ಕುಂದಾಪುರ: ಅಭಿಮತ ಸಂಭ್ರಮ `ಒಡ್ಡೋಲಗ’ ಕಾರ್ಯಕ್ರಮ

ಕುಂದಾಪುರ: ಜನಸೇವಾ ಟ್ರಸ್ಟ್ ಕೋಟ-ಮೂಡುಗಿಳಿಯಾರು ಆಶ್ರಯದಲ್ಲಿ ಶನಿವಾರ ಇಲ್ಲಿನ ಸಂಯುಕ್ತ ಪ್ರೌಢ ಶಾಲೆಯ ಮೈದಾನದ ಮೈನಾಡಿಮನೆ ದಿ| ಕುಶಲ ಹೆಗ್ಡೆ ವೇದಿಕೆಯಲ್ಲಿ ಅಭಿಮತ ಸಂಭ್ರಮ `ಒಡ್ಡೋಲಗ’ ಕಾರ್ಯಕ್ರಮ ಜರಗಿತು.

ಸಾಮಾಜಿಕ ಚಿಂತಕರಾದ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. 

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮುಖ್ಯಸ್ಥ ಡಾ| ಮೋಹನ್ ಆಳ್ವಾ ಮಾತನಾಡಿ, ಜನಾಸೇವಾ ಟ್ರಸ್ಟ್ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಸಮಾಜಕ್ಕೆ ಮಾದರಿಯಾಗಿದೆ ಹಾಗೂ ಇಂದು ಸಮ್ಮಾನಗೊಂಡಿರುವ ಸಾಧಕರು ಅತ್ಯಂತ ಶ್ರೇಷ್ಠ ಸಾಧನೆಗಳನ್ನು ಮಾಡಿರುತ್ತಾರೆ. ಮುಂದೆ  ಅಗತ್ಯ ಸಹಕಾರಗಳನ್ನು ನೀಡುವುದಾಗಿ ತಿಳಿಸಿದರು.  

ಬಿಗ್ ಬಾಸ್ ಖ್ಯಾತಿಯ ಧನರಾಜ್ ಮಾತನಾಡಿ, ಕುಂದಾಪುರದ ಭಾಷೆ, ಸಂಸ್ಕೃತಿ, ಸಂಸ್ಕಾರಗಳು ಯಾವುದೇ ಊರಿಗೆ ಹೋದರು ನೋಡ ಸಿಗದು. ಆದ್ದರಿಂದ ನಾವು ಯಾವುದೇ ಊರಲ್ಲಿದ್ದರು ನಮ್ಮ ಸಂಸ್ಕೃತಿ, ಸಂಸ್ಕಾರ ಮರೆಯಬಾರದು ಎಂದರು. ಈ ಸಂದರ್ಭ ಖ್ಯಾತ ಕನ್ನಡ ಚಿತ್ರ ನಿರ್ದೇಶಕ ರಿಷಭ್ ಶೆಟ್ಟಿ, ಹಿಂದೂ ರುದ್ರಭೂಮಿಯಲ್ಲಿ ಸೇವೆ ಸಲ್ಲಿಸುವ ವನಜ ಪೂಜಾರಿ, ಕ್ರೀಡಾಕ್ಷೇತ್ರದ ಸಾಧಕ ಗುರುರಾಜ್ ಪೂಜಾರಿಗೆ ಕೀರ್ತಿ ಕಲಶ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ಊರಿನ ಸಾಧಕರಾದ ಅಶೋಕ್ ಜಿ.ವಿ., ನಾಗರತ್ನಾ ಹೇರ್ಳೆ, ಜೀವನ್‌ಮಿತ್ರ ನಾಗರಾಜ್ ಪುತ್ರನ್, ರಾಘವೇಂದ್ರ ಮೊಗವೀರ, ಅಭಿಲಾಷ್ ಶೆಟ್ಟಿಗೆ ಯಶೋಗಾಥೆ ಪುರಸ್ಕಾರ ನೀಡಲಾಯಿತು. ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನೂರೆಂಟು ವರ್ಷದ ಗುರುವ ಕೊರಗ ಅವರನ್ನು ಸಮ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್, ಖ್ಯಾತ ಚಿತ್ರ ನಿರ್ಮಾಪಕ ಪ್ರಮೋದ್ ಶೆಟ್ಟಿ, ಉದ್ಯಮಿ ಉದಯ ಹೆಗ್ಡೆ, ಬಿಲ್ಲವ ಮುಖಂಡ ಎನ್.ಟಿ.ಪೂಜಾರಿ ಮುಂಬ, ಮರಾಠ ಸುರೇಶ ಶೆಟ್ಟಿ, ರತ್ನಾಕರ ಶೆಟ್ಟಿ ಬಡಾಮನೆ, ದೀಪಕ್ ಶೆಟ್ಟಿ ಬಾರ್ಕೂರು, ಸಹಾನ ಸುರೇಂದ್ರ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಜನಸೇವಾ ಟ್ರಸ್ಟ್‌ನ ಅಧ್ಯಕ್ಷ ವಸಂತ್ ಗಿಳಿಯಾರು ಸ್ವಾಗತಿಸಿ, ಪತ್ರಕರ್ತ ಚಂದ್ರಶೇಖರ್ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.