ಕುಂದಾಪುರ: ಕೊರೋನಾ ಮಹಾಮಾರಿಯಿಂದಾಗಿ ಯಾರೂ ಕೂಡ ನೆಮ್ಮದಿಯಿಂದ ನಿದ್ದೆಮಾಡುತ್ತಿಲ್ಲ. ನಮ್ಮನ್ನೂ ಸೇರಿದಂತೆ ನೀವೆಲ್ಲರೂ ಶ್ರಮವಹಿಸಿ ದುಡಿಯುತ್ತಿದ್ದೀರಿ. ಅಧಿಕಾರಿಗಳು ಕೆಲಸ ಸರಿಯಾಗಿ ನಿರ್ವಹಿಸುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ದಿನನಿತ್ಯ ನನಗೆ ಸಾವಿರಾರು ಕರೆಗಳು ಬರುತ್ತಿವೆ. ಈ ವೇಗದಲ್ಲಿ ಹೋದರೆ ಏನು ಕೆಲಸವಾಗಲಿಕ್ಕಿಲ್ಲ. ಯುದ್ದ ಎದುರಿಸಿದ ಹಾಗೆ ಕೆಲಸ ಮಾಡಿ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಚಾಟಿ ಬೀಸಿದ್ದಾರೆ.
ಎರಡು ದಿನಗಳ ಹಿಂದೆ ಕುಂದಾಪುರ, ಬೈಂದೂರು ಕ್ವಾರಂಟೈನ್ ಸೆಂಟರ್ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಕೋಟ ಶ್ರೀನಿವಾಸ ಪೂಜಾರಿಯವರು ಕ್ವಾರಂಟೈನ್ ಸೆಂಟರ್ಗಳಲ್ಲಿನ ಅವ್ಯವಸ್ಥೆಗಳನ್ನು ಸರಿಪಡಿಸುವ ಬಗ್ಗೆ ಮಂಗಳವಾರ ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.
ಕ್ವಾರಂಟೈನ್ ಕೇಂದ್ರಗಳಿಗೆ ಬಂದವರ ಗಂಟಲು ದ್ರವಗಳನ್ನು ಕೂಡಲೇ ತೆಗೆದು ಪರೀಕ್ಷೆ ಕಳುಹಿಸುತ್ತಿಲ್ಲ ಎನ್ನುವ ಕುರಿತು ದೂರುಗಳಿವೆ. ಸರ್ಕಾರಿ ಕ್ವಾರಂಟೈನ್ ಕೇಂದ್ರಗಳ ವ್ಯಾಪ್ತಿಯಲ್ಲಿ ಬರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯರು ಕೇಂದ್ರಗಳಿಗೆ ಭೇಟಿ ನೀಡಿ ಸಲಹೆ ಸೂಚನೆ ನೀಡುವುದರಿಂದ ವ್ಯವಸ್ಥಿತವಾಗಿ ನಡೆಯಲು ಸಾಧ್ಯವಾಗುತ್ತದೆ. ಕ್ವಾರಂಟೈನ್ ಕೇಂದ್ರಗಳಿಗಾಗಿ ಖಾಸಗಿ ಕಟ್ಟಡ ಹಾಗೂ ವಾಹನಗಳನ್ನು ಪಡೆದುಕೊಳ್ಳಲು ಅವಕಾಶವಿದೆ. ಕ್ವಾರಂಟೈನ್ ಕೇಂದ್ರಗಳಲ್ಲಿ ಸ್ವಚ್ಛತಾ ಕಾರ್ಯಗಳು ಅಸಮರ್ಪಕವಾಗುತ್ತಿದೆ ಎನ್ನುವ ದೂರುಗಳಿದ್ದು, ಸಂಬಂಧಿಸಿದ ಅಧಿಕಾರಿಗಳ ಗಮನ ಹರಿಸಬೇಕು. ದೇಶವೇ ಅತ್ಯಂತ ಕ್ಲಿಷ್ಟಕರ ಸನ್ನಿವೇಶವನ್ನು ಎದುರಿಸುತ್ತಿದ್ದು, ಎಲ್ಲರೂ ಒತ್ತಡದಲ್ಲಿಯೇ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ. ಆದರೆ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದಲ್ಲಿ ಯಾರಿಗೂ ರಿಯಾಯಿತಿ ನೀಡುವುದಿಲ್ಲ ಎಂದು ಸಚಿವ ಕೋಟ ಅಧೀಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ ಹಾಗೂ ಡಾ.ಕೆ.ಪ್ರೇಮಾನಂದ ಮಾತನಾಡಿ, ಕುಂದಾಪುರ ಹಾಗೂ ಬೈಂದೂರು ತಾಲೂಕಿನ 62 ಕೇಂದ್ರಗಳಲ್ಲಿ 3,982 ಮಂದಿ ಕ್ವಾರಂಟೈನ್ಗೆ ಒಳಗಾಗಿದ್ದಾರೆ. 487 ಜನರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಕರಾವಳಿಯ 3 ಜಿಲ್ಲೆಗಳಿಗೆ ಹೊಂದಿಕೊಂಡಂತೆ ಒಂದೇ ಪರೀಕ್ಷಾ ಕೇಂದ್ರ ಇರುವುದರಿಂದಾಗಿ ಶೀಘ್ರ ಪರೀಕ್ಷೆ ಹಾಗೂ ವರದಿ ವಿಳಂಭವಾಗುತ್ತಿದೆ. ಜಿಲ್ಲೆಯಲ್ಲಿ ಈವರೆಗೆ 1918 ವರದಿಗಳು ಬಂದಿದ್ದು, 542 ಮಂದಿಯ ವರದಿ ಬರಲು ಬಾಕಿ ಇದೆ. ಪ್ರಸ್ತುತ ಪರಿಸ್ಥಿತಿಯನ್ನು ನಿಭಾಯಿಸಲು ಆರೋಗ್ಯ ಇಲಾಖೆಯಲ್ಲಿ ತಜ್ಞ ಹಾಗೂ ತರಬೇತಿ ಹೊಂದಿದ ಸಿಬ್ಬಂದಿಗಳ ಕೊರತೆ ಇರುವುದರಿಂದ ಪರೀಕ್ಷಾ ಕಾರ್ಯ ವಿಳಂಭವಾಗುತ್ತಿದೆ ಎಂದರು.
ಕ್ವಾರಂಟೈನ್ ಕೇಂದ್ರಗಳಿಗೆ ತುರ್ತು ಅವಶ್ಯಕ ಆಹಾರ ವಸ್ತುಗಳನ್ನು ಖರೀದಿ ಮಾಡಿದಲ್ಲಿ ಅದರ ವೆಚ್ಚವನ್ನು ಜಿಲ್ಲಾಡಳಿತದಿಂದ ಭರಿಸಲಾಗುವುದು. ಕೇಂದ್ರಗಳಲ್ಲಿ ಇರುವ ಮಕ್ಕಳಿಗೆ ಅವಶ್ಯಕವಾಗಿರುವ ಹಾಲುಗಳನ್ನು ಸ್ಥಳೀಯ ಅಂಗನವಾಡಿ ಕೇಂದ್ರಗಳ ಸಹಕಾರದಿಂದ ನೀಡಲು ವ್ಯವಸ್ಥೆ ಮಾಡಲಾಗುವುದು ಇದರ ವೆಚ್ಚವನ್ನು ಜಿಲ್ಲಾಡಳಿತ ಭರಿಸಲಿದೆ. ಮಕ್ಕಳ ಹಾಗೂ ಗರ್ಭಿಣಿಯರ ಪರೀಕ್ಷಾ ವರದಿ ನೆಗಟಿವ್ ಬಂದಲ್ಲಿ ಅವರನ್ನು ಹೋಂ ಕ್ವಾರಂಟೈನ್ಗಾಗಿ ಬಿಡುಗಡೆ ಮಾಡಲಾಗುವುದು. ಮುಖ್ಯಮಂತ್ರಿಗಳ ಸೂಚನೆಯಂತೆ ತಾತ್ಕಾಲಿಕವಾಗಿ ಸೇವಾ ಸಿಂಧು ಆಪ್ ಬಂದ್ ಆಗಿರುವುದರಿಂದ ಅಕ್ರಮವಾಗಿ ಹೊರ ರಾಜ್ಯದಿಂದ ಬರುವವರ ಮೇಲೆ ನಿಗಾ ವಹಿಸಲಾಗುವುದು ಎಂದು ಸಚಿವರು ತಿಳಿಸಿದರು.
ಕುಂದಾಪುರ ಉಪವಿಭಾಗಾಧಿಕಾರಿ ಕೆ.ರಾಜು, ಎಎಸ್ಪಿ ಹರಿರಾಂಶಂಕರ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಾಬು ಹೆಗ್ಡೆ ತಗ್ಗರ್ಸೆ, ಗೌರಿ ದೇವಾಡಿಗ, ತಾಲೂಕು ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ ಕುಂದರ್, ಉಪಾಧ್ಯಕ್ಷ ರಾಮ್ಕಿಶನ್ ಹೆಗ್ಡೆ, ಸದಸ್ಯರಾದ ಪ್ರವೀಣ್ ಕುಮಾರ ಶೆಟ್ಟಿ ಕಡ್ಕೆ, ಕರಣ್ ಪೂಜಾರಿ, ಕಾರ್ಯನಿರ್ವಹಣಾಧಿಕಾರಿಗಳಾದ ಕೇಶವ್ ಶೆಟ್ಟಿಗಾರ್, ಭಾರತಿ, ತಹಶೀಲ್ದಾರ್ಗಳಾದ ತಿಪ್ಪೇಸ್ವಾಮಿ, ಬಿ.ಪಿ.ಪೂಜಾರ್, ಸರ್ಕಲ್ ಇನ್ಸ್ಪೆಕ್ಟರ್ಗಳಾದ ಗೋಪಿಕೃಷ್ಣ, ಸುರೇಶ್ ನಾಯಕ್, ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಇದ್ದರು.
ಈಗಾಗಲೇ ಅನುಮತಿ ಪಡೆದುಕೊಂಡಿರುವವರು ಹಾಗೂ ನಿಶ್ಚಯ ಮಾಡಿರುವವರು ಭಾನುವಾರದಂದು ಮದುವೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೆ. ಸರ್ಕಾರಿ ನಿಯಮಗಳಿಗೆ ತೊಡಕುಂಟಾಗದಂತೆ ಸ್ವಯಂ ನಿಯಂತ್ರಣವನ್ನು ಹಾಕಿಕೊಂಡು ಕಾರ್ಯಕ್ರಮ ಮುಗಿಸುವುದು ಒಳ್ಳೆಯದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಕ್ವಾರಂಟೈನ್ ಕೇಂದ್ರಗಳಲ್ಲಿನ ವ್ಯವಸ್ಥೆಗಳು ಸರಿಯಾಗಿ ನಡೆಯಲು ಪ್ರತಿ ಕೇಂದ್ರಗಳಿಗೂ ಒಬ್ಬರಂತೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಬೇಕು. ಕಂದಾಯ ಇಲಾಖೆಯಲ್ಲಿ ಅಧಿಕಾರಿಗಳ ಕೊರತೆಯಾದಲ್ಲಿ, ಗ್ರಾಮೀಣಾಭಿವೃದ್ಧಿ ಸೇರಿದಂತೆ ಇತರ ಇಲಾಖೆಗಳಿಂದ ಸಿಬ್ಬಂದಿಗಳ ನಿಯೋಜನೆ ಮಾಡುವಂತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.