ಕುಂದಾಪುರ: ಟೀಮ್ ಮೋದಿ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನುದ್ದೇಶಿ ಮಾಡಿರುವ ಭಾಷಣ ರಾಜಕೀಯಪ್ರೇರಿತವಾಗಿದೆ ಎಂದು ಆರೋಪಿಸಿ ಭಾಷಣಕ್ಕೆ ಅವಕಾಶ ಮಾಡಿಕೊಟ್ಟ ಕಾಲೇಜು ಪ್ರಾಂಶುಪಾಲರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ವಿವಿಧ ಸಂಘಟನೆಗಳು, ರಾಜಕೀಯ ಪಕ್ಷದ ಮುಖಂಡರು ಶುಕ್ರವಾರ ಸಭೆ ನಡೆಸಿ ಮುಂದಿನ ಹೋರಾಟಗಳ ಬಗ್ಗೆ ಸಮಾಲೋಚನೆ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಪ್ರಗತಿಪರ ಚಿಂತಕ, ಪತ್ರಕರ್ತ ಶಶಿಧರ ಹೆಮ್ಮಾಡಿ, ಚಕ್ರವರ್ತಿ ಸೂಲಿಬೆಲೆ ಕಳೆದ ಹದಿನೈದು ವರ್ಷಗಳಿಂದ ಸುಳ್ಳು ಹೇಳುತ್ತಲೇ ಬಂದಿದ್ದಾರೆ. ಸೂಲಿಬೆಲೆ ಎಂದರೆ ಓರ್ವ ದೇಶಭಕ್ತ, ಪ್ರಖರ ವಾಗ್ಮಿ, ಚಿಂತಕ ಇಂತಹ ವ್ಯಕ್ತಿತ್ವದ ಸೂಲಿಬೆಲೆಯನ್ನು ಕಾಲೇಜಿಗೆ ಕರೆಸಿದ್ದರಲ್ಲಿ ತಪ್ಪೇನು ಎಂಬ ಭಾವನೆ ಹಲವರಲ್ಲಿ ಇದೆ. ಆರೆಸ್ಸೆಸ್, ಬಿಜೆಪಿ, ಕಾಂಗ್ರೆಸ್, ಕಮ್ಯೂನಿಸ್ಟ್ ಯಾವುದೇ ಪಕ್ಷಗಳ, ಸಂಘಟನೆಗಳ ಮುಖಂಡರು ಕಾಲೇಜಿಗೆ ಹೋಗುವುದರಲ್ಲಿ ನಮ್ಮ ತಕರಾರಿಲ್ಲ. ಆದರೆ ಚಕ್ರವರ್ತಿ ಸೂಲಿಬೆಲೆ ಕಳೆದ ಹದಿನೈದು ವರ್ಷಗಳಿಂದ ರಾಜ್ಯದ ಯುವಜನರ ಮನಸ್ಸನ್ನು ಹಾಳು ಮಾಡುತ್ತಿರುವ ವ್ಯಕ್ತಿ. ಪ್ರತೀ ಸಂದರ್ಭಗಳಲ್ಲೂ ಸುಳ್ಳುಗಳನ್ನು ಪೋಣಿಸಿ ಯಾವುದೇ ಆಧಾರವಿಲ್ಲದೆ ಕೇವಲ ಕತೆಗಳನ್ನು ಹೇಳುತ್ತಾ ಮೋದಿ, ಬಿಜೆಪಿ ಎಂದು ಹೊಟ್ಟೆ ತುಂಬಿಸಿಕೊಳ್ಳುವ ವ್ಯಕ್ತಿಯನ್ನು ಕಾಲೇಜಿಗೆ ಕರೆಸಿ ಉಪನ್ಯಾಸ ನೀಡಲು ಅನುವು ಮಾಡಿಕೊಟ್ಟಿರುವುದು ಅಕ್ಷಮ್ಯ ಎಂದರು.
ಈ ದೇಶದ ವಿದ್ಯಾರ್ಥಿ ಯುವಜನರ ಮನಸ್ಸಿನಲ್ಲಿ ಕೋಮುದ್ವೇಷವನ್ನು ತುಂಬಿಸುವ ವ್ಯಕ್ತಿ ಚಕ್ರವರ್ತಿ ಸೂಲಿಬೆಲೆ. ಅವರ ಹಿಂದಿನ ಲೇಖನಗಳನ್ನು ಮತ್ತು ಅವರು ಬರೆದಿರುವ ಪುಸ್ತಕಗಳನ್ನು ಗಮನಿಸಿದರೆ ಎಲ್ಲರಿಗೂ ತಿಳಿಯುತ್ತೆ ಅವರೊಬ್ಬ ಅಪ್ಪಟ ಕೋಮುವಾದಿ ಎಂದು. ಸೂಲಿಬೆಲೆ ಟೀಮ್ ಮೋದಿ ಎಂಬ ತಂಡ ಕಟ್ಟಿಕೊಂಡು ಮೋದಿ ಮುಂದಿನ ಐದು ವರ್ಷಗಳ ಕಲ ಪ್ರಧಾನಿಯಾಗಬೇಕೆಂದು ಅಭಿಯಾನ ಆರಂಭಿಸಿದ್ದಾರೆ. ಕುಂದಾಪುರಕ್ಕೆ ಬಿಜೆಪಿ ಮತ್ತು ಮೋದಿ ಚುನಾವಣಾ ಪ್ರಚಾರಕ್ಕೆ ಬಂದ ವ್ಯಕ್ತಿಯನ್ನು ಭಂಡಾರ್ಕಾರ್ಸ್ ಕಾಲೇಜಿಗೆ ಅದೂ ಚುನಾವಣಾ ಸಮಯಯದಲ್ಲಿ ಕರೆಸಿದ್ದು ದೊಡ್ಡ ತಪ್ಪು. ಸೂಲಿಬೆಲೆ ಸಾವಿರಾರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಭಾಷಣದಲ್ಲಿ ಸುಳ್ಳುಗಳೇ ತುಂಬಿಕೊಂಡಿವೆ ಎಂದು ಆರೋಪಿಸಿದರು.
ಭಂಡಾರ್ಕಾರ್ಸ್ ಕಾಲೇಜು ಶಿಕ್ಷಣ ನೀಡಿ ನಮ್ಮನ್ನೆಲ್ಲಾ ರೂಪಿಸಿದಂತಹ ಕಾಲೇಜು. ನಾವಿಂದು ಉನ್ನತ ಸ್ಥಾನದಲ್ಲಿದ್ದರೆ ಅದಕ್ಕೆ ಈ ಕಾಲೇಜು ಕೂಡ ಕಾರಣ. ಕಾಲೇಜಿನ ಬಗ್ಗೆ ಏನೆ ಭಿನ್ನಾಭಿಪ್ರಾಯಗಳಿದ್ದರೂ ಕಾಲೇಜು ಕಲಿಸಿಕೊಟ್ಟ ಮೌಲ್ಯಗಳ ಬಗ್ಗೆ, ಕಾಲೇಜಿನ ಬಗ್ಗೆ ನಮಗೆ ಅಪಾರ ಗೌರವವಿದೆ. ಅದೆಷ್ಟೋ ವಿದ್ಯಾರ್ಥಿಗಳನ್ನು ರೂಪಿಸಿದ ಕಾಲೇಜಿನಲ್ಲಿ ಚಕ್ರವರ್ತಿ ಸೂಲಿಬೆಲೆಯಂತಹ ಒಬ್ಬ ಸುಳ್ಳು ಹೇಳುವ, ಅಪ್ಪಟ ಚುನಾವಣಾ ಭಾಷಣಕಾರನನ್ನು ಕರೆಸಿ ಸಾವಿರಾರು ವಿದ್ಯಾರ್ಥಿಗಳ ಮುಂದೆ ಸುಳ್ಳುಗಳನ್ನು ಪೋಣಿಸಿ ಹೇಳುವ ಕಾರ್ಯಕ್ಕೆ ಕಾಲೇಜು ಪ್ರಾಂಶುಪಾಲ ನಾರಾಯಣ ಶೆಟ್ಟಿಯವರು ಕೈ ಹಾಕಿದ್ದಾರೆ. ಇದೇ ಕಾರಣಕ್ಕೆ ನಾವೆಲ್ಲರೂ ಪ್ರಾಂಶುಪಾಲರಿಗೆ ಫೋನ್ ಕರೆ ಮಾಡುವ ಮೂಲಕ ಚಳವಳಿ ಆರಂಭಿಸಿದ್ದೇವೆ ಎಂದರು.
ಹುತಾತ್ಮರಿಗೆ ನಡೆಯುವ ಶ್ರದ್ದಾಂಜಲಿ ಸಭೆಯ ಭಾಷಣದೂದ್ದಕ್ಕೂ ಯುದ್ದೋನ್ಮಾದ ಮಾತುಗಳನ್ನು ವಿದ್ಯಾರ್ಥಿ ಸಮುದಾಯದೆದುರು ಹೇಳಿದ್ದು, ಇವರು ಯಾವ ಸಂದೇಶವನ್ನು ವಹೇಳಲು ಹೊರಟಿದ್ದಾರೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಿತ್ತು. ಏನೂ ದಾಖಲೆಗಳಿಲ್ಲದ ಹಸಿ ಹಸಿ ಸುಳ್ಳುಗಳನ್ನು ವಿದ್ಯಾರ್ಥಿಗಳ ತಲೆಗೆ ತುಂಬಿಸಿ ಕೋಮುವಿಷಬೀಜ ಬಿತ್ತುವ ಚಕ್ರವರ್ತಿ ಸೂಲಿಬೆಲೆಯ ಭಾಷಣವನ್ನು ಪ್ರಾಂಶುಪಾಲರು ಕೇಳಿಯೂ ವೇದಿಕೆಯಲ್ಲಿ ಒಂದಿನಿತು ಆಕ್ಷೇಪ ಮಾಡಿಲ್ಲ. ಪ್ರಾಂಶುಪಾಲರ ನಡೆಯ ವಿರುದ್ದ ಹೋರಾಟ ತೀವ್ರಗೊಳ್ಳುವ ಅಗತ್ಯತೆ ಇದೆ ಎಂದರು.
ಚಿಂತಕ ರಾಮಕೃಷ್ಣ ಹೇರಳೆ ಮಾತನಾಡಿ, ನಾವು ಇಲ್ಲಿ ಸೇರಿರೋದು ಯಾವುದೇ ವ್ಯಕ್ತಿಯ,ಪಕ್ಷದ, ಸಂಘಟನೆಯ ನೇತೃತ್ವದಲ್ಲಿ ಅಲ್ಲ. ಇದೊಂದು ಸಾಮುದಾಯಿಕ ನೇತೃತ್ವದ ರೂಪದಲ್ಲಿ ವಿಷಯಾಧಾರಿತವಾಗಿ ಚರ್ಚಿಸಿ ಮುಂದಿನ ಹೋರಾಟಗಳ ಬಗ್ಗೆ ಚರ್ಚೆ ಮಾಡೋಣ. ಕಾಲೇಜು ಕ್ಯಾಂಪಸ್ ಒಂದನ್ನು ಯಾವುದೇ ರಾಜಕೀಯ ಪಕ್ಷದ ತರಬೇತಿ ಕ್ಯಾಂಪ್ ಆಗಿ ಬಳಕೆಯಾಗುವುದರ ಬಗ್ಗೆ ತೀವ್ರ ಆಕ್ಷೇಪವಿದೆ. ನಾವು ಕಲಿತ, ಸಮಾಜದಲ್ಲಿ ನಮಗೊಂದು ಸ್ಥಾನಮಾನ ನೀಡಿದ ಹೆಮ್ಮೆಯ ಕಾಲೇಜು ಇಂದು ಇಂತಹ ಮಟ್ಟಕ್ಕೆ ತಲುಪಿರುವುದು ದುರಂತ ಎಂದರು.
ಸಭೆಯಲ್ಲಿ ವಿವಿಧ ಸಂಘಟನೆಗಳ, ಪಕ್ಷಗಳ ಮುಖಂಡರು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಬಳಿಕ ನಿಯೋಗದಲ್ಲಿರುವ ಮುಖಂಡರು ಕಾಲೇಜಿಗೆ ತೆರಳಿ ಪ್ರಾಂಶುಪಾಲರನ್ನು ಭೇಟಿ ಮಾಡಿ ವಿದ್ಯಾರ್ಥಿಗಳೆದುರು ಸೂಲಿಬೆಲೆಯವರನ್ನು ಕರೆಸಿ ಭಾಷಣ ಮಾಡಲು ಅನುವು ಮಾಡಿಕೊಟ್ಟಿರುವುದಕ್ಕೆ ಬೇಷರತ್ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು. ಪ್ರಾಂಶುಪಾಲರು ಹಾಗೂ ಮುಖಂಡರ ಮಧ್ಯೆ ಕೆಲ ನಿಮಿಷಗಳ ಕಾಲ ವಾಗ್ವಾದ ನಡೆಯಿತು. ಬಳಿಕ ಮುಖಂಡರು ಪ್ರಾಂಶುಪಾಲರ ಕೊಠಡಿಯಿಂದ ವಾಪಾಸ್ಸಾಗಿ ಮುಂದಿನ ಹೋರಾಟಗಳ ಬಗ್ಗೆ ಚರ್ಚೆ ನಡೆಸಿದರು.
ಬಾಲಕೃಷ್ಣ ಶೆಟ್ಟಿ, ಎಚ್ ನರಸಿಂಹ, ವಿನೋದ್ ಕ್ರಾಸ್ತಾ, ದೀಪಕ್ ನಾವುಂದ, ರಮೇಶ್ ಶೆಟ್ಟಿ ವಕ್ವಾಡಿ, ಹುಸೇನ್ ಹೈಕಾಡಿ, ಚಂದ್ರಶೇಖರ ಶೆಟ್ಟಿ, ರಾಜೇಶ ವಡೇರಹೋಬಳಿ, ಚಂದ್ರಶೇಖರ ಖಾರ್ವಿ, ಪ್ರಭಾಕರ ಕೋಡಿ, ಗಣೇಶ್ ಮೆಂಡನ್, ಜಾನ್ ಡಿಸೋಜಾ ಮೊದಲಾದವರು ಭಾಗವಹಿಸಿದರು.
ಫೆಬ್ರವರಿ 25ರ ಬೆಳಗ್ಗೆ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಹುತಾತ್ಮ ಸೈನಿಕರಿಗೆ ಶ್ರದ್ದಾಂಜಲಿ ಅರ್ಪಿಸುವ ಕಾರ್ಯಕ್ರಮಕ್ಕೆ ಟೀಮ್ ಮೋದಿ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆಯವರನ್ನು ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಲು ಆಹ್ವಾನಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆಯವರು ವಿದ್ಯಾರ್ಥಿಗಳ ತಲೆಗೆ ಕೋಮು ವಿಷಬೀಜವನ್ನು ತುಂಬಿಸುವ, ಅನೇಕ ಕಪೋಲಕಲ್ಪಿತ ಕತೆಗಳನ್ನು, ಹಸಿ ಹಸಿ ಸುಳ್ಳುಗಳನ್ನು ತಮ್ಮ ಭಾಷಣದೂದ್ದಕ್ಕೂ ಹೇಳಿದ್ದಾರೆ ಎಂದು ಆರೋಪಿಸಲಾಗಿತ್ತು. ಸಂಘಟನೆಗಳ ಮುಖಂಡರ ಆರೋಪಕ್ಕೆ ಪುಷ್ಠಿ ನೀಡುವಂತೆ ಕಾಲೇಜಿನಲ್ಲಿ ಚಕ್ರವರ್ತಿ ಸೂಲಿಬೆಲೆ ಮಾಡಿರುವ ಭಾಷಣದ ವಿಡಿಯೋ ಇದೀಗ ವೈರಲ್ ಆಗುತ್ತಿದೆ.