ಕುಂದಾಪುರ ದಲಿತರ ಕುಂದುಕೊರತೆ ಸಭೆಯಲ್ಲಿ ದಲಿತರ ವಿವಿಧ ಸಮಸ್ಯೆಗಳ ಪ್ರಸ್ತಾಪ

ಕುಂದಾಪುರ: ತಮಗಾದ ಅನ್ಯಾಯಗಳನ್ನು ಹೇಳಿಕೊಂಡು ಪರಿಹಾರ ಪಡೆಯಲು ಪೊಲೀಸ್ ಠಾಣೆಗೆ ಬರುವ ದಲಿತರಿಗೆ ಉತ್ತಮ ಮಾಹಿತಿ ನೀಡಿ ಅವರ ಸಮಸ್ಯೆ ಪರಿಹಾರ ಮಾಡಬೇಕು ಹೊರತು ಅವರನ್ನು ಬೆದರಿಸುವ ಕಾರ್ಯವಾಗಬಾರದು. ಕುಂದಾಪುರ ಪೊಲೀಸ್ ಉಪವಿಭಾಗದ ಕೆಲವು ಪೊಲೀಸ್ ಠಾಣೆಯಲ್ಲಿ ಇಂತಹ ಕೆಲಸಗಳಾಗಿದ್ದು ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಿ ಎಂದು ದಲಿತ ಮುಖಂಡ ಉದಯ್ ಕುಮಾರ್ ತಲ್ಲೂರು ಹೇಳಿದರು.

ಕುಂದಾಪುರದಲ್ಲಿನ ಅಂಬೇಡ್ಕರ್ ಭವನದಲ್ಲಿ ಕುಂದಾಪುರ ಉಪವಿಭಾಗದ ಎಎಸ್ಪಿ ಹರಿರಾಂ ಶಂಕರ್ ಅಧ್ಯಕ್ಷತೆಯಲ್ಲಿ ಶನಿವಾರ ಸಂಜೆ ನಡೆದ ದಲಿತರ ಕುಂದುಕೊರತೆ ಸಭೆಯಲ್ಲಿ ಅವರು ಎಎಸ್ಪಿ ಅವರ ಗಮನಸೆಳೆದರು.

ಇದಕ್ಕೆ ಧ್ವನಿಗೂಡಿಸಿದ ವಿಜಯ್ ಕುಮಾರ್, ಕೆಲ ಠಾಣೆಯಲ್ಲಿ ದೂರುದಾರ ನೀಡಿದ ದೂರನ್ನು ಸ್ವೀಕರಿಸಲು ಹಿಂದೇಟು ಹಾಕಿ ಆರೋಪಿಗಳಿಗೆ ಮಣೆಹಾಕುವ ಕಾರ್ಯವಾಗುತ್ತಿದೆ. ಆಯಾಯ ಠಾಣೆಯ ಉಪನಿರೀಕ್ಷಕರು ಜವಬ್ದಾರಿಯುತ ಕೆಲಸ ಮಾಡಿದರೆ ಬಹುತೇಕ ಸಮಸ್ಯೆಗಳು ನಿವಾರಣೆಯಾದಂತಾಗುತ್ತದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಎಎಸ್ಪಿ ಅವರು ಅಂತಹ ಪಿಎಸ್ಐಗಳಿಗೆ ಮನವರಿಕೆ ಮಾಡುವುದಾಗಿ ತಿಳಿಸಿದರು.

ತಲ್ಲೂರು ಕೋಟೆಬಾಗಿಲು ಎಂಬಲ್ಲಿನ ಅಂಗನವಾಡಿ ಶಾಲೆ ಬಳಿ ವ್ಯಕ್ತಿಯೋರ್ವ ಮದ್ಯಪಾನ ಮಾಡಿ ಅವ್ಯಾಚವಾಗಿ ನಿಂಧಿಸಿ ಕೂಗುವುದರಿಂದ ಅಂಗನವಾಡಿ ಶಾಲೆ ಮಕ್ಕಳಿಗೆ ಮಾನಸಿಕತೆ ಮೇಲೆ ಪರಿಣಾಮ ಬೀರುತ್ತಿದೆಯೆಂದು ಶಿಕ್ಷಕಿ ದೂರಿದರು.

ಸ್ಥಳಿಯ ನಿವಾಸಿ ಹಾಗೂ ದಲಿತ ಮುಖಂಡ ಚಂದ್ರಮ ತಲ್ಲೂರು ಮಾತನಾಡಿ, ಇದೊಂದು ಗಂಭೀರ ಪ್ರಕರಣ. ಕೂಡಲೇ ಪೊಲೀಸ್ ಇಲಾಖೆ ಆ ವ್ಯಕ್ತಿ ಮೇಲೆ ಕಾನೂನುಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಬಡವರಿಗೊಂದು ಕಾನೂನು….!
ಕುಂದಾಪುರದಲ್ಲಿ ಬಡವರಿಗೊಂದು ಕಾನೂನು ಬಲಾಡ್ಯರಿಗೊಂದು ಕಾನೂನು ಎಂಬಂತಾಗಿದೆ. ಕುಂದಾಪುರ ಟ್ರಾಫಿಕ್ ಪೊಲೀಸರು ಕೇವಲ ಬೈಕ್, ರಿಕ್ಷಾ ಮೊದಲಾದ ವಾಹನಗಳ ತಪಾಸಣೆಗೆ ಆಧ್ಯತೆ ನೀಡುತ್ತಿದ್ದು ನಿಯಮ ಉಲ್ಲಂಘನೆ ಮಾಡುತ್ತಿರುವ ಬಸ್ಸು ಹಾಗೂ ಇತರೆ ಘಣ ವಾಹನಗಳ ಬಗ್ಗೆ ಕ್ಯಾರೇ ಅನ್ನುತ್ತಿಲ್ಲ.

ಅಕ್ರಮ ಬಂಡೆಕಲ್ಲು ಸಾಗಾಟ ನಡೆಯುತ್ತಿದ್ದರೂ ಕೂಡ ಕಂಡು ಕಾಣದ ಹಾಗೆ ಇರುತ್ತಾರೆ. ಈ ಹಿಂದೆ ಕುಂದಾಪುರ ನಗರ ಠಾಣೆ ಪಿಎಸ್ಐ ಹರೀಶ್ ಆರ್. ಕೆಲವು ಸ್ಪೆಶಲ್ ಡ್ರೈವ್ ನಡೆಸಿ ಕಾನೂನು ಉಲ್ಲಂಘಿಸುವ ವಿರುದ್ಧ ಕ್ರಮಕೈಗೊಂಡಿದ್ದರು. ಆದರೆ ಇದೀಗ ವ್ಯವಸ್ಥೆ ಹದಗೆಟ್ಟಿದ್ದರೂ ಟ್ರಾಫಿಕ್ ಪೊಲೀಸರು ಇಚ್ಚಾಶಕ್ತಿ ತೋರುತ್ತಿಲ್ಲ ಎಂಬ ಮಾತುಗಳು ಸಭೆಯಲ್ಲಿ ಕೇಳಿಬಂತು.

ಮಟ್ಕಾ ದಂಧೆ ಕಡಿವಾಣ, ಕಾರು ಇತ್ಯಾದಿ ವಾಹನಗಳಲ್ಲಿ ಟಿಂಟ್ ಗ್ಲಾಸ್ ಅಳವಡಿಕೆ, ಕೆಲವು ರಾಷ್ಟ್ರೀಕ್ರತ ಬ್ಯಾಂಕುಗಳಲ್ಲಿ ದಲಿತರಿಗೆ ಸ್ವಉದ್ಯೋಗಕ್ಕೆ ಸಾಲ ನೀಡದೆ ದಲಿತರ ಹಕ್ಕನ್ನು ಕಸಿಯಲಾಗುತ್ತಿದೆ ಎಂಬಿತ್ಯಾದಿ ಆರೋಪಗಳು ಕೇಳಿಬಂತು. ಅಲ್ಲದೇ ಪ್ರತಿ ತಿಂಗಳು ಕುಂದಾಪುರ ಉಪವಿಭಾಗ ವ್ಯಾಪ್ತಿಯ ಎಲ್ಲಾ ಠಾಣಾಧಿಕಾರಿಗಳ ಸಮ್ಮುಖ ದಲಿತರ ಕುಂದುಕೊರತೆ ಸಭೆ ನಡೆಸುವಂತೆಯೂ ಆಗ್ರಹ ಕೇಳಿಬಂತು.

ಸಭೆಯಲ್ಲಿ ಕುಂದಾಪುರ ಪುರಸಭೆ ಸದಸ್ಯ ಪ್ರಭಾಕರ್, ಕುಂದಾಪುರ ಪಿಎಸ್ಐ ಹರೀಶ್ ಆರ್., ಪ್ರೋಬೇಶನರಿ ಪಿಎಸ್ಐ ಇದ್ದರು.