ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕುಂದಾಪುರದ ಖಾದರ್ ಗುಲ್ವಾಡಿಯವರ “ಟ್ರಿಪಲ್ ತಲಾಖ್”

ಕನ್ನಡಕ್ಕೆ ರಿಸರ್ವೇಶನ್ ಚಿತ್ರದ ಮೂಲಕ 2017ರಲ್ಲಿ ರಾಷ್ಟ್ರ ಪ್ರಶಸ್ತಿ (ರಜತ ಕಮಲ) ಮತ್ತು 2018 ರಲ್ಲಿ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ (ಬಿಫ್ಸ್) ತಂದುಕೊಟ್ಟ ಕುಂದಾಪುರದ ಕಲಾವಿದ ಯಾಕುಬ್ ಖಾದರ್ ಗುಲ್ವಾಡಿಯವರ ಪ್ರಥಮ ನಿರ್ದೇಶನದ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ತಲಾಖ್ ವಿಚಾರದಲ್ಲಿ ಸೂಕ್ಷ್ಮವಾಗಿ ಚರ್ಚೆಗೊಳಗಾದ ಕಥೆಯನ್ನಿಟ್ಟುಕೊಂಡು ಬ್ಯಾರಿ ಮತ್ತು ಕನ್ನಡ ಭಾಷೆಯಲ್ಲಿ ತಯಾರಾದ ಟ್ರಿಪಲ್ ತಲಾಖ್ ಸಿನಿಮಾ ಇದೇ ತಿಂಗಳ 28ರಿಂದ ಮಾರ್ಚ್ 4ರ ತನಕ ನಡೆಯುವ ಬೆಂಗಳೂರು ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಅನ್ಸುಂಗ್ ಇನ್ಕ್ರೆಬಲ್ ಇಂಡಿಯಾ-  ಭಾರತದಲ್ಲಿ ಸ್ವಲ್ಪ ತಿಳಿದಿರುವ ಭಾಷೆಗಳು (ಬ್ಯಾರಿ ಭಾಷೆ) ವಿಭಾಗದಲ್ಲಿ ವಿಶೇಷ ಪ್ರದರ್ಶನ ಕಾಣಲಿದೆ.

ಗುಲ್ವಾಡಿ ಟಾಕೀಸ್ ಸಂಸ್ಥೆಯ ಈ ಸಿನಿಮಾವನ್ನು ಮುಂಬೈಯ ನಾರಾಯಣ ಪ್ರಭಾ ಸುವರ್ಣ ಮತ್ತು ಯಾಕುಬ್ ಖಾದರ್ ನಿರ್ಮಿಸಿದ್ದಾರೆ. ಬ್ಯಾರಿ ಭಾಷೆಯ ಇತಿಹಾಸದಲ್ಲೇ ದೂರದ ಲಂಡನ್ನಿನ ಬ್ರಿಷ್ಟಲ್‌ನಲ್ಲಿ ಮೊದಲ ಪ್ರದರ್ಶನ ಕಂಡ ಈ ಸಿನಿಮಾ ಜನವರಿ ೨೫ರಂದು ಕುಂದಾಪುರದ ಯುವ ಮೆರೀಡಿಯನ್‌ನಲ್ಲಿ ತನ್ನ ೨ನೇ ಪ್ರದರ್ಶನ ಅತ್ಯಂತ ಯಶಸ್ವಿಯಾಗಿ ನಡೆಯಿತು. ವಿಶೇಷವಾಗಿ ಈ ಪ್ರದರ್ಶನದಲ್ಲಿ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಿ.ಎಂ. ಜೋಷಿ, ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ನರಹರಿ ಪ್ರಭಾಕರ ಮರಾಠೆ, ಹಿರಿಯ ಸಿವಿಲ್ ನ್ಯಾಯಾಧೀಶರಾದ ರಂಗೇಗೌಡ, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಪ್ರವೀಣ ನಾಯಕ್, ಹೆಚ್ಚುವರಿ ನ್ಯಾಯಾಧೀಶರಾದ ಧಾನಿಶ್ ಮುಗಲಿ, ಉಡುಪಿ ಜಿಲ್ಲಾ ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಎ.ಎಸ್.ಪಿ ಹರಿರಾಮ ಶಂಕರ್ ಮುಂತಾದ ಅನೇಕ ಗಣ್ಯರು ಸಿನಿಮಾವನ್ನು ವೀಕ್ಷಿಸಿದ್ದಲ್ಲದೇ ನಂತರ ನಡೆದ ಸಂವಾದದಲ್ಲಿ ಭಾಗವಹಿಸಿದ್ದರು. ಅಚ್ಚರಿಯ ವಿಷಯವೆಂದರೆ ಈ ಪ್ರದರ್ಶನದಲ್ಲಿ ಸಾವಿರಕ್ಕಿಂತಲೂ ಹೆಚ್ಚು ಮಂದಿ ಈ ಚಿತ್ರವನ್ನು ಪಿನ್ ಡ್ರಾಪ್ ಸೈಲೆನ್ಸ್ ನಲ್ಲಿ ನೋಡಿ ಖುಷಿಪಟ್ಟರು.

ಸಿನಿಮಾದಲ್ಲೇನಿದೆ?
ಮುಸ್ಲಿಂ ಸಮುದಾಯದಲ್ಲಿ ಭಾರಿ ಪ್ರಚಾರ ಗಿಟ್ಟಿಸಿಕೊಂಡ ಈ ಸಿನಿಮಾ ರಾಷ್ಟ್ರಾಧ್ಯಂತ ತನ್ನ ಸಬ್ಜೆಕ್ಟ್‌ನಿಂದ ಗಮನ ಸೆಳೆದಿದ್ದು ಮುಸ್ಲಿಂ ಮಹಿಳೆಯರ ಬದುಕಿನ ಪ್ರಶ್ನೆಯಾಗಿ ಕೂಡ ಕಾಡಿತ್ತು. ಒಂದೇ ಉಸಿರಿನಲ್ಲಿ ಹೇಳುವ ಮೂರು ತಲಾಖ್ ಇತ್ತೀಚಿಗೆ ಸುಪ್ರಿಂ ಕೋರ್ಟ್ ನೀಡಿದ ತೀರ್ಪು ಮತ್ತು ಪವಿತ್ರ ಕುರಾನ್‌ಲ್ಲಿ ಇರುವ ವಿಚಾರವನ್ನು ಇಟ್ಟುಕೊಂಡು ಮಾಡಿದ ಈ ಸಿನಿಮಾ ಮುಸ್ಲಿಂ ಮಹಿಳೆಯರ ಬದುಕಿಗೆ ಒಂದು ತಿರುವು ನೀಡಿದೆ.
ಯಾಕುಬ್ ಖಾದರ್ ಗುಲ್ವಾಡಿ ಕಥೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಛಾಯಾಗ್ರಹಣ ಪಿ.ವಿ.ಆರ್ ಸ್ವಾಮಿ ಮತ್ತು ಸತೀಶ್ ಕುಮಾರ್, ಎಡಿಟರ್ ಮತ್ತು ಕಲರಿಷ್ಟ್ ಮೋಹನ್ ಎಲ್. ರಂಗಕಹಳೆ, ಸೌಂಡ್ ಮಿಕ್ಸಿಂಗ್ ಮುನೀಬ್ ಅಹ್ಮದ್, ಹಿನ್ನೆಲೆ ಸಂಗೀತ ಗಿರೀಶ್ ಬಿ.ಎಂ, ವಸ್ತ್ರ ವಿನ್ಯಾಸ ಇಸ್ಮಾಯಿಲ್ ಸರ್ಫುಧ್ದೀನ್, ಕಲೆ ಎ.ಕೆ ಗುಲ್ವಾಡಿ, ಸಹ ನಿರ್ದೇಶನ ಪನಕನಹಳ್ಳಿ ಪ್ರಸನ್ನ ಮತ್ತು ರಿಜ್ವಾನ್ ಗುಲ್ವಾಡಿ, ತಾರಾಗಣದಲ್ಲಿ ರೂಪ ವರ್ಕಾಡಿ, ರವಿ ಕಿರಣ ಮುರುಡೇಶ್ವರ ನವ್ಯ ಪೂಜಾರಿ, ಎ.ಎಸ್.ಎನ್ ಹೆಬ್ಬಾರ್, ಉಮರ್ ಯು.ಹೆಚ್, ಎಂ.ಕೆ ಮಠ, ಬೇಬಿ ಫಹಿಮತುಲ್ ಯುಶ್ರ, ಅಝರ್ ಷಾ, ಮಹ್ಮದ್ ಬಡ್ಡೂರ್, ಅಮೀರ್ ಹಮ್ಜಾ, ನಾರಾಯಣ ಸುವರ್ಣ, ಪ್ರಭಾ sಸುವರ್ಣ, ಸುಬ್ರಹ್ಮಣ್ಯ ಶೆಟ್ಟಿ, ಮಾಸ್ಟರ್ ಫಹಾದ್ ಮುಂತಾದವರು ನಟಿಸಿದ್ದಾರೆ.

ನನ್ನ ಮೊದಲ ನಿರ್ಮಾಣದ ಸಿನಿಮಾ ರಿರ್ಸವೇಶನ್‌ಗೆ ೨೦೧೮ರಲ್ಲಿ ೧೦ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡದ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಬಂದಿತ್ತು. ಈಗ ನನ್ನ ಮೊದಲ ನಿರ್ದೇಶನದ ಸಿನಿಮಾ ‘ಟ್ರಿಪಲ್ ತಲಾಖ್’ ಅನ್ಸುಂಗ್ ಇನ್‌ಕ್ರೆಡಿಬಲ್ ಇಂಡಿಯಾ ಭಾರತದಲ್ಲಿ ಸ್ವಲ್ಪ ತಿಳಿದಿರುವ ಭಾಷೆಗಳು (ಬ್ಯಾರಿ ಭಾಷೆ) ವಿಭಾಗದಲ್ಲಿ ಈ ಸಿನಿಮಾ ಪ್ರದರ್ಶನ ಕಾಣುತ್ತಿರುವುದು ಅತ್ಯಂತ ಖುಷಿ ಕೊಟ್ಟಿದೆ.

 

 -ಯಾಕುಬ್ ಖಾದರ್ ಗುಲ್ವಾಡಿ
 ನಿರ್ದೇಶಕರು