ಕುಂದಾಪುರ: ಚೌತಿಯ ಸಡಗರ,ಆನೆಗುಡ್ಡೆಯಲ್ಲಿ ಭಕ್ತರ ದಂಡು                 

ಕುಂದಾಪುರ: ತಾಲೂಕಿನೆಲ್ಲೆಡೆಯಲ್ಲಿ ಗಣೇಶ ಚತುರ್ಥಿ ಹಬ್ಬವನ್ನು ಸೋಮವಾರದಂದು ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು. ಬೆಳಿಗ್ಗೆನಿಂದಲೇ ಮಳೆಯಿಲ್ಲದ ಕಾರಣ ಪ್ರಮುಖ ಗಣಪತಿ ದೇವಾಲಯಗಳಲ್ಲಿ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ತೆರಳಿ ವಿಶೇಷ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು.

ಆನೆಗುಡ್ಡೆಯಲ್ಲಿ ಭಕ್ತರ ದಂಡು                 
ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಬೆಳಿಗ್ಗೆನಿಂದಲೇ ವಿಶೇಷ ಪೂಜಾ-ಕೈಂಕರ್ಯಗಳು, ಗಣಹೋಮ, ಮಹಾಪ್ರಸಾದ ಮೊದಲಾದ ಧಾರ್ಮಿಕ ಕಾರ್ಯಗಳು ನಡೆದವು. ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಅನಿವಾಸಿ ಭಾರತೀಯ ದುಬೈ ಉದ್ಯಮಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ಮೀನುಗಾರರ ಮುಖಂಡ ಯಶಪಾಲ ಸುವರ್ಣ ಮೊದಲಾದವರು ಆನೆಗುಡ್ಡೆ ದೇವಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಸಾವಿರಾರು ಮಂದಿ ಭಕ್ತರು ಹಣ್ಣುಕಾಯಿ, ತೀರ್ಥ, ಅನ್ನಪ್ರಸಾದ ಸೇವೆಯಲ್ಲಿ ಪಾಲ್ಗೊಂಡರು.

ಗಣಪತಿ ಎಲ್ಲಾ ಗಣಗಳಿಗೂ ಅಧಿಪತಿ. ಹೀಗಾಗಿ ಎಲ್ಲಾ ಪೂಜೆ ಪುನಸ್ಕಾರ ಸಂದರ್ಭವೂ ಪ್ರಥಮ ಪೂಜಿತ ವಿಘ್ನ ವಿನಾಶಕನ ಪೂಜೆ ನಡೆಸಿ ಆತನ ಕ್ರಪೆಗೆ ಪಾತ್ರರಾಗುತ್ತಾರೆ. ಗಣೇಶನಿಗೆ ಗರಿಕೆ ಅಥವಾ ದೂರ್ವೆ ಬಲು ಪ್ರಿಯವಾದುದು. ಅದಕ್ಕಾಗಿಯೇ ಆತನಿಗೆ ದೂರ್ವಾರ್ಚನೆ ನಡೆಸುವ ಸಂಪ್ರದಾಯವೂ ಇದೆ. ಸಿಹಿ ಮೋದಕ ಪ್ರಿಯ ಗಣಪ ಎನ್ನುವ ಪುರಾಣವೂ ಇದೆ.

ಇನ್ನು ತಾಲೂಕಿನ ಹಟ್ಟಿಯಂಗಡಿ, ಗುಡ್ಡಟ್ಟು ಜಲಾದಿವಾಸಿ ಗಣಪತಿ ದೇವಸ್ಥಾನ, ಬೇಳೂರಿನ ಕಲ್ಲುಗಣಪತಿ ದೇವಸ್ಥಾನ, ಮರವಂತೆ ಅರೆಹೊಳೆ ಗಣಪತಿ ದೇವಸ್ಥಾನ ಮೊದಲಾದೆಡೆ ಗಣೇಶ ಚತುರ್ಥಿ ಪ್ರಯುಕ್ತ ಭಕ್ತರ ದಂಡು ತುಂಬಿತ್ತು.

ತಾಲೂಕಿನ ಎಲ್ಲಾ ಗ್ರಾಮಗಳಲ್ಲಿಯೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯುತ್ತಿದೆ, ಇದಕ್ಕಾಗಿ ಸಕಲ ಸಿದ್ಧತೆಗಳು ನಡೆದಿದ್ದು ಗಣಪತಿ ಪ್ರತಿಷ್ಠಾಪನೆ ಸಕಲ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನಡೆಯಿತು.

ಕುಂದಾಪುರ ಡಿವೈಎಸ್ಪಿ ಬಿ.ಪಿ. ದಿನೇಶ್ ಕುಮಾರ್, ಸಿಪಿಐ ಮಂಜಪ್ಪ ನೇತೃತ್ವದಲ್ಲಿ ಠಾಣಾಧಿಕಾರಿ ಹರೀಶ್ ಆರ್. ನಾಯ್ಕ್, ಕುಂದಾಪುರ ಸಂಚಾರಿ ಠಾಣೆಯ ಉಪನಿರೀಕ್ಷಕಿ ಪುಷ್ಪಲತಾ ಮತ್ತು ಸಿಬ್ಬಂದಿಗಳು ಸಂಚಾರಿ ಹಾಗೂ ಬಂದೋಬಸ್ತ್ ವ್ಯವಸ್ಥೆಯನ್ನು ಕಲ್ಪಿಸಿದರು.