ಕುಂದಾಪುರ: ಅಕ್ರಮವಾಗಿ ದಾಸ್ತಾನು ಮಾಡಿಟ್ಟುಕೊಂಡಿದ್ದ ಲಕ್ಷಾಂತರ ಮೌಲ್ಯದ ಪಡಿತರ ಅಕ್ಕಿಯನ್ನು ಕುಂದಾಪುರ ಆಹಾರ ನಿರೀಕ್ಷಕರು ಹಾಗೂ ಕುಂದಾಪುರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡ ಘಟನೆ ಕೋಟೇಶ್ವರದ ಹಾಲಾಡಿ ರಸ್ತೆಯ ಶೆಡ್ ವೊಂದರಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ತಲೆಮರೆಸಿಕೊಂಡ ಆರೋಪಿಗಳನ್ನು ಮಂಗಳೂರು ನಿವಾಸಿ ಆಜಾಮ್, ಕೋಟೇಶ್ವರ ನಿವಾಸಿ ಉದಯ್ ಕುಮಾರ್ ಶೆಟ್ಟಿ ಹಾಗೂ ಉಡುಪಿ ನಿವಾಸಿ ರಮಾ ಪೂಜಾರಿ ಎಂದು ಗುರುತಿಸಲಾಗಿದ್ದು, ಇವರ ಪತ್ತೆಗೆ ಪೋಲಿಸರು ಬಲೆ ಬೀಸಿದ್ದಾರೆ.
ಕಾರ್ಯಾಚರಣೆ ಸಂದರ್ಭದಲ್ಲಿ ₹3.76 ಲಕ್ಷ ಮೌಲ್ಯದ 25,120 ಕೆ.ಜಿ. ಪಡಿತರ ಅಕ್ಕಿ, ₹2 ಲಕ್ಷ ಮೌಲ್ಯದ ಗೂಡ್ಸ್ ವಾಹನ, ₹ 4 ಲಕ್ಷ ಮೌಲ್ಯದ ಲಾರಿ, ₹2 ಸಾವಿರ ಮೌಲ್ಯದ ಹೊಲಿಗೆ ಯಂತ್ರ ಹಾಗೂ ₹ 3 ಸಾವಿರ ಮೌಲ್ಯದ ತೂಕಯಂತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.