ಬೈಕ್, ಕಾರು, ಟ್ಯಾಂಕರ್ ನಡುವೆ ಅಪಘಾತ: ಕಾರಿನೊಳಗಿದ್ದ ಯುವಕ ಗಂಭೀರ 

ಕುಂದಾಪುರ: ಕಾರು, ಬೈಕ್ ಹಾಗೂ ಟ್ಯಾಂಕರ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಾರು ಚಾಲಕ ಯುವಕನೋರ್ವ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಹೆಮ್ಮಾಡಿ ಸಮೀಪದ ಜಾಲಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಆದಿತ್ಯವಾರ ರಾತ್ರಿ ಸಂಭವಿಸಿದೆ,
ಹೆಮ್ಮಾಡಿಯ ದೇವಲ್ಕುಂದ ಕೂಕನಾಡು ನಿವಾಸಿ ವಿಜಯ್ ಶೆಟ್ಟಿ ಎಂಬವರ ಪುತ್ರ ಸಾತ್ವಿಕ್ ಶೆಟ್ಟಿ (21) ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೈಕ್ ಸವಾರ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಸಾತ್ವಿಕ್ ರಾತ್ರಿ ಕುಂದಾಪುರದಿಂದ ಸ್ವಿಫ್ಟ್ ಕಾರಿನಲ್ಲಿ ದೇವಲ್ಕುಂದದಲ್ಲಿರುವ ತನ್ನ ಮನೆಗೆ ತೆರಳುತ್ತಿರುವ ವೇಳೆಯಲ್ಲಿ ಜಾಲಾಡಿ ಸಮೀಪ ಈ ಅವಘಡ ನಡೆದಿದೆ. ಕಾರು ಬೈಕ್‍ಗೆ ಢಿಕ್ಕಿಯಾದ ಬಳಿಕ ನಿಯಂತ್ರಣ ತಪ್ಪಿ ರಸ್ತೆಯ ಬಲಬದಿಯಲ್ಲಿ ಸಂಚರಿಸಿ ಎದುರಿನಿಂದ ಬರುತ್ತಿದ್ದ ಟ್ಯಾಂಕರ್‍ಗೆ ಢಿಕ್ಕಿ ಹೊಡೆದಿದೆ.
ನಜ್ಜುಗುಜ್ಜಾದ ಕಾರು: 
ಅಪಘಾತದ ತೀವ್ರತೆಗೆ ಕಾರು ನಜ್ಜುಗುಜ್ಜಾಗಿದ್ದು, ಅರ್ಧಭಾಗ ಕಾರು ಟ್ಯಾಂಕರ್‍ನ ಅಡಿಭಾಗದಲ್ಲಿ ಸಿಲುಕಿತ್ತು. ಸಾತ್ವಿಕ್ ಮುಖ, ತಲೆ ಹಾಗೂ ಕಾಲಿಗೆ ಗಂಭಿರ ಗಾಯಗಳಾಗಿ ತೀವ್ರ ರಕ್ತಸ್ರಾವವಾಗಿದ್ದು, ಜಖುಂಗೊಂಡ ಕಾರಿನೊಳಗೆ ಸಿಲುಕಿ ಒದ್ದಾಡುತ್ತಿದ್ದರು. ಇದೇ ವೇಳೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಸಂತೋಷನಗರ ನಿಲ್ದಾಣದ ರಿಕ್ಷಾ ಚಾಲಕ ಶಾಹಿನ್ ತಮ್ಮ ಸ್ನೇಹಿತರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡು ಸ್ನೇಹಿತರ ಜೊತೆಗೂಡಿ ಕಾರಿನೊಳಗಿದ್ದ ಸಾತ್ವಿಕ್‍ನನ್ನು ಹೊರತೆಗೆದು ಸ್ಥಳೀಯ ರಿಕ್ಷಾ ಚಾಲಕ ಪ್ರಶಾಂತ್ ಪಡುಮನೆ ಆಟೋದಲ್ಲಿ ಕುಂದಾಪುರ ಆಸ್ಪತ್ರೆಗೆ ಸಾಗಿಸಿದರು.
ಮುಸ್ಲಿಂ ಯುವಕರ ತಂಡದ ಕಾರ್ಯಕ್ಕೆ ಮೆಚ್ಚುಗೆ: 
ಅಪಘಾತ ನಡೆದ ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಪಂಚಾಯತ್ ಸದಸ್ಯ ಸಯ್ಯದ್ ಯಾಸೀನ್ ನೇತೃತ್ವದ ಸಂತೋಷನಗರದ ಮುಸ್ಲಿಂ ಯುವಕರ ತಂಡ ಸುರಿಯುವ ಮಳೆಯನ್ನೂ ಲೆಕ್ಕಿಸದೆ ಜಖುಂಗೊಂಡ ಕಾರಿನೊಳಗಿದ್ದ ಯುವಕನನ್ನು ಹೊರತೆಗೆಯುವಲ್ಲಿ ಶ್ರಮಿಸಿತು. ಅಪಘಾತ ನಡೆದ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಹೈವೇ ಪ್ಯಾಟ್ರೋಲ್ ಸಿಬ್ಬಂದಿಗಳು, ಗಂಗೊಳ್ಳಿಯ ಆಪತ್ಭಾಂಧವ 24/7ನ ಇಬ್ರಾಹಿಂ ಗಂಗೊಳ್ಳಿ ಹಾಗೂ ಅಬ್ರಾರ್ ಗಂಗೊಳ್ಳಿ ಮಳೆಯಲ್ಲೇ ನನೆದುಕೊಂಡೆ ವಾಹನಗಳ ಸುಗಮ ಸಂಚಾರಕ್ಕೆ ಅನುವುಮಾಡಿಕೊಟ್ಟರು.