ಕುಂದಾಪುರ: ಮೀನು ಸಾಗಾಟದ ಲಾರಿ ಚಾಲಕರು ಸಾರ್ವಜನಿಕರಿಂದ ದಿನನಿತ್ಯ ಹಲ್ಲೆಗೊಳಗಾಗುತ್ತಿದ್ದಾರೆ. ಸಾರ್ವಜನಿಕರಿಗೆ ಬೇಕಂತಲೇ ತೊಂದರೆ ಕೊಡುವ ಉದ್ದೇಶ ನಮಗಿಲ್ಲ. ಕಾರವಾರದಿಂದ ಮಂಗಳೂರಿನ ತನಕ ಅಲ್ಲಲ್ಲಿ ನಮಗೆ ಮೀನಿನ ಮಲೀನ ನೀರನ್ನು ಬಿಡಲು ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡಿಕೊಡಲಿ ಎಂದು ಲಾರಿ ಚಾಲಕರ ಸಂಘದ ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಹನೀಫ್ ಹೇಳಿದ್ದಾರೆ.
ಬುಧವಾರ ಸಂಜೆ ಕುಂದಾಪುರದ ಪ್ರೆಸ್ಕ್ಲಬ್ನಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೀನುಗಾರಿಕೆಯಿಂದ ಸರ್ಕಾರಕ್ಕೆ ಸಾಕಷ್ಟು ಆದಾಯವಿದೆ. ಲಾರಿಯಿಂದ ಮೀನಿನ ನೀರು ರಸ್ತೆ ಮೇಲೆ ಹರಿಯುವುದರಿಂದ ಸಾರ್ವಜನಿಕರು ಸಿಟ್ಟಾಗಿ ಲಾರಿ ಚಾಲಕರ ಮೇಳೆ ಹಲ್ಲೆ ನಡೆಸುತ್ತಿದ್ದಾರೆ. ಮೀನು ಸಾಗಣೆಯ ಲಾರಿಗಳಲ್ಲಿ ಕರಗಿದ ಮಂಜುಗಡ್ಡೆಯ ನೀರು ಸಂಗ್ರಹವಾಗಲು ೪೦೦ಲೀ ಟ್ಯಾಂಕ್ ಅನ್ನು ಅಳವಡಿಸಲಾಗಿದೆ. ಆದರೆ ಒಂದು ಗಂಟೆಗಳೊಳಗೆ ಟ್ಯಾಂಕಿ ತುಂಬಿ ಅದರಿಂದ ಹೊರಬರುವ ನೀರು ರಸ್ತೆಗೆ ಚೆಲ್ಲುತ್ತದೆ.
ಸರ್ಕಾರ ಅಲ್ಲಲ್ಲಿ ವಾಸನೆಯುಕ್ತ ನೀರು ಬಿಡಲು ವ್ಯವಸ್ಥೆ ಮಾಡಿಕೊಟ್ಟರೆ ಸಮಸ್ಯೆ ಬಗೆಹರಿಯುತ್ತದೆ. ಈ ಬಗ್ಗೆ ಕಾರವಾರ ಹಾಗೂ ಉಡುಪಿ ಜಿಲ್ಲಾಧಿಕಾರಿಯವರ ಗಮನ ಸೆಳೆದಿದ್ದೇವೆ. ಸರ್ಕಾರ ಸೂಕ್ತ ವ್ಯವಸ್ಥೆ ಮಾಡಿಕೊಟ್ಟ ಬಳಿಕವೂ ಚಾಲಕರು ಪೈಪ್ ಮೂಲಕ ರಸ್ತೆ ಮೇಲೆ ನೀರು ಬಿಟ್ಟರೆ ಅಂತಹ ಲಾರಿಗಳ ಲೈಸನ್ಸ್ ಅನ್ನೇ ರದ್ದುಗೊಳಿಸಲಿ. ಕಾರವಾರ, ಉಡುಪಿ, ಮಂಗಳೂರು ಮೂರು ಜಿಲ್ಲೆಗಳಲ್ಲಿ ವಾಸನೆಯುಕ್ತ ಮಲೀನ ನೀರನ್ನು ಬಿಡಲು ಅವಕಾಶ ಮಾಡಿಕೊಡದಿದ್ದಲ್ಲಿ ಲಾರಿ ಚಾಲಕರ ಸಂಘದಿಂದ ತೀವ್ರ ಸ್ವರೂಪರ ಹೋರಾಟವನ್ನು ಕೈಗೊಳ್ಳುತ್ತೇವೆ ಎಂದು ಅವರು ಹೇಳಿದರು.
ಕೇರಳಾ, ಗೋವಾ ರಾಜ್ಯಗಳಲ್ಲಿ ಬಹಳ ಹತ್ತಿರದಲ್ಲಿ ಫಿಶ್ ಮಾರ್ಕೆಟ್ಗಳು ಇರುವುದುರಿಂದ ಅಲ್ಲಿ ಅಂತಹ ಸಮಸ್ಯೆಗಳು ಬರುವುದಿಲ್ಲ. ಲಾರಿ ಚಾಲಕರು ಮಾರ್ಕೆಟ್ನಲ್ಲಿಯೇ ನೀರನ್ನು ಬಿಟ್ಟು ಮುಂದೆ ಸಾಗುತ್ತಾರೆ. ಇಲ್ಲಿ ಸಾಕಷ್ಟು ದೂರದಲ್ಲಿ ಮಾರ್ಕೆಟ್ಗಳಿರುವುದುರಿಂದ ಸಮಸ್ಯೆ ಉದ್ಭವಿಸಿದೆ. ಕಾರವಾರದಿಂದ ಮಂಗಳೂರಿನ ತನಕವೂ ಚಾಲಕರಿಗೆ ಹಲ್ಲೆಗಳು ನಡೆಯುತ್ತಿವೆ. ಹಲ್ಲೆಗೊಳಗಾಗಿರುವ ಕೆಲ ಚಾಲಕರು ಚಾಲಕ ವೃತ್ತಿಯನ್ನೇ ಬಿಟ್ಟಿದ್ದಾರೆ. ಚಾಲಕರ ಕುಟುಂಬಗಳು ಬೀದಿಗೆ ಬಿದ್ದಿವೆ. ಮೀನು ಲಾರಿ ಚಾಲಕರಿಗೆ ಸೂಕ್ತ ರಕ್ಷಣೆ ಒದಗಿಸಲು ಈಗಾಗಲೇ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಮನವಿ ನೀಡಿದ್ದೇವೆ ಎಂದರು.
ಲಾರಿ ಮಾಲಕರಿಗೆ ಕೊಂಚವೂ ಕನಿಕರ ಇಲ್ಲ:
ಹತ್ತು ಸಾವಿರ ರೂಪಾಯಿಗೆ ಹಗಲು ರಾತ್ರಿಯೆನ್ನದೇ ದಿನದ ಇಪ್ಪತ್ತನಾಲ್ಕು ಗಂಟೆಯೂ ದುಡಿಯುತ್ತೇನೆ. ಸಾರ್ವಜನಿಕರಿಂದ ತೊಂದರೆ, ಹಲ್ಲೆಗಳಾದರೆ ನಮ್ಮ ನೆರವಿಗೆ ಮಾಲಕರು ಬರುವುದಿಲ್ಲ. ಅವರಿಗೆ ನಮ್ಮ ಮೇಲೆ ಕೊಂಚವೂ ಕನಿಕರ ಇಲ್ಲ. ಮೀನು ವ್ಯಾಪಾರಿಗಳಿಗೂ ಕರುಣೆ ಇಲ್ಲ. ಅವರ ಸ್ವಾರ್ಥಕ್ಕೆ ನಾವು ಬಲಿಪಶುಗಳಾಗುತ್ತಿದ್ದೇವೆ ಎಂದು ಹನೀಫ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕರಾವಳಿ ಲಾರಿ ಚಾಲಕರ ಸಂಘದ ಕಾರ್ಯದರ್ಶಿ ಸಲೀಂ, ರಾಜೇಶ್ ಇದ್ದರು.