ಕುಂದಾಪುರ:ಮತದಾರರ ಜಾಗೃತಿ ಅಭಿಯಾನ

ಕುಂದಾಪುರ: ನಾವೆಲ್ಲರೂ ಸಂವಿಧಾನಾತ್ಮಕವಾದ ಹಕ್ಕನ್ನು ಕೇಳುತ್ತೇವೆ. ಸಂವಿಧಾನದಲ್ಲಿ ನಮ್ಮ ಕರ್ತವ್ಯಗಳೂ ಇವೆ. ಕಡ್ಡಾಯವಾಗಿ ಮತದಾನ ಮಾಡುವುದು ನಮ್ಮೆಲ್ಲರ ಕರ್ತವ್ಯ. ಹೊಸದಾಗಿ ಮತದಾನ ಹಕ್ಕನ್ನು ಪಡೆದ ಯುವ ಮತಾದರರು ಯಾವುದೇ ಆಮಿಷಕ್ಕೊಳಗಾಗದೆ ಉತ್ಸಾಹದಿಂದ ಮತದಾನ ಮಾಡಬೇಕು ಎಂದು ಕುಂದಾಪುರ ಸಹಾಯಕ ಆಯುಕ್ತ ಡಾ. ಮಧುಕೇಶ್ವರ್ ಹೇಳಿದರು.

ಅವರು ಭಾರತ ಚುನಾವಣಾ ಆಯೋಗ, ಉಡುಪಿ ಜಿಲ್ಲಾಡಳಿತ ಹಾಗೂ ಸ್ವೀಪ್ ಸಮಿತಿ ಉಡುಪಿ ಜಿಲ್ಲೆ ಇದರ ಸಹಯೋಗದಲ್ಲಿ ಮಂಗಳವಾರ ಕುಂದಾಪುರದ ಗಾಂಧಿಮೈದಾನದಲ್ಲಿ ಜರಗಿದ ಮತದಾರರ ಜಾಗೃತಿ ಅಭಿಯಾನಯನ್ನುದ್ದೇಶಿಸಿ ಮಾತನಾಡಿದರು.

ಸ್ವತಂತ್ರವಾಗಿ ಆಲೋಚನೆ ಮಾಡಿ ಸೂಕ್ತವಾದ ವ್ಯಕ್ತಿಗೆ ಮತವನ್ನು ಚಲಾವಣೆ ಮಾಡಬೇಕು ಎನ್ನುವುದೇ ಈ ಅಭಿಯಾನದ ಪ್ರಮುಖ ಉದ್ದೇಶ. ಈ ಅಭಿಯಾನದಲ್ಲಿ ಪಾಲ್ಗೊಂಡ ಎಲ್ಲಾ ಯುವ ಮತದಾರರು ತಮ್ಮ ತಂದೆ-ತಾಯಿ, ಸಹೋದರ-ಸಹೋದರಿಯರು ಸೇರಿದಂತೆ ಪ್ರತಿಯೊಬ್ಬರಿಗೂ ಮತದಾನ ಜಾಗೃತಿ ಮೂಡಿಸಬೇಕು ಎಂದು ಮನವಿ ಮಾಡಿದರು.

ಕುಂದಾಪುರ ಕ್ಷೇತ್ರಶಿಕ್ಷಣಾಧಿಕಾರಿ ಅಶೋಕ್ ಕಾಮತ್ ಮತದಾರರ ಪ್ರತಿಜ್ಞಾವಿಧಿ ಭೋದಿಸಿದರು. ವಿವಿಧ ಕಾಲೇಜು ವಿದ್ಯಾರ್ಥಿಗಳು ಪ್ರತಿಜ್ಞಾವಿಧಿ ಸ್ವೀಕರಿಸಿದರು. ಬಳಿಕ ಮತದಾರರ ಜಾಗೃತಿ ಅಭಿಯಾನದ ಬೃಹತ್ ರ್‍ಯಾಲಿಗೆ ಸಹಾಯಕ ಆಯಕ್ತ ಡಾ. ಮಧುಕೇಶ್ವರ್ ಹಸಿರು ಬಾವುಟ ತೋರಿಸುವ ಮೂಲಕ ಚಾಲನೆ ನೀಡಿದರು. ಈ ವೇಳೆಯಲ್ಲಿ ತಾ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಕಿರಣ್ ಫಡ್ನೇಕರ್, ತಹಶೀಲ್ದಾರ್ ವಿಜಯೇಂದ್ರ ಬಾಡ್ಕರ್, ಡಿವೈಎಸ್‌ಪಿ ಬಿ.ಪಿ ದಿನೇಶ್ ಕುಮಾರ್, ಪುರಸಭಾ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ತಾಲೂಕು ಆರೋಗ್ಯಾಧಿಕಾರಿ ನಾಗಭೂಷಣ ಉಡುಪ, ಯುವಜನಸೇವಾ ಕ್ರೀಡಾ ಇಲಾಖೆಯ ಕುಸುಮಾಕರ್ ಶೆಟ್ಟಿ, ಸಮಾಜಕಲ್ಯಾಣ ಇಲಾಖೆ ರಾಘವೇಂದ್ರ, ಸ್ವೀಪ್ ಸಂಪರ್ಕಾಧಿಕಾರಿಗಳಾದ ಪ್ರಕಾಶ್ಚಂದ್ರ ಶೆಟ್ಟಿ ಹಾಗೂ ದಿನಾಕರ್ ಶೆಟ್ಟಿ, ಸುಬ್ರಹ್ಮಣ್ಯ ಜೋಶಿ, ವಡೇರಹೋಬಳಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಚಂದ್ರಶೇಖರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಕ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.