HomeTrendingಕ್ವಾರಂಟೈನ್ ನಲ್ಲಿರುವವರಿಗೆ ಖೈದಿಗಳಿಗೆ ಕೊಡುವ ಹಾಗೆ ಊಟ ಕೊಡುವುದಲ್ಲ: ಅಧಿಕಾರಿಗಳಿಗೆ ಹಾಲಾಡಿ ಶ್ರೀನಿವಾಸ ಶೆಟ್ಟಿ ತಾಕೀತು

ಕ್ವಾರಂಟೈನ್ ನಲ್ಲಿರುವವರಿಗೆ ಖೈದಿಗಳಿಗೆ ಕೊಡುವ ಹಾಗೆ ಊಟ ಕೊಡುವುದಲ್ಲ: ಅಧಿಕಾರಿಗಳಿಗೆ ಹಾಲಾಡಿ ಶ್ರೀನಿವಾಸ ಶೆಟ್ಟಿ ತಾಕೀತು

ಕುಂದಾಪುರ: ಕ್ವಾರಂಟೈನ್ ಕೇಂದ್ರಗಳಲ್ಲಿ ಊಟ, ಉಪಹಾರ ಸರಿಯಾದ ಸಮಯಕ್ಕೆ ಪೂರೈಕೆಯಾಗುತ್ತಿಲ್ಲ. ನನ್ನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಕ್ವಾರಂಟೈನ್ ಕೇಂದ್ರಗಳು ಸಂಪೂರ್ಣ ಅವ್ಯವಸ್ಥೆಯ ಆಗರವಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಕ್ವಾರಂಟೈನ್ ಕೇಂದ್ರಗಳಲ್ಲಿರುವವರ್ಯಾರು ರೋಗಿಗಳಲ್ಲ. ಅವರೂ ನಮ್ಮಂತೆಯೇ ಮನುಷ್ಯರು. ಖೈದಿಗಳಿಗೆ ಕೊಡುವ ಹಾಗೆ ಊಟವನ್ನು ಕೊಡಬೇಡಿ. ಅವರನ್ನೂ ಮನುಷ್ಯರನ್ನಾಗಿ ನೋಡಿ ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಅವರು ಶುಕ್ರವಾರ ಬೆಳಿಗ್ಗೆ ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ವಿವಿಧ ಪಕ್ಷಗಳ ಮುಖಂಡರೊಂದಿಗೆ ನಡೆಸಿದ ತುರ್ತು ಸಭೆಯಲ್ಲಿ ಮಾತನಾಡಿದರು. ಕ್ವಾರಂಟೈನ್ ಅವ್ಯವಸ್ಥೆಯ ಬಗ್ಗೆ ಸ್ಥಳೀಯ ಗ್ರಾ.ಪಂ ಗಳಲ್ಲಿ ತುರ್ತು ಸಭೆ ಕರೆಯಿರಿ ಎಂದು ಸೂಚನೆ ನೀಡದ ಅವರು, ಇದು ರಾಷ್ಟ್ರೀಯ ವಿಪತ್ತಾಗಿರುವುದರಿಂದ ಪಕ್ಷಭೇದ ಮರೆತು ಎಲ್ಲರೂ ಸಹಕಾರವನ್ನು ಕೊಡಬೇಕು ಎಂದು ಹಾಲಾಡಿ ಮನವಿ ಮಾಡಿಕೊಂಡರು.

ಕುಂದಾಪುರ ಕ್ಷೇತ್ರ ವ್ಯಾಪ್ತಿಯ ಒಂಭತ್ತು ಕ್ವಾರಂಟೈನ್ ಸೆಂಟರ್‍ಗಳಿಗೆ ಈಗಾಗಲೇ ದೇವಸ್ಥಾನದ ಊಟ ಪೂರೈಕೆಯಾಗುತ್ತಿದೆ. ಒಂಭತ್ತು ಸೆಂಟರ್‍ಗಳಿಗೂ ಎರಡೇ ವಾಹನದಿಂದ ಊಟ ಸಾಗಾಟವಾಗುತ್ತಿರುವುದರಿಂದ ಕೆಲ ಕೇಂದ್ರಗಳಿಗೆ ಸರಿಯಾದ ಸಮಯದಲ್ಲಿ ಊಟ ಪೂರೈಸಲು ಸಾಧ್ಯವಾಗುತ್ತಿಲ್ಲ. ಇದರ ಬಗ್ಗೆ ಸಭೆಯಲ್ಲಿರುವವರ ಅಭಿಪ್ರಾಯಗಳನ್ನು ಕ್ರೋಢಿಕರಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದರು.

ಹೈಸ್ಕೂಲುಗಳಲ್ಲಿ ಕ್ವಾರಂಟೈನ್ ಕೇಂದ್ರ, ಅಲ್ಲಿಯೇ ಊಟ ತಯಾರಿ:
ಕ್ಷೇತ್ರ ವ್ಯಾಪ್ತಿಯಲ್ಲಿನ ಎಲ್ಲಾ ಪ್ರೌಢ ಶಾಲೆಗಳಲ್ಲಿ ಕ್ವಾರಂಟೈನ್ ಕೇಂದ್ರಗಳನ್ನು ಪ್ರಾರಂಭಿಸಿ ಅಲ್ಲಿಯೇ ಊಟವನ್ನು ತಯಾರಿಸಿದರೆ ಸಮಸ್ಯೆ ಬಗೆಹರಿಯುತ್ತದೆ. ಹೈಸ್ಕೂಲ್‍ಗಳಲ್ಲಿ ಮೂಲಭೂತ ಸೌಕರ್ಯಗಳಿಗೆ ಕೊರತೆ ಇಲ್ಲ. ಶಾಲಾ ಆವರಣ, ಶೌಚಾಲಯ, ನೀರು, ಅಕ್ಷರದಾಸೋಹ ಕೊಠಡಿಗಳೆಲ್ಲವೂ ವ್ಯವಸ್ಥಿತವಾಗಿರುತ್ತದೆ.

ಅಲ್ಲದೇ ಬಹುತೇಕ ಹೈಸ್ಕೂಲ್‍ಗಳು ಜನವಸತಿ ಪ್ರದೇಶದಿಂದ ದೂರ ಇರುವುದರಿಂದ ಪ್ರೌಢಶಾಲೆಗಳಲ್ಲೇ ಕ್ವಾರಂಟೈನ್ ಕೇಂದ್ರಗಳನ್ನು ಪ್ರಾರಂಭಿಸಿ ದಾನಿಗಳಿಂದ ದಿನಸಿ ವಸ್ತುಗಳನ್ನು ಪಡೆದು ಅಲ್ಲಿಯೇ ಆಹಾರ ತಯಾರಿಸಿ ಕೊಟ್ಟರೆ ಸರಿಯಾದ ಸಮಯಕ್ಕೆ ಊಟ ಕಲ್ಪಿಸಲು ಸಾಧ್ಯ ಎಂಬ ಅಭಿಪ್ರಾಯಗಳು ಕೇಳಿಬಂದವು.

ಗ್ರಾಮ ಮಟ್ಟದಲ್ಲಿ ಸಮಿತಿ ರಚನೆ:
ಪ್ರೌಢ ಶಾಲೆಯಲ್ಲೇ ಊಟ ತಯಾರಿಸುವ ಬಗ್ಗೆ ಪ್ರಕ್ರಿಯಿಸಿದ ಶಾಸಕ ಹಾಲಾಡಿ, ಪಂಚಾಯಿತಿ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳನ್ನು ವಿಶ್ವಾಸಕ್ಕೆ ಪಡೆದುಕೊಂಡು ಈ ಕೆಲಸ ಮಾಡಬೇಕಿದೆ.

ಕ್ವಾರಂಟೈನ್ ಕೇಂದ್ರ ಹಾಗೂ ಅಡುಗೆ ಮನೆಗೆ ತಡೆಬೇಲಿ ಹಾಕಬೇಕು. ಶೀಘ್ರವೇ ಈ ಬಗ್ಗೆ ಗ್ರಾಮ ಮಟ್ಟದಲ್ಲಿ ಸಭೆ ಕರೆದು ಎಲ್ಲರನ್ನೂ ಸೇರಿಸಿ ಪಕ್ಷ ಭೇದ ಮರೆತು ಸಮಿತಿ ರಚನೆ ಮಾಡಬೇಕು. ನಾಳೆ ಏನಾದರೂ ತೊಂದರೆಗಳಾದರೆ ಆ ಸಮಿತಿಯೇ ಅದರ ನೇರ ಹೊಣೆ ಹೊರಬೇಕು. ಹೀಗಾದರೆ ಮಾತ್ರ ಮುಕ್ಕಾಲು ಸಮಸ್ಯೆ ಬಗೆಹರಿದಂತೆ ಆಗುತ್ತದೆ ಎಂದರು.

ಕ್ವಾರಂಟೈನ್ ವಿರೋಧಿಸುವವರ ಮೇಲೆ ಕ್ರಮ ಕೈಗೊಳ್ಳಿ:
ಈಗಾಗಲೇ ಕೆಲ ಕ್ವಾರಂಟೈನ್ ಕೇಂದ್ರಗಳನ್ನು ಆರಂಭಿಸುವಾಗ ವಿರೋಧಗಳು ಕೇಳಿಬಂದಿವೆ ಎಂಬ ಕಂದಾಯ ಅಧಿಕಾರಿ ಭರತ್ ಶೆಟ್ಟಿಯವರ ಮಾತಿಗೆ ಪ್ರತಿಕ್ರಿಸಿದ ಶಾಸಕರು, ಕ್ವಾರಂಟೈನ್ ವಿರೋಧಿಸುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ. ಈಗಾಗಲೇ ಕೊರೋನಾ ಸೈನಿಕರ ಮೇಲೆ ಹಲ್ಲೆ ನಡೆಸಿದವರಿಗೆ, ಕ್ವಾರಂಟೈನ್ ಸೆಂಟರ್‍ಗಳನ್ನು ವಿರೋಧಿಸುವವರಿಗೆ ವಿಶೇಷ ಕಾನೂನನ್ನು ತರಲಾಗಿದೆ. ಯಾರು ಅಡ್ಡಿ ಬರುತ್ತಾರೊ ಅಂತವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ ಎಂದು ಶೀನಿವಾಸ ಶೆಟ್ಟಿ ಸೂಚನೆ ನೀಡಿದರು.

ಊಟ ಪೂರೈಕೆಗೆ ಎರಡು ವಾಹನ ನೀಡುತ್ತೇನೆ: ಶಾಸಕ ಹಾಲಾಡಿ
ವಾಹನಗಳಿಲ್ಲದೇ ಊಟ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದ್ದು, ಊಟ ಪೂರೈಕೆಯಲ್ಲಿ ಸಮಸ್ಯೆಯಾಗಬಾರದೆಂಬ ನಿಟ್ಟಿನಲ್ಲಿ ಗ್ರಾ.ಪಂ ಮಟ್ಟದಲ್ಲಿ ಸಮಿತಿ ರಚಿಸುವ ತನಕವೂ ಎರಡು ವಾಹನಗಳನ್ನು ನಾನು ನೀಡುತ್ತೇನೆ ಎಂದು ಶಾಸಕ ಹಾಲಾಡಿ ಹೇಳಿದರು. ಸಭೆಯಲ್ಲಿದ್ದ ಕಾಂಗ್ರೆಸ್ ಮುಖಂಡ ಮಲ್ಯಾಡಿ ಶಿವರಾಮ ಶೆಟ್ಟಿ ಹಾಗೂ ಬಿಜೆಪಿ ಮುಖಂಡ ಕಿರಣ್ ಕೊಡ್ಗಿ ಶಾಸಕರ ಮಾತಿಗೆ ದ್ವನಿಗೂಡಿಸಿ ತಮ್ಮ ಕಡೆಯಿಂದಲೂ ತಲಾ ಒಂದೊಂದು ವಾಹನ ನೀಡುವುದಾಗಿ ಭರವಸೆ ನೀಡಿದರು.

ಸೆಂಟರ್‍ಗಳಿಗೆ ಆಗಾಗೆ ಬರುವಂತಿಲ್ಲ, ವಿಶೇಷ ಊಟ ತಯಾರಿಸಿಕೊಡುವಂತಿಲ್ಲ:
ಕ್ವಾರಂಟೈನ್ ಸೆಂಟರ್‍ನಲ್ಲಿರುವವರ ಕುಟುಂಬಿಕರು ಅವರನ್ನು ಭೇಟಿಯಾಗಲು ಸೆಂಟರ್‍ಗಳಿಗೆ ಆಗಾಗೆ ಬರುವಂತಿಲ್ಲ. ವಿಶೇಷವಾಗಿ ಅಡುಗೆ ತಯಾರಿಸಿಯೂ ಕೊಡುವಂತಿಲ್ಲ. ಏನಾದರೂ ವಸ್ತುಗಳನ್ನು ಕೊಡುವುದಿದ್ದರೆ ಒಮ್ಮೆಯೇ ಆವರಣದ ಹೊರಗಿನಿಂದಲೇ ಪೊಲೀಸ್ ಸಿಬ್ಬಂದಿಗಳು ಅಥವಾ ಸ್ಥಳದಲ್ಲಿ ನಿಯೋಜನೆಗೊಂಡಿದ್ದ ಸಿಬ್ಬಂದಿಗಳ ಸಮ್ಮುಖವೇ ಕೊಟ್ಟು ಹೋಗಬಹುದು. ವಸ್ತುಗಳನ್ನು ಕೊಡುವಾಗ ಮತ್ತೆ ಅವರಿಂದ ವಾಪಾಸ್ ಪಡೆದುಕೊಳ್ಳುವಾಗ ಸೋಪಿನಿಂದ ತೊಳೆದು ಕೊಡಬೇಕು ಎಂದು ಎಎಸ್‍ಪಿ ಹರಿರಾಮ್ ಶಂಕರ್ ಮಾಹಿತಿ ನೀಡಿದರು.

ಸಭೆಯಲ್ಲಿ ಕುಂದಾಪುರ ತಹಸೀಲ್ದಾರ್ ತಿಪ್ಪೇಸ್ವಾಮಿ, ಬ್ರಹ್ಮಾವರ ತಹಸೀಲ್ದಾರ್ ಕಿರಣ್ ಗೌರಯ್ಯ, ಎಎಸ್ಪಿ ಹರಿರಾಮ್ ಶಂಕರ್ ಇದ್ದರು.

ವಿವಿಧ ಇಲಾಖೆಯ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು, ಕಾಂಗ್ರೆಸ್ ಮುಖಂಡರಾದ ಮಲ್ಯಾಡಿ ಶಿವರಾಮ್ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಬಿಜೆಪಿ ಮುಖಂಡರಾದ ಕಿರಣ್ ಕೊಡ್ಗಿ, ಶಂಕರ್ ಅಂಕದಕಟ್ಟೆ, ಕಾಡೂರು ಸುರೇಶ್ ಶೆಟ್ಟಿ, ಸದಾನಂದ ಬಳ್ಕೂರು, ಗುಣರತ್ನ, ಭಾಸ್ಕರ ಬಿಲ್ಲವ ಮೊದಲಾದವರು ತಮ್ಮ ತಮ್ಮ ಅಭಿಪ್ರಾಯಗಳನ್ನು ಸಭೆಯ ಮುಂದಿಟ್ಟರು.

error: Content is protected !!