ಕುಂದಾಪುರ: ನಾಡದೋಣಿ ಮೀನುಗಾರಿಕೆಗೆ ಮತ್ತೆ ಮರುಜೀವ, ಮೀನುಗಾರರ ಮೊಗದಲ್ಲಿ ಸಂತಸದ ಭಾವ

ಕುಂದಾಪುರ: ಲಾಕ್‌ಡೌನ್‌ನಿಂದಾಗಿ ಕಳೆದ ಇಪ್ಪತ್ತು ದಿನಗಳಿಗೂ ಅಧಿಕ ಸಂಪೂರ್ಣವಾಗಿ ಸ್ತಬ್ಧಗೊಂಡಿದ್ದ ನಾಡದೋಣಿ ಮೀನುಗಾರಿಕೆ ಮತ್ತೆ ಮರುಜೀವ ಪಡೆದುಕೊಂಡಿದೆ. ಸರ್ಕಾರದ ಸೂಚನೆ ಮೇರೆಗೆ ಭಾನುವಾರದಿಂದ ನಾಡದೋಣಿ ಮೀನುಗಾರರು ತಮ್ಮ ಸಾಂಪ್ರದಾಯಿಕ ಮೀನುಗಾರಿಕೆಯನ್ನು ಪ್ರಾರಂಭಿಸಿದ್ದಾರೆ.
ಕುಂದಾಪುರ, ಬಂದೂರು ಭಾಗದ ಕೋಡಿ, ಗಂಗೊಳ್ಳಿ, ಬೆಣ್ಗೆರೆ, ಮಡಿ, ಕಂಚುಗೋಡು, ಹೊಸಪೇಟೆ, ಮರವಂತೆ, ತ್ರಾಸಿ, ಕೊಡೇರಿ, ಮಡಿಕಲ್, ಅಳ್ವೆಗದ್ದೆ ಮೊದಲಾದೆಡೆಯ ಸಾವಿರಾರು ನಾಡದೋಣಿಗಳು ಕಡಲಿಗಿಳಿದು ಮೀನುಗಾರಿಕೆಯನ್ನು ಆರಂಭಿಸಿವೆ. ಹಲವು ದಿನಗಳಿಂದ ತಾಜಾ ಮೀನುಗಳು ಸಿಗದೆ ಹತಾಶೆಯಲ್ಲಿದ್ದ ಮತ್ಸ್ಯಪ್ರಿಯರಲ್ಲಿ ಇದೀಗ ಸಂತಸ ಮನೆಮಾಡಿದೆ. ಸರ್ಕಾರದ ಸೂಚನೆಯಂತೆಯೇ ನಾಡದೋಣಿಗಳು, ಪಾತಿ ದೋಣಿಗಳಲ್ಲಿ ೪-೫ ಮಂದಿಯಷ್ಟೇ ಸೇರಿ ಬೆಳಗ್ಗೆ ನಸುಕಿನ ಜಾವ ೪ ಗಂಟೆಗೆ ಮೀನುಗಾರಿಕೆಗೆ ತೆರಳಿದ್ದು, ೯ ಗಂಟೆ ಸುಮಾರಿಗೆ ಮರಳಿ ಬಂದಿದ್ದಾರೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಎಲ್ಲಾ ಬಂದರುಗಳಲ್ಲಿ ಮೀನು ಮಾರಾಟವನ್ನು ನಿಷೇಧಿಸಿದ ಪರಿಣಾಮ ಎಲ್ಲ ಸ್ಥಳೀಯ ಮೀನು ಮಾರುಕಟ್ಟೆಗಳಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ಮೂಲಕ ಹಿಡಿದ ಮೀನುಗಳನ್ನು ಮಾರಾಟ ಮಾಡಲಾಗುತ್ತಿದೆ. ಆದರೆ ಕೆಲ ದಿನಗಳ ಹಿಂದೆ ಮೀನಿನ ಕೊರತೆಯಿಂದಾಗಿ ಏಕಾಏಕಿ ದರದಲ್ಲಿ ಏರಿಕೆಯಾಗಿದ್ದು, ಈಗ ಸ್ವಲ್ಪ ಮಟ್ಟಿಗೆ ಇಳಿಮುಖಗೊಂಡಿದೆ.

ಬಹಳ ದಿನದ ಬಳಿಕ ಮೀನುಗಾರಿಕೆ ನಡೆದರೂ, ನಿರೀಕ್ಷೆಯಷ್ಟು ಮಾತ್ರ ಮೀನು ಸಿಕ್ಕಿಲ್ಲ. ಒಂದೊಂದು ದೋಣಿಗಳಿಗೆ ೨-೩ ಬುಟ್ಟಿಗಳು, ಕೆಲ ದೋಣಿಗಳಿಗೆ ಮಾತ್ರ ೩-೪ ಬುಟ್ಟಿಗಳು ಸಿಕ್ಕಿವೆ. ನಷ್ಟವೂ ಇಲ್ಲ. ಅಲ್ಲಿಂದಲ್ಲಿಗೆ ಆಗಬಹುದು.

–ನಾಗರಾಜ ಖಾರ್ವಿ, ಬೆಣ್ಗೆರೆ ನಿವಾಸಿ