ ಅದರ ನೋವು ಉಂಡವರಿಗೆ ಗೊತ್ತು. ಯಾರೂ ಆಹಾರಕ್ಕಾಗಿ ಹಸು ಸಾಕದೆ, ಹೈನುಗಾರಿಕೆ ಹಾಗೂ ಕೃಷಿಗಾಗಿ ಸಾಕುತ್ತಾರೆ. ಗೋಹತ್ಯ ಕ್ರೂರ ಹಾಗೂ ಘೋರ. ಇಂದು ವರ್ಗದ ಜನರ ಓಲೈಕೆಗಾಗಿ ಗೋವನ್ನು ದೇವರೆಂದು ನಂಬಿದ ಹಿಂದುಗಳ ಮೇಲೆ ಗೋಹತ್ಯೆ ಮೂಲಕ ಧಾರ್ಮಿಕ ನಂಬಿಕೆ ಮೇಲೆ ಅಕ್ರಣ ಮಾಡಲಾಗುತ್ತದೆ ಎಂದು ವಿಶ್ವಹಿಂದೂ ಪರಿಷತ್ ಮುಖಂಡ ಪ್ರೇಮಾನಂದ ಶೆಟ್ಟಿ ಕಡ್ಕೆರೆ ಅಭಿಪ್ರಾಯಪಟ್ಟರು. 

ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಹಿಂದೂ ಜಾಗರಣ ವೇದಿಕೆ ಕುಂದಾಪುರ ತಾಲೂಕು ಸಂಘಟನೆ ಆಶ್ರಯದಲ್ಲಿ ಕುಂದಾಪುರ ಶಾಸ್ತ್ರಿ ವೃತ್ತದ ಬಳಿ ಬುಧವಾರ ಗೋಹತ್ಯ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿ, ಗೋವು ಹೈನುಗಾರಿಕೆ ಹಾಗೂ ಕೃಷಿಗಷ್ಟೇ ಸೀಮಿತವಲ್ಲ, ಗೋವುಗಳ ನಾಶದಿಂದ ಪರಿಸರದ ಮೇಲೂ ಪರಿಣಾಮ ಬೀರುತ್ತಿದ್ದು, ಭೂಮಿಯ ತಾಪಮಾನ ಹೆಚ್ಚಲು ಗೋವುಗಳ ಸಂಖ್ಯೆ ಕ್ಷೀಣಿಸುತ್ತಿರುವುದೇ ಮುಖ್ಯ ಕಾರಣವಾಗಿದೆ. ಗೋವಿನ ಗಂಜಲು ಭೂಮಿಗೆ ಬೀಳಬೇಕು ಹೊರತು ಗೋವಿನ ರಕ್ತ ಭೂಮಿಗೆ ಬಿದ್ದರೆ ಅದು ಭೂಮಿಯ ವಿನಾಶದ ಮುನ್ಸೂಚನೆ ಎಂಬುದು ತಿಳಿಯಬೇಕು ಎಂದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಸುಬ್ರಮಣ್ಯ ಹೊಳ್ಳ ಮಾತನಾಡಿ, ತಾಯಿ ಸ್ಥಾನದಲ್ಲಿರುವ ಗೋಮಾತೆಯನ್ನು ಭಾರತದ ರಾಷ್ಟ್ರೀಯ ಪ್ರಾಣಿಯಾಗಿ ಮಾಡಬೇಕೆಂಬ ಕೂಗಿದ್ದರೂ ಕೂಡ ಅದು ಸಾಧ್ಯವಾಗಿಲ್ಲ. ಬಹಳ ಹಿಂದಿನಿಂದಲೂ ಆಕ್ರಮಣಕಾರರು ಶ್ರದ್ಧಾಕೇಂದ್ರಗಳು, ಮಹಿಳೆಯರು, ಭೂಮಿಗಳ ಮೇಲೆ ಆಕ್ರಮಣ ಮಾಡಿ ನಂಬಿಕೆಗಳನ್ನು ಹಾಳು ಮಾಡುವ ಕೆಟ್ಟ ಕೆಲಸ ಮಾಡಿದ್ದು ಇದೀಗಾ ಗೋವಿನ ಅಪಹರಣ, ಗೋ ವಧೆಯನ್ನು ಹಳ್ಳಿಹಳ್ಳಿಗಳಲ್ಲಿ ಮಾಡಿ ಅಶಾಂತಿ ಮಾಡುತ್ತಿದ್ದು ಇದು ಧಾರ್ಮಿಕ ನಂಬಿಕೆ ಮೇಲೆ ಮಾಡುತ್ತಿರುವ ಆಕ್ರಮಣವಾಗಿದೆ. ಮುಂದಿನ ದಿನಗಳಲ್ಲಿ ಪ್ರತಿ ಹಳ್ಳಿಯ ಮನೆಮನೆಗಳಿಗೂ ತೆರಳಿ ಗೋವಿನ ಬಗ್ಗೆ ಅರಿವು ಮೂಡಿಸುವ ಕಾರ್ಯ ಹಿಂದೂ ಸಂಘಟನೆ ಮಾಡಲಿದೆ. ಗೋ ಕಳ್ಳರ ವಿರುದ್ಧ ಸರಕಾರ ಹಾಗೂ ಇಲಾಖೆ ಗಂಭೀರವಾಗಿ ಪರಿಗಣಿಸಿ ಕಾನೂನು ಕ್ರಮಕೈಗೊಳ್ಳಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ವಿ. ಹಿಂ.ಪ.  ಉಡುಪಿ ಜಿಲ್ಲಾ ಸಹ ಕಾರ್ಯದರ್ಶಿ ಗಿರೀಶ್ ಕುಂದಾಪುರ, ಹಿಂಜಾವೇ ಜಿಲ್ಲಾ ಕಾರ್ಯದರ್ಶಿ ಶಂಕರ್ ಕೋಟ, ಜಿಲ್ಲಾ ಉಪಾಧ್ಯಕ್ಷ ವಾಸು ಗಂಗೊಳ್ಳಿ, ಭಜರಂಗದಳ ಕುಂದಾಪುರ ತಾಲೂಕು ಸಂಚಾಲಕ ಸುಧೀರ್ ಮೇರ್ಡಿ, ಹಿಂಜಾವೇ ತಾಲೂಕು ಕಾರ್ಯದರ್ಶಿ ಸುಧೀರ್ ಮೇರ್ಡಿ, ಬಿಜೆಪಿ ಕುಂದಾಪುರ ಕ್ಷೇತ್ರ ಸಮಿತಿಯ ಪದಾಧಿಕಾರಿಗಳು ಇದ್ದರು.

ವಿಶ್ವಹಿಂದೂ ಪರಿಷತ್ ಕುಂದಾಪುರ ತಾಲೂಕು ಅಧ್ಯಕ್ಷ ವಿಜಯ ಕುಮಾರ್ ಶೆಟ್ಟಿ ಗೋಳಿಯಂಗಡಿ ಮಾತನಾಡಿದರು. ಉಡುಪಿ ಜಿಲ್ಲೆ ಭಜರಂಗದಳ ಸಹಸಂಚಾಲಕ ಸುರೇಂದ್ರ ಮಾರ್ಕೋಡು ಪ್ರಸ್ತಾವನೆಗೈದರು. ಹಿಂಜಾವೇ ಜಿಲ್ಲಾ ಕಾರ್ಯದರ್ಶಿ ಶಂಕರ ಅಂಕದಕಟ್ಟೆ ಪ್ರಾರ್ಥಿಸಿದರು. ಸುರೇಂದ್ರ ಸಂಗಮ್ ಕಾರ್ಯಕ್ರಮ ನಿರ್ವಹಿಸಿದರು.