ಕುಂದಾಪುರ:ಹಲ್ಲೆ ನಡೆಸಿದ್ದ ವ್ಯಕ್ತಿಗೆ ಶಿಕ್ಷೆ:

ಕುಂದಾಪುರ: 2016 ಜುಲೈ 10 ರಂದು ಶಂಕರನಾರಾಯಣ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳ್ವೆ ಗ್ರಾಮದ ಸೂರ್ಗೋಳಿ ಜಲ್ಲಿ ಕ್ರಷರ್ ಲೇಬರ್ ರೂಂನಲ್ಲಿ ಸಾಲದ ಹಣದ ವಿಚಾರದಲ್ಲಿ ವ್ಯಕ್ತಿಯೋರ್ವ ಕತ್ತಿಯಿಂದ ಇನ್ನೋರ್ವನಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದ ಬಗ್ಗೆ ಅಪರಾಧ ಸಾಭೀತಾಗಿದ್ದು ಕುಂದಾಪುರದಲ್ಲಿನ ಹೆಚ್ಚುವರಿ ಜಿಲ್ಲ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಪ್ರಕಾಶ್ ಖಂಡೇರಿ ಈ ಬಗ್ಗೆ ಮಂಗಳವಾರ ಅಪರಾಧಿಗೆ ಶಿಕ್ಷೆ ಪ್ರಮಾಣ ಪ್ರಕಟಿಸಿದ್ದಾರೆ.

ಕಾರ್ಮಿಕ ರಾಜಕುಮಾರ್ ಹಾಗೂ ಗದಗದ ಯಲ್ಲಪ್ಪ ನಡುವಿನ ಹಣಕಾಸು ವಿಚಾರದ ಮಾತುಕತೆಯಲ್ಲಿ ಯಲ್ಲಪ್ಪ ರಾಜಕುಮಾರ್ ಮೇಲೆ ಕತ್ತಿಯಿಂದ ಕುತ್ತಿಗೆಗೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಆರೋಪಣೆಗಳು ಸಾಭೀತಾಗಿದ್ದು ಕೊಲೆಯತ್ನ (ಐಪಿಸಿ ಸೆಕ್ಷನ್ 307)ಕ್ಕೆ ಜೀವಾವಧಿ ಶಿಕ್ಷೆ, ಐಪಿಸಿ ಸೆಕ್ಷನ್ 326 (ಗಂಭೀರವಾಗಿ ಗಾಯಗೊಳಿಸುವುದು) ಪ್ರಕರಣಕ್ಕೆ ಸಂಬಂಧಿಸಿ 2 ವರ್ಷ ಜೈಲು ಮತ್ತು 10 ಸಾವಿರ ದಂಡ ವಿಧಿಸಲಾಗಿದ್ದು ನೊಂದವರು ಕಾನೂನು ಸೇವಾ ಪ್ರಾಧಿಕಾರದಲ್ಲಿ ಪರಿಹಾರ ಪಡೆಯಬಹುದು ಎಂದು ಆದೇಶಿಸಲಾಗಿದೆ.

ಅಂದಿನ ಶಂಕರನಾರಾಯಣ ಪಿಎಸ್ಐ ಸುನೀಲ್ ಕುಮಾರ್ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದು 10 ಮಂದಿ ವಿಚಾರಣೆ ನಡೆದಿತ್ತು. ಪ್ರಾಸಿಕ್ಯೂಶನ್ ಪರವಾಗಿ ಜಿಲ್ಲಾ ಸರಕಾರಿ ಅಭಿಯೋಜಕ ಬೇಳೂರು ಪ್ರಕಾಶ್ಚಂದ್ರ ಶೆಟ್ಟಿ ವಾದ ಮಂಡಿಸಿದ್ದರು