ಫೆ. 14 ರಂದು ಶಬರಿಮಲೆಯಲ್ಲಿ ಕುಂಭಮಾಸ ಪೂಜೆ

ತಿರುವನಂತಪುರ: ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಸ್ಥಳ ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಿಯ ಗರ್ಭಗುಡಿ ಕುಂಭಮಾಸ ಪೂಜೆಯ ಪ್ರಯುಕ್ತ ಫೆ. 13ರಂದು ತೆರೆದುಕೊಳ್ಳಲಿದೆ.

ಸಂಜೆ 5 ಗಂಟೆಗೆ ತಂತ್ರಿವರ್ಯರಾದ ಕಂಠಾರರ್ ಮಹೇಶ್ ಮೋಹನ್ ಉಪಸ್ಥಿತಿಯಲ್ಲಿ ಮೇಲ್ಶಾಂತಿ ಪಿ.ಎನ್. ಮಹೇಶ್ ಗರ್ಭಗುಡಿಯ ಬಾಗಿಲು ತೆರೆದು ದೀಪ ಬೆಳಗಿಸಲಿದ್ದಾರೆ. ಫೆ.14ರ ಬೆಳಗ್ಗೆ 5:30ಕ್ಕೆ ಮಹಾಗಣಪತಿ ಹೋಮದೊಂದಿಗೆ ಪೂಜೆಗಳು ಆರಂಭವಾಗಲಿದ್ದು, ಫೆ. 18ರವರೆಗೆ ಪ್ರತಿದಿನ ಉದಯಾಸ್ತಮಯ ಪೂಜೆ, ಪಡಿಪೂಜೆ, ಕಲಶಾಭಿಷೇಕ, ಪುಷ್ಪಾಭಿಷೇಕ, ಅಪ್ಪಾಭಿಷೇಕ ನಡೆಯಲಿದೆ.

ಈ ಅವಧಿಯಲ್ಲಿ ಭೇಟಿ ನೀಡುವ ಭಕ್ತರಿಗಾಗಿ ಫೆ.13 ರಂದು 30 ಸಾವಿರ, ಇತರ ದಿನಗಳಲ್ಲಿ 50 ಸಾವಿರ ಮಂದಿಗೆ ವರ್ಚುವಲ್ ಕ್ಯೂ ಮೂಲಕ ಬುಕ್ಕಿಂಗ್ ಲಭ್ಯವಿದೆ. ಸನ್ನಿಧಾನಕ್ಕೆ ಆಗಮಿಸುವ ಅಯ್ಯಪ್ಪ ಭಕ್ತರ ವಾಹನಗಳು ಸ್ಟ್ಯಾಂಡ್‌ನಲ್ಲಿ ನಿಲುಗಡೆ ಮಾಡಬೇಕಾಗಿದ್ದು, ಪಂಬಾದಲ್ಲಿ ಪಾರ್ಕಿಂಗ್ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.