ಕುಂದಾಪುರ ತಾ.ಪಂ. ಸಾಮಾನ್ಯ ಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯರೇ ಅಧ್ಯಕ್ಷರ ವಿರುದ್ಧ ಗರಂ

 ಕುಂದಾಪುರ: ಪಾಲನಾವರದಿಗೆ ಉತ್ತರ ಕೊಡೋದು ಯಾರು? ಉತ್ತರ ಸಿಗದ ಮೇಲೆ ಸಭೆಗೆ ಬಂದು ಏನು ಪ್ರಯೋಜನ. ಅಧ್ಯಕ್ಷರಿಗೆ ಅಧಿಕಾರಿಗಳ ಮೇಲೆ ಹಿಡಿತವಿಲ್ಲದೆ ಸಭೆಗೆ ತಯಾರಿ ನಡೆಸದೆ ಬರುತ್ತಾರೆ. ಸಾಮಾನ್ಯ ಪ್ರಶ್ನೆಗೂ ಅಧಿಕಾರಿಗಳಿಂದ ಉತ್ತರ ಪಡೆಯಲು ಆಗದ ಮೇಲೆ ಸಭೆ ನಡೆದು ಏನು ಪ್ರಯೋಜನ. ಇದು ಹೀಗೆಯೇ ಮುಂದುವರಿದರೆ ಮುಂದಿನ ಸಭೆಯಲ್ಲಿ ಪಾಲ್ಗೊಳ್ಳೋದಿಲ್ಲ ಎಂದು ಆಡಳಿತ ಪಕ್ಷದ ಸದಸ್ಯರೇ ಅಧ್ಯಕ್ಷರ ವಿರುದ್ಧ ಗರಂ ಆದ ಘಟನೆ ಕುಂದಾಪುರ ತಾಲೂಕು ಪಂಚಾಯಿತಿ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಸೋಮವಾರ ನಡೆದ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆ ನಡೆದಿದೆ.

ಪಾಲನಾವರದಿಗೆ ಉತ್ತರವೇ ಇಲ್ಲ:

ತಾಲೂಕು ಪಂಚಾಯಿತಿ ಅಧಿಕಾರ ಹಿಡಿದು ಮೂರು ವರ್ಷವಾಯಿತು. ಪಾಲನಾವರದಿ ಇನ್ನೂ ಉತ್ತರ ಸಿಕ್ಕಿಲ್ಲ. ಅಧಿಕಾರಿಗಳಿಂದ ಉತ್ತರ ಪಡೆಯಲಾಗದಿದ್ದ ಮೇಲೆ ಸಾಮಾನ್ಯ ಸಭೆ ಔಚಿತ್ಯ ಏನು?. ಸದಸ್ಯರು ಕೇಳಿದ ಪ್ರಶ್ನೆಗೆ ಉತ್ತರ ನೀಡದ ಅಧಿಕಾರಿಗಳ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ. ತಾಲೂಕು ಮಟ್ಟದ ಅಧಿಕಾರಿಗಳು ಸರಿಯಾದ ಉತ್ತರ ನೀಡದೆ ತಪ್ಪು ಮಾಹಿತಿ ನೀಡುತ್ತಿದ್ದು, ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಗೆ ಕರೆಸಲು ಸೂಚಿಸಿದರೂ ಏಕೆ ಕರೆಸಿಲ್ಲ ಎಂದು ಆಡಳಿತ ಪಕ್ಷದ ಸದಸ್ಯರಾದ ಮಹೇಂದ್ರ ಪೂಜಾರಿ ಪ್ರಶ್ನಿಸಿದರು.

ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಗೆ ಬರುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಆದರೆ ಗೈರಾಗಿದ್ದು, ಮುಂದಿನ ಸಭೆಗೆ ಕರೆಸಲಾಗುತ್ತದೆ ಎಂದು ಅಧ್ಯಕ್ಷೆ ಶ್ಯಾಮಲಾ ಕುಂದರ್ ನೀಡಿದ ಸಮಜಾಯಿಸಿ, ಸದಸ್ಯರಿಗೆ ತೃಪ್ತಿಯಾಗದೆ, ಕಳೆದ ಮೂರು ವರ್ಷದಿಂದ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲಾಗುತ್ತಿದೆ. ಇನ್ನೂ ಉತ್ತರ ಸಿಕ್ಕಿಲ್ಲ. ತಪ್ಪು ಮಾಡಿದ ಅಧಿಕಾರಿಗಳ ವಿರುದ್ಧ ಏನು ಕ್ರಮ ತೆಗೆದುಕೊಂಡಿದ್ದೀರಿ. ತಾಪಂನಲ್ಲಿ ಏನು ಕೆಲಸ ನಡೆಯುತ್ತಿದೆ ಎನ್ನೋದು ಗೊತ್ತಾಗುತ್ತಿಲ್ಲ. ಇದಕ್ಕೆಲ್ಲಾ ಆಡಳಿತ ವೈಪಲ್ಯವೇ ಕಾರಣ ಎಂದು ಜಗದೀಶ್ ದೇವಾಡಿಗ ಆರೋಪಿಸಿದರು.

ಸದಸ್ಯ ರಾಜು ದೇವಾಡಿಗ, ಸ್ಥಾಯಿ ಸಮಿತಿ ಸಭೆ ಕರೆದು ಸಭೆ ನಡೆಸದ ಬಗ್ಗೆ ಸದಸ್ಯ ರಾಜು ದೇವಾಡಿಗ ಆಕ್ರೋಶ ವ್ಯಕ್ತಪಡಿಸಿದರು. ನಮ್ಮಿಂದ ತಪ್ಪಾಗಿದೆ ಮುಂದೆ ಹೀಗಾಗೋದಲ್ಲಿ ಎಂದು ಅಧ್ಯಕ್ಷೆ ಶ್ಯಾಮಲಾ ಕುಂದರ್ ಭರವಸೆ ನೀಡಿದರು.
೯೪ಸಿ ಅಡಿ ಅರ್ಜಿ ಹಾಕಿದರೆ ಶ್ರೀಮಂತರಿಗೆ ಹಕ್ಕು ಪತ್ರ ಸಿಗುತ್ತದೆ. ಶ್ರೀಮಂತರಿಗೆ ಮಂಜೂರಾದ ಜಾಗದ ಸರ್ವೆನಂಬರ್‌ನಲ್ಲಿ ಅರ್ಜಿ ಹಾಕಿದ ಬಡವರಿಗೆ ಡೀಮ್ಡ್ ಫಾರೆಸ್ಟ್ ಎಂದು ಷರಾ ಬರೆಯುತ್ತೀರಿ. ೯೪ಸಿ ಅರ್ಜಿ ಶ್ರೀಮಂತರ ಹಣದ ತಾಕತ್ತಿನ ಮೇಲೆ ಮಂಜೂರಾಗುತ್ತಿದೆ. ಹಣ ಕೊಡಲಾಗದ ಬಡವರು ಅರ್ಜಿ ಹಾಕಿದರೂ ಮಂಜೂರಾಗುತ್ತಿಲ್ಲ. ೯೪ಸಿ ಶ್ರೀಮಂತರಿಗೆ ಮೀಸಲಾಗಿದೆಯೇ ಎಂದು ಮಾಜಿ ತಾಪಂ ಉಪಾಧ್ಯಕ್ಷ ಪ್ರಶ್ನಿಸಿದ್ದು, ಬೈಂದೂರು ತಹಸೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವ ಭರವಸೆ ನೀಡಿದರು.

ಹಸು ಕಳುವು ನಡೆದರೂ ಇಲಾಖೆಗೆ ಕ್ಯಾರೇ ಇಲ್ಲ:

ಬೈಂದೂರು ರಾಷ್ಟ್ರೀಯ ಹೆದ್ದಾರಿ ಕೂಗಳತೆ ದೂರದಲ್ಲಿ ಕೊಟ್ಟಿಗೆಯಲ್ಲಿದ್ದ ಹಸುಗಳ ಅಪಹರಿಸಲಾಗಿದ್ದು, ಪೊಲೀಸರ ಕ್ಷಿಪ್ರ ಕಾರ್‍ಯಾಚರಣೆಯಿಂದ ಮೂರು ಹಸುಗಳು ಸಿಕ್ಕಿವೆ. ಆದರೆ ಆರೋಪಿಗಳನ್ನಾಗಲೀ ವಾಹನವನ್ನಾಗಲೀ ಇನ್ನೂ ಏಕೆ ಜಪ್ತಿ ಮಾಡಿಲ್ಲ. ನಿರಂತರ ಹಸುಗಳ ಕಳವು ನಡೆಯುತ್ತಿದ್ದರೂ ಇಲಾಖೆ ಕ್ರಮಕ್ಕೆ ಹಿಂದೇಟು ಹಾಕುತ್ತಿದೆ. ಪೊಲೀಸರು ಅಲ್ಲಲ್ಲಿ ಚೆಕ್ ಪೋಸ್ಟ್ ಮೂಲಕ ವಾಹನಗಳ ತಹಾಸಣೆ ಮಾಡಬೇಕು. ಕತ್ತಿ, ಹಗ್ಗ, ಮೆಣಸಿನ ಪುಡಿ ಇಂಜಕ್ಷನ್ ಟ್ಯೂಬ್ ಇರುವ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಮಾಡಬೇಕು. ಹಸು ಕಳವು ಮಾಡಿದ ಆರೋಪಿಗಳ ತಕ್ಷಣ ಬಂಧಿಸಿ, ಮತ್ತೆ ಹಸು ಕಳವು ಆಗದಂತೆ ಪೊಲೀಸರು ಎಚ್ಚರ ವಹಿಸಬೇಕು ಎಂದು ಸದಸ್ಯ ಪುಷ್ಪರಾಜ್ ಶೆಟ್ಟಿ ಹೇಳಿದರು.

ಇದಕ್ಕೆ ಉತ್ತರಸಿದ ಡಿವೈಎಸ್ಪಿ ಬಿ.ಪಿ.ದಿನೇಶ್ ಕುಮಾರ್, ದನಗಳ್ಳರ ಪತ್ತೆಗೆ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿದೆ. ಅಪರಾಧಿಗಳು ಯಾರೆಂಬ ಮಾಹಿತಿ ಲಭ್ಯವಾಗಿದ್ದು, ಶೀಘ್ರದಲ್ಲಿ ಗೋಕಳ್ಳರ ಬಂಧಿಸಲಾಗುತ್ತದೆ. ಗೋಕಳವು ನಿಲ್ಲಿಸಲು ಸಾರ್ವಜನಿಕರು ಸಹಕಾರ ನೀಡಬೇಕು. ದನಗಳನ್ನು ಬೀದಿಯಲ್ಲಿ ಬಿಡದೆ, ಹೋರಿಗಳ ಅನಾಥವಾಗಿ ಮಾಡದೆ ಹಟ್ಟಿಯಲ್ಲಿ ಸಾಕುವ ವ್ಯವಸ್ಥೆ ಮಾಡಿದರೆ ಅರ್ಧ ಗೋಳವು ನಿಂತಂತೆ. ಪೊಲೀಸರೂ ಕೂಡಾ ಚೆಕ್ ಪೋಸ್ಟ್‌ನಲ್ಲಿ ಹದ್ದಿನಕಣ್ಣಿಟ್ಟು ತಪಾಸಣೆ ನಡೆಸುತ್ತಿದೆ ಎಂದು ಹೇಳಿದರು.

ವಿರೋಧ ಪಕ್ಷದ ಸದಸ್ಯರಾದ ಜ್ಯೋತಿ ಪುತ್ರನ್, ಜಗದೀಶ್ ದೇವಾಡಿಗ, ವಾಸುದೇವ ಪೈ, ರಾಜು ದೇವಾಡಿಗ, ಆಡಳಿತ ಪಕ್ಷದ ಮಹೇಂದ್ರ ಪೂಜಾರಿ, ಕರುಣ್ ಪೂಜಾರಿ, ಉಮೇಶ್ ಶೆಟ್ಟಿ ಕಲ್ಗದ್ದೆ, ಸುರೇಂದ್ರ ಖಾರ್ವಿ, ಚಂದ್ರಶೇಖರ ಶೆಟ್ಟಿ ಮಾತನಾಡಿದರು.
ಕುಂದಾಪುರ ತಾಪಂ ಅಧ್ಯಕ್ಷೆ ಶ್ಯಾಮಲಾ ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರಾಮ್ ಕಿಶನ್ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷ ನಾರಾಯಣ ಗುಜ್ಜಾಡಿ, ಡಿವೈಎಸ್ಪಿ ಬಿ.ಪಿ.ದಿನೇಶ್ ಕುಮಾರ್, ಬೈಂದೂರು ತಹಸೀಲ್ದಾರ್ ಬಸಪ್ಪ ಪೂಜಾರ್, ತಾಪಂ ಇಒ ಕಿರಣ್ ಆರ್.ಫೆಡ್ನೇರ್ ಇದ್ದರು.