ಕುಂಭಾಶಿ: ಕೆರೆ ಸ್ವಚ್ಛತಾ ಹಾಗೂ ಮರು ನಿರ್ಮಾಣಕ್ಕೆ ರೋಹಿತ್ ಭಟ್ ಅವರಿಂದ ಚಾಲನೆ

ಕುಂದಾಪುರ: ಉಡುಪಿಯ ವೆಂಟನಾ ಫೌಂಡೇಶನ್ ನೇತೃತ್ವದಲ್ಲಿ ಕುಂಭಾಶಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊರವಡಿ ರಸ್ತೆಯ ಶ್ರೀ ವಿಷ್ಣು ಮೂರ್ತಿ ದೇವಾಸ್ಥಾನ ಸಮೀಪ ಕೊಯ್ಯಾರಿ ಕೆರೆಯನ್ನು ಸ್ಚಚ್ಚಗೊಳಿಸುವ ಕಾರ್ಯಕ್ಕೆ ಮೇ 8ರಂದು ಚಾಲನೆ ನೀಡಲಾಯಿತು.

ಮುಂದಿನ ಹತ್ತು ದಿನಗಳ ಕಾಲ ನಡೆಯುವ ಸ್ವಚ್ಚತಾ ಕಾರ್ಯದ ಸಂಪೂರ್ಣ ವೆಚ್ಚವನ್ನು ಸೇವಾ ರೂಪದಲ್ಲಿ ಫೌಂಡೇಶನ್ ಮೂಲಕ ನಡೆಸಲಾಗುವುದು. ಮೊದಲು ನೀರನ್ನು ಬರಿದಾಗಿಸಿ, ಹೂಳನ್ನು ಎತ್ತಿ ಸಂಪೂರ್ಣವಾಗಿ ಸ್ವಚ್ಚಗೊಳಿಸಿ ಸುತ್ತಲಿನ ಗದ್ದೆಗಳಿಗೆ ನೀರು ಸಿಗುವಂತೆ ಮಾಡಲಾಗುವುದು.

ಸ್ಥಳೀಯ ರೈತರಿಗೆ ಬೇಸಾಯದ ಜೊತೆಯಲ್ಲಿ ತರಕಾರಿ, ವಾಣಿಜ್ಯ ಬೆಳೆಯನ್ನು ವರ್ಷವಿಡಿ ಬೆಳೆಯಲು‌ ಸಹಕಾರಿಯಾಗಲಿದೆ.

ಉಡುಪಿಯ ವೆಂಟನಾ ಫೌಂಡೇಶನ್ ನ ಅಧ್ಯಕ್ಷ ಹಾಗೂ ಉಡುಪಿಯ ಮಾಹಿತಿ ತಂತ್ರಜ್ಞಾನದ ದಿಗ್ಗಜ 99ಗೇಮ್ಸ್ ಆನ್‌ಲೈನ್ ಪ್ರೈ. ಲಿ ನ ವ್ಯವಸ್ಥಾಪಕ‌ ನಿರ್ದೇಶಕ ರೋಹಿತ್ ಭಟ್ ಚಾಲನೆ ನೀಡಿ ಪರಿಸರದ ಉಳಿವಿಗಾಗಿ ಜಲ ಸಂರಕ್ಷಣೆ ಅತ್ಯಗತ್ಯ. ಅದರಂತೆಯೇ ಕೆರೆಯ ಮರು ನಿರ್ಮಾಣದೊಂದಿಗೆ ನೀರನ್ನು ಉಳಿಸುವುದರೊಂದಿಗೆ ಈ ಪರಿಸರದ ಜನರಿಗೆ ಹಾಗೂ ಪಕ್ಷಿ‌ಸಂಕುಲಕ್ಕೆ ಸಹಕಾರಿಯಾಗಲಿದೆ ಎಂದರು.

ಇತ್ತೀಚೆಗೆ ಆರಂಭಗೊಂಡ ಈ ಫೌಂಡೇಶನ್ ಮೂಲಕ ಸರಕಾರಿ ಹಿರಿಯ ಪ್ರಾಥಮಿಕ‌ ಶಾಲೆ‌ ಕೊರವಡಿ ಇಲ್ಲಿನ ಶಿಥಿಲಾವಸ್ಥೆಯಲ್ಲಿದ್ದ ಹೆಣ್ಣು ಮಕ್ಕಳ ಶೌಚಾಲಯದ ನಿರ್ಮಾಣ ಕಾರ್ಯ ಈಗಾಗಲೇ ಆರಂಭಗೊಂಡಿದೆ. ಈ ಕಟ್ಟಡ ಜೂನ್ ಅಂತ್ಯದ ಒಳಗೆ ಪೂರ್ಣಗೊಳ್ಳಲಿದೆ ಎಂದರು. ಮುಂದಿನ ದಿನಗಳಲ್ಲಿ ಸಮಾಜ ಮುಖಿ ಕಾರ್ಯಗಳಲ್ಲಿ ಫೌಂಡೇಶನ್ ಮೂಲಕ‌ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ತೊಡಗಿಸಿಕೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಕುಂಭಾಶಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ವೇತಾ ಎಸ್. ಆರ್. ಮಾತನಾಡುತ್ತಾ ಎಲ್ಲವೂ ಸರಕಾರದ ವತಿಯಿಂದ ನಡೆಯಬೇಕು ಎನ್ನುವುದು ತಪ್ಪು ಕಲ್ಪನೆ. ಸರಕಾರೇತರ ಸಂಸ್ಥೆಯ ಮುಖೇನ ಸಾಮಾಜಿಕ ಕಳಕಳಿಯ ಕಾರ್ಯಗಳು ನಡೆದರೆ ಹಲವು ಯೋಜನೆಗಳನ್ನು ಹಮ್ಮಿಕೊಂಡು ಸಮಾಜದ ಸರ್ವರಿಗೂ ಉಪಕಾರಿಯಾಗಬಲ್ಲದು ಎಂದರು. ಈ ಕಾರ್ಯವನ್ನು ಕೈಗೆತ್ತಿಕೊಂಡು ಸಹಕರಿಸಿದ ರೋಹಿತ್ ಭಟ್ ಹಾಗೂ ವೆಂಟನಾ ಫೌಂಡೇಶನ್ ಗೆ ಧನ್ಯವಾದಗೈದರು.

ಈ ಸಂಧರ್ಭದಲ್ಲಿ ಫೌಂಡೇಶನ್ ಸದಸ್ಯ ರವೀಂದ್ರ ಕೆ, ರೋಟರಿ ಸಮುದಾಯದ ದಳದ ಅಧ್ಯಕ್ಷ ಶ್ರೀಧರ್ ಪುರಾಣಿಕ್, ಎಂಜಿನಿಯರ್ ಶ್ರೀನಿಧಿ ಉಪಾಧ್ಯ ಗ್ರಾಮ ಪಂಚಾಯತ್ ವಾರ್ಡ್ ಸದಸ್ಯರಾದ ಆನಂದ ಪೂಜಾರಿ, ಸ್ಥಳೀಯ ಹಿರಿಯರಾದ , ಸುರೇಶ್ ಹೆಬ್ಬಾರ್, ಸಂಜೀವ, ಶಿವ, ಬಾಬು, ವಿಶ್ವನಾಥ ಹಾಗೂ ಪರಿಸರದ ರೈತರು, ಸ್ಥಳೀಯರು ಉಪಸ್ಥತರಿದ್ದು ಸ್ಚಚ್ಚತಾ ಕಾರ್ಯಕ್ಕೆ ಸಹಕರಿಸಿದರು.

ಶ್ವೇತಾ ಎಸ್ ಆರ್ ಸ್ವಾಗತಿಸಿದರು ಹಾಗೂ ಚಂದ್ರ ಇಂಬಾಳಿ ಧನ್ಯವಾದ ವಂದಿಸಿದರು.

ಈ‌ ಹಿಂದೆ ರೋಹಿತ್ ಭಟ್ ಅವರ ನೇತ್ರತ್ವ ಹಾಗೂ ಮುತುವರ್ಜಿಯಿಂದ ರೋಬೋಸಾಪ್ಟ್ ಸಂಸ್ಥೆಯ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (CSR)ಯ ಅಡಿಯಲ್ಲಿ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಿಗೆ ಲಕ್ಷಾಂತರ ರೂಪಾಯಿ ಮೌಲ್ಯದ ಕಂಪ್ಯೂಟರ್, ಪೀಠೋಪಕರಣ, ಪ್ರೊಜೆಕ್ಟರ್ ಹಾಗೂ ಅದಕ್ಕೆ ಸಂಬಂಧಿತ ಪರಿಕರಗಳನ್ನು‌ ಕೊಡುಗೆಯಾಗಿ ನೀಡಲಾಗಿತ್ತು, ಅಲ್ಲದೇ ಕೋವಿಡ್ ಸಮಯದಲ್ಲಿ ಉಡುಪಿ ಜಿಲ್ಲಾ ಆಸ್ಪತ್ರೆಗೆ ಎರಡು ಆಕ್ಸಿಜನ್ ವೆಂಟಿಲೇಟರ್, ನಿರ್ಗತಿಕರಿಗೆ ಊಟದ ವ್ಯವಸ್ಥೆಗೆ ಧನ ಸಹಾಯ, ಆಕ್ಸೀಮೀಟರನ್ನು ನೀಡಲಾಗಿರುವುದನ್ನು ಇಲ್ಲಿ‌ ನೆನಪಿಸಿಕೊಳ್ಳಬಹುದು.