ಕುಂದಾಪುರ: ಶ್ರೀ ಅರೆಕಲ್ಲು ಬೊಬ್ಬರ್ಯ ದೇವಸ್ಥಾನಕ್ಕೆ ಕನ್ನ ಹಾಕಲು ಬಂದ ಕಳ್ಳ ಪೊಲೀಸರ ಕೈಗೆ ಸಿಕ್ಕಿ ಬಿದ್ದ

ಕುಂದಾಪುರ: ಕುಂದಾಪುರ-ಬೈಂದೂರು ರಾಷ್ಟ್ರೀಯ ಹೆದ್ದಾರಿಯ ಸಮೀಪವೇ ಇರುವ ಪ್ರಸಿದ್ಧವಾದ ಹೇರಿಕುದ್ರು ಶ್ರೀ ಅರೆಕಲ್ಲು ಬೊಬ್ಬರ್ಯ ದೇವಸ್ಥಾನಕ್ಕೆ ಕನ್ನ ಹಾಕಲು ಬಂದ ಕಳ್ಳನನ್ನು ಸಾರ್ವಜನಿಕರ ಸಹಕಾರದಲ್ಲಿ ಕುಂದಾಪುರ ಪೊಲೀಸರು ಬಂಧಿಸಿದ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ.
ಭಟ್ಕಳ ತಾಲೂಕಿನ ಅಂಬರಹಿತ್ಲು, ಮುಂಡಳ್ಳಿ ನಿವಾಸಿ ಸತೀಶ ಮಹದೇವ ನಾಯ್ಕ (31) ಬಂಧಿತ ಆರೋಪಿ.
ನಡೆದಿದ್ದೇನು?
ದೈವಸ್ಥಾನದ ಆಡಳಿತ ಮೊಕ್ತೇಸರರಾದ ಹೆಚ್‌. ಶಂಕರ ಶೆಟ್ಟಿ ಮುಂಜಾನೆ ಮನೆಯಲ್ಲಿದ್ದ ಸಂದರ್ಭ ವ್ಯಕ್ತಿಯೊಬ್ಬರು ಕರೆ ಮಾಡಿ ದೈವಸ್ಥಾನದ ಬಳಿ ಯಾರೋ ಒಬ್ಬ ಅರಿಚಿತ ವ್ಯಕ್ತಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಬಗ್ಗೆ ಮಾಹಿತಿ ನೀಡಿದ್ದರು. ಕೂಡಲೇ ದೈವಸ್ಥಾನದ ಬಳಿ ಬಂದು ಪರಿಶೀಲಿಸುವಾಗ ಅಂದಾಜು 30 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿ ಒಂದು ಕಬ್ಬಿಣದ ಸರಳನ್ನು ಹಿಡಿದುಕೊಂಡು ದೈವಸ್ಥಾನದ ಹೊರಗಿರುವ ಕಾಣಿಕೆ ಡಬ್ಬಿಯನ್ನು ಸರಳಿನಿಂದ ಮೀಟುತ್ತಿದ್ದು, ಆತನ ಮೇಲೆ ಟಾರ್ಚ್‌ ಲೈಟ್ ಹಾಕಿದಾಗ ಕಳ್ಳ ಅಲ್ಲಿಂದ ಓಡಿ ಹೋಗಿದ್ದ. ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಆಸುಪಾಸಿನಲ್ಲಿ ಹುಡುಕಿದಾಗ ಆ ವ್ಯಕ್ತಿಯು ದೈವಸ್ಥಾನದ ಹಿಂದಿರುವ ಪೊದೆಯಲ್ಲಿ ಪತ್ತೆಯಾಗಿದ್ದು, ಈತನ ಹೆಸರು ಸತೀಶ್‌ ಮಹಾದೇವ ನಾಯ್ಕ ಎಂಬುದಾಗಿ ತಿಳಿದು ಬಂದಿತ್ತು.
ಸತೀಶ್ ನಾಯ್ಕ್ ರಾತ್ರಿ ವೇಳೆಯಲ್ಲಿ ದೇವಸ್ಥಾನದ ಹುಂಡಿ ಹೊಡೆದು ಕಳ್ಳತನ ಮಾಡುವ ಪ್ರವೃತ್ತಿಉಳ್ಳವನಾಗಿದ್ದು ಈತನು ಈ ಹಿಂದೆ ಹೊನ್ನಾವರ, ಭಟ್ಕಳ, ಕಲಘಟಗಿ, ಮಂಕಿ, ಅಂಕೋಲಾ, ಕಡೆಗಳಲ್ಲೂ ಸಹ ರಾತ್ರಿ ಮತ್ತು ಹಗಲು ಕನ್ನ ಹಾಕಿದ ಬಗ್ಗೆ ಪ್ರಕರಣ ದಾಖಲಾಗಿತ್ತು. ಅಲ್ಲದೇ ಈತ MOB ಅಸಾಮಿಯಾಗಿದ್ದಾನೆ ಎಂದು ಕುಂದಾಪುರ ಠಾಣೆ ಪಿಎಸ್ಐ ಹರೀಶ್ ಆರ್. ತಿಳಿಸಿದ್ದಾರೆ.
ಸದ್ಯ ಆರೋಪಿ ವಿರುದ್ಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.