ಆಂಬುಲೆನ್ಸ್ ನಲ್ಲಿ ಬಂದು ಸ್ಟ್ರೆಚ್ಚರ್‌ನಲ್ಲಿ ಮಲಗಿಕೊಂಡೇ ಮತದಾನ ಮಾಡಿದ ಕುಂದಾಪುರದ ಮತದಾರ

ಕುಂದಾಪುರ: ಮೂರು ವಾರಗಳ ಹಿಂದೆ ಅಪಘಾತಕ್ಕೀಡಾಗಿ ಕಾಲಿಗೆ ಗಂಭೀರ ಗಾಯಗೊಂಡು ಮನೆಯಲ್ಲೇ ಇದ್ದಕುಂದಾಪುರ ತಾಲೂಕಿನ ಉಳ್ತೂರಿನ ಯುವಕನೋರ್ವ ಆಂಬುಲೆನ್ಸನಲ್ಲಿ ಬಂದು ಸ್ಟ್ರೆಚ್ಚರ್‌ನಲ್ಲಿ ಮಲಗಿಕೊಂಡೇ ಮತದಾನ ಮಾಡುವ ಮೂಲಕ ಮಾದರಿಯಾಗಿದ್ದಾರೆ.
ತೆಕ್ಕಟ್ಟೆ ಸಮೀಪದ ಉಳ್ತೂರಿನ ಶಿವಪ್ಪ ಎಂಬವರ ಪುತ್ರ ಜಯಶೀಲ ಪೂಜಾರಿ(೩೦) ಮೂರು ವಾರಗಳ ಹಿಂದೆ ಗೋಳಿಯಂಗಡಿ ಸಮೀಪ ಬೈಕ್ ಅಪಘಾತಕ್ಕೆ ಒಳಗಾಗಿದ್ದರು. ಅಪಘಾತದ ಪರಿಣಾಮ ಜಯಶೀಲ್ ಅವರ ಬಲ ಕಾಲಿಗೆ ತೀವ್ರವಾಗಿ ಗಾಯಗಳಾಗಿದ್ದರಿಂದ ಅವರು ಕುಂದಾರಪುರ ಖಾಸಗಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿದ್ದರು. ಕಳೆದ ೧೦ ದಿನಗಳ ಹಿಂದೆ ಆಸ್ಪತ್ರೆಯಿಂದ ಬಿಡುಗಡೆಗೊಂಡ ಜಯಶೀಲ್‌ಗೆ ಮೂರು ತಿಂಗಳುಗಳ ಕಾಲ ಕಡ್ಡಾಯ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚನೆ ನೀಡಿದ್ದರು. ನಡೆಯಲು ಸಾಧ್ಯವಾಗದೆ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದ ಜಯಶೀಲ್ ಗುರುವಾರ ಮತದಾನ ಮಾಡಲು ಅವಕಾಶ ಕಲ್ಪಿಸುವಂತೆ ಕುಟುಂಬಸ್ಥರಲ್ಲಿ ಒತ್ತಾಯಿಸಿದ್ದರು.

ಜಯಶೀಲ್ ಕುಟುಂಬಸ್ಥರು ಹಾಗೂ ಸ್ನೇಹಿತರು ಸೇರಿ ಆಂಬುಲೆನ್ಸನಲ್ಲಿ ಜಯಶೀಲ್ ಅವರನ್ನು ಉಳ್ತೂರು ಶಾಲೆಯಲ್ಲಿರುವ ಮತಗಟ್ಟೆಗೆ ಕರೆತಂದು ಮತದಾನ ಮಾಡಲು ಅವಕಾಶ ಮಾಡಿಕೊಟ್ಟರು. ಎದ್ದು ನಿಲ್ಲಲು ಸಾಧ್ಯವಾಗದೆ ಸ್ಟ್ರೆಚ್ಚರನಲ್ಲಿ ಮಲಗಿಕೊಂಡೇ ಜಯಶೀಲ್ ತನ್ನ ಹಕ್ಕನ್ನು ಚಲಾಯಿಸಿದ್ದಾರೆ.