ಕೋಟ ಜೋಡಿ ಕೊಲೆ ಪ್ರಕರಣ:ಬಿಜೆಪಿ ಮುಖಂಡ ರಾಘವೇಂದ್ರ ಕಾಂಚನ್ ಸೇರಿದಂತೆ ನಾಲ್ವರ ಬಂಧನ

ಕುಂದಾಪುರ:  ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ ಕೋಟ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಜಿ.ಪಂ ಸದಸ್ಯ, ಬಿಜೆಪಿ ಮುಖಂಡ ರಾಘವೇಂದ್ರ ಕಾಂಚನ್ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ಹಿನ್ನೆಲೆಯಲ್ಲಿ  ತನಿಖಾಧಿಕಾರಿಗಳ ತಂಡ ಕೋಟ ಜಿ.ಪಂ ಸದಸ್ಯ  ರಾಘವೇಂದ್ರ ಕಾಂಚನ್  ( 38) ಅವರನ್ನು ವಿಚಾರಣೆಗಾಗಿ ಬುಧವಾರ ರಾತ್ರಿ ವಶಕ್ಕೆ ಪಡೆದುಕೊಂಡು ಸುದೀರ್ಘ ವಿಚಾರಣೆ ನಡೆಸಿ ಶುಕ್ರವಾರ ಮಧ್ಯಾಹ್ನ ನ್ಯಾಯಾಲಯಕ್ಕೆ ಹಾಜರುಪಡಿಸುತ್ತಾರೆಂಬ ಮಾಹಿತಿ ಬಲ್ಲಮೂಲಗಳಿಂದ‌ ತಿಳಿದುಬಂದಿದೆ. 
ಇನ್ನುಳಿದ ಆರೋಪಿಗಳನ್ನು ಖಚಿತ ಮಾಹಿತಿ ಮೇರೆಗೆ ಹೊಸನಗರದಲ್ಲಿ ಕೊಡವೂರು ನಿವಾಸಿ ಮಹೇಶ್ ಗಾಣಿಗ( 38), ಕೊಡವೂರು ಲಕ್ಷ್ಮೀ ನಗರ ನಿವಾಸಿ ರವಿಚಂದ್ರ ಪೂಜಾರಿ (28), ಕೋಟ ಮಣೂರು ನಿವಾಸಿ ಹರೀಶ್ ರೆಡ್ಡಿ(40) ಎಂಬವವರನ್ನು ಬಂಧಿಸಲಾಗಿದೆ ಎಂದು ಉಡುಪಿ ಎಸ್ ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ಇನ್ನು ಪ್ರಮುಖ ಆರೋಪಿಗಳಾದ ರಾಜಶೇಖರ ರೆಡ್ಡಿ, ಜಿ ರವಿ ಯಾನೆ ಮೆಡಿಕಲ್ ರವಿ ಅವರನ್ನು ಮಡಿಕೇರಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಒಟ್ಟು ಬಂಧಿತರ ಸಂಖ್ಯೆ ಆರಕ್ಕೇರಿದೆ. ಉಳಿದ ಆರೋಪಿಗಳ ಶೋಧ ಕಾರ್ಯ ಮುಂದುವರೆದಿದೆ.
ರೌಡಿಶೀಟರ್ ಹರೀಶ್ ರೆಡ್ಡಿ, ರವೀಂದ್ರ ಪೂಜಾರಿ, ಮಹೇಶ್ ಗಾಣಿಗ, ರಾಘವೇಂದ್ರ ಕಾಂಚನ್ ಬಂಧನದಿಂದ ಬಂಧಿತರ ಸಂಖ್ಯೆ ಆರಕ್ಕೆ ಏರಿದೆ.
ಸಂಚು ನಡೆಸಿ ಕೊಲೆ:
ಜಿ.ಪಂ ಸದಸ್ಯ ರಾಘವೇಂದ್ರ ಕಾಂಚನ್ ಮತ್ತು ಕೊಲೆಯಾದ ಭರತ್ ಗೆ ವೈಷ್ಯಮ್ಯವಿದ್ದು ಭರತ್ ಬೆಳವಣಿಗೆಯನ್ನು ರಾಘವೇಂದ್ರ ಸಹಿಸಿರಲಿಲ್ಲ ಹಾಗಾಗಿ ಸಂಚು ನಡೆಸಿ ಕೊಲೆ ಮಾಡಲಾಗಿದೆ ಎನ್ನುವ ಬಲವಾದ ಆರೋಪಗಳು ಪೊಲೀಸ್ ಮೂಲಗಳಿಂದ‌ ಕೇಳಿಬಂದಿವೆ. 
 
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕಾಂಚನ್:
ರಾಘವೇಂದ್ರ ಕಾಂಚನ್ ಹಾಲಾಡಿ ಶ್ರೀನಿವಾಸ ಶೆಟ್ರ ಆಪ್ತನಾಗಿ ಗುರುತಿಸಿಕೊಂಡಿದ್ದ.ಕಳೆದ ಭಾನುವಾರ  ಜೋಡಿ ಕೊಲೆ ಆರೋಪಿಗಳ ಪತ್ತೆಗೆ ಆಗ್ರಹಿಸಿ ಕೋಟ ಸಂತೆ ಮಾರುಕಟ್ಟೆ ಸಮೀಪ ನಡೆದ ಪ್ರತಿಭಟನೆಯಲ್ಲಿ ಈತ ಭಾಗವಹಿಸಿದ್ದ.