ಕುಂದಾಪುರ: ಬೈಕ್ ಗೆ ಕಾರು ಡಿಕ್ಕಿ; ಇಬ್ಬರು ಮೃತ್ಯು

ಕುಂದಾಪುರ: ಮಾರುತಿ ಆಲ್ಟೊ ಹಾಗೂ ಬೈಕ್ ನಡುವೆ ಡಿಕ್ಕಿ ಆದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ರಾತ್ರಿ ಕುಂದಾಪುರ ಕೋಡಿ ಬೀಚ್ ರಸ್ತೆಯ ಚರ್ಚ್ ಬಳಿ ಸಂಭವಿಸಿದೆ.

ಮೃತರನ್ನು ಮದ್ದುಗುಡ್ಡೆಯ ಕಿರಣ್ ಮೆಸ್ತಾ (24) ಮತ್ತು ರವೀಂದ್ರ ಕುಮಾರ್ (25) ಎಂದು ಗುರುತಿಸಲಾಗಿದೆ. ಇವರು ರಾತ್ರಿ ಸುಮಾರು 10.30ಕ್ಕೆ ಬೈಕ್ ನಲ್ಲಿ ಮನೆಕಡೆ ಹೋಗುತ್ತಿರುವ ಸಂದರ್ಭದಲ್ಲಿ ಎದುರಿನಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಇಬ್ಬರೂ ರಸ್ತೆಗೆ ಎಸೆಯಲ್ಪಟ್ಟು ತೀವ್ರಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಮೃತರಲ್ಲಿ ಕಿರಣ್ ಮೆಡಿಕಲ್ ರೆಪ್ ಉದ್ಯೋಗಿಯಾಗಿದ್ದು, ರವೀಂದ್ರ ಉಡುಪಿಯ ಲಾಡ್ಜ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎಂದು ತಿಳಿದುಬಂದಿದೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.