ಕುಂದಾಪುರ: ಭಗ್ನ ಪ್ರೇಮಿಯೊಬ್ಬ ಯುವತಿಗೆ ಚೂರಿ ಇರಿದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪುರ ಸಮೀಪದ ಶಿರಿಯಾರ ರಾಮಮಂದಿರ ಬಳಿ ಇಂದು ಸಂಜೆ ನಡೆದಿದೆ. ಅದೃಷ್ಟವಶಾತ್ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ರಿಕ್ಷಾ ಚಾಲಕ ರಾಘವೇಂದ್ರ ಕುಲಾಲ್(35) ಎಂಬಾತ ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಇಂದು ಸಂಜೆ ಶಿರಿಯಾರ ರಾಮಮಂದಿರ ಬಳಿ ಯುವತಿಗೆ ಚೂರಿ ಇರಿದಿದ್ದಾನೆ. ಬಳಿಕ ಹೆಸ್ಕೂತ್ತೂರಿನ ಹಾರ್ಯಾಡಿಯಲ್ಲಿ ಬಳಿ ತಾನೂ ನೇಣಿಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.
ರಾಘವೇಂದ್ರ ಕುಲಾಲ್ ಕಳೆದ ಕೆಲವು ತಿಂಗಳಿನಿಂದ ಶಿರಿಯಾರದ ಆಭರಣ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿರುವ ಯುವತಿಗೆ ಪ್ರೀತಿಸುವಂತೆ ಪೀಡಿಸುತ್ತಿದ್ದನು. ಆದರೆ ಯುವತಿ ಆತನ ಪ್ರೀತಿಯನ್ನು ನಿರಾಕರಿಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ರಾಘವೇಂದ್ರ ಇಂದು ಮಧ್ಯಾಹ್ನ ಯುವತಿ ಊಟಕ್ಕೆ ತೆರಳುವ ಸಮಯವನ್ನು ಪಕ್ಕಾ ಮಾಡಿಕೊಂಡು ಹೊಂಚು ಹಾಕಿ ಕುಳಿತಿದ್ದ. ಯುವತಿ ಊಟಕ್ಕೆ ತೆರಳುತ್ತಿದ್ದಂತೆ ಹಿಂಬಾಲಿಸಿಕೊಂಡು ಹೋಗಿ ಚೂರಿಯಿಂದ ಇರಿದಿದ್ದಾನೆ. ಚೂರಿಯ ಇರಿತಕ್ಕೆ ಯುವತಿಯ ಕೈಯಲ್ಲಿ ರಕ್ತ ಚಿಮ್ಮಿ, ಕೈ ಪೂರ್ತಿ ರಕ್ತಸಿಕ್ತಗೊಂಡಿದೆ. ಈ ಭಯಾನಕ ದೃಶ್ಯವನ್ನು ಕಂಡು ಗಾಬರಿಗೊಂಡ ಭಗ್ನ ಪ್ರೇಮಿ ರಘು, ಅಲ್ಲಿಂದ ಕಾಲ್ಕಿತ್ತಿದ್ದಾನೆ. ಬಳಿಕ ತನ್ನ ಮನೆಯ ಬಳಿಗೆ ಹೋಗಿ ಅಲ್ಲಿಯೇ ಸಮೀಪದ ಹೆಸ್ಕೂತ್ತೂರಿನ ಹಾಡಿಯಲ್ಲಿ ಮರವೊಂದಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ರಾಘವೇಂದ್ರನ ಕಿರುಕುಳ ತಾಳಲಾರದೆ ಯುವತಿ ಈ ಹಿಂದೆಯೂ ಒಮ್ಮೆ ಕೋಟ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಪೊಲೀಸರು ಆತನಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದರು. ಆದರೆ ಇಂದು ತನ್ನ ವಿಕೃತ ಮನಸ್ಥಿತಿಯಿಂದ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.