ಕುಂದಾಪುರ: ಮೊಬೈಲ್ ಅಂಗಡಿ ಮಾಲೀಕನಿಗೆ ದುಷ್ಕರ್ಮಿಗಳ ತಂಡವೊಂದು ರಿವಾಲ್ವರ್ ತೋರಿಸಿ ಲಕ್ಷಾಂತರ ರೂಪಾಯಿ ನಗದು ಹಾಗೂ ಸೊತ್ತುಗಳನ್ನು ಸುಲಿಗೆ ಮಾಡಿರುವ ಘಟನೆ ಕುಂದಾಪುರದಲ್ಲಿ ನಡೆದಿದೆ.
ಬೈಂದೂರಿನ ಮುಸ್ತಾಫ್ ಎಂಬವರು ನಗದು ಹಾಗೂ ಸೊತ್ತು ಕಳೆದುಕೊಂಡ ಮೊಬೈಲ್ ಅಂಗಡಿ ಮಾಲೀಕ. ಇವರು ಎಂದಿನಂತೆ ಸೆ.17ರಂದು ರಾತ್ರಿ ಶಾಪ್ ಬಂದ್ ಮಾಡಿ ಕುಂದಾಪುರದ ಫ್ಲ್ಯಾಟ್ ಗೆ ಹೋಗುತ್ತಿದ್ದರು.
ಈ ವೇಳೆ ಕಾರಿನಲ್ಲಿ ಮೂವರೊಂದಿಗೆ ಬಂದ ಮುಕ್ತಾರ್ ಎಂಬಾತ ಮುಸ್ತಾಫ್ ನನ್ನು ಅಡ್ಡಗಟ್ಟಿ ಕಾರಿನೊಳಗೆ ಎಳೆದೊಯ್ದಿದ್ದು, ಬಂದೂಕು ತೋರಿಸಿ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ.
ಹೋಗುವ ದಾರಿಮಧ್ಯೆ ಆರೋಪಿಗಳು ಬೆಂಗಳೂರಿನ ಎಟಿಎಮ್ ಹಾಗೂ ಸ್ವೈಪಿಂಗ್ ಮೆಷಿನ್ ನಿಂದ ₹ 3,14,100 ಡ್ರಾ ಮಾಡಿಕೊಂಡಿದ್ದಾರೆ. ಬಳಿಕ ಬೆಂಗಳೂರಿನ ಸರ್ಜಾಪುರದ ವಸತಿಗೃಹವೊಂದಕ್ಕೆ ಕರೆದುಕೊಂಡು ಹೋಗಿದ್ದು, ಅಲ್ಲಿ 50 ಸಾವಿರಕ್ಕೆ ಬೇಡಿಕೆ ಇಟ್ಟಿದ್ದಾರೆ.
ಅಲ್ಲದೆ, ಮುಸ್ತಾಫ್ ಬಳಿಯಿಂದ ಮೊಬೈಲ್ ವಶಕ್ಕೆ ಪಡೆದ ಅರೋಪಿಗಳು, ಬ್ಯಾಂಕ್ ಖಾತೆಯನ್ನು ಓಪನ್ ಮಾಡಿ ತಮ್ಮ ಖಾತೆಗೆ ₹ 50 ಸಾವಿರ ಜಮಾ ಮಾಡಿಕೊಂಡಿದ್ದರು. ಚೆಕ್ ಬುಕ್ ಪಡೆದುಕೊಂಡು ಸಹಿ ಮಾಡಲು ಹೇಳಿದ್ದಾರೆ. ಅಲ್ಲದೆ, ಊರಿಗೆ ಹೋದ ಮೇಲೆ ಖಾತೆಗೆ ಹಣ ಜಮಾ ಮಾಡಬೇಕು. ಇಲ್ಲದಿದ್ದರೆ ದಾಖಲೆ, ಮೊಬೈಲ್ ಹಾಗೂ ಇನ್ನಿತರ ವಸ್ತುಗಳನ್ನು ಕೊಡುವುದಿಲ್ಲ ಬೆದರಿಸಿದ್ದಾರೆ.
ಬಳಿಕ ಸೆ.18 ರಂದು ರಾತ್ರಿ 9.30ರ ವೇಳೆಗೆ ಆರೋಪಿಗಳು ಮುಸ್ತಾಫ್ ಅವರನ್ನು ಬಿಟ್ಟಿದ್ದಾರೆ. ಆರೋಪಿಗಳು ಮುಸ್ತಾಫ್ ಅವರಿಂದ ಒಟ್ಟು ₹ 4,64,175 ನಗದು ಹಾಗೂ ₹1,00,000 ಮೌಲ್ಯದ ಸ್ವತ್ತುಗಳನ್ನು ಸುಲಿಗೆ ಮಾಡಿದ್ದಾರೆ ಎಂದು ಮುಸ್ತಾಫ್ ದೂರು ನೀಡಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.