ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಮೂರು ಹತ್ಯೆ ಪ್ರಕರಣಗಳ ನೈಜ ಆರೋಪಿಗಳನ್ನು ಆ.5 ರೊಳಗೆ ಪತ್ತೆಹಚ್ಚಿ ಬಂಧಿಸಬೇಕು. ಆರೋಪಿಗಳ ಪತ್ತೆಯಲ್ಲಿ ಸರಕಾರ ಯಶಸ್ವಿಯಾಗದಿದ್ದಲ್ಲಿ ಆ.6 ರಿಂದ ಮಂಗಳೂರಿನಲ್ಲಿ ಧರಣಿ ನಡೆಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಹತ್ಯೆಯಾದ ಮಸೂದ್, ಪ್ರವೀಣ್ ನೆಟ್ಟಾರು, ಸುರತ್ಕಲ್ನ ಫಾಝಿಲ್ ಮನೆಗೆ ಸೋಮವಾರ ಭೇಟಿ ನೀಡಿದ ಬಳಿಕ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ದಕ್ಷಿಣ ಕನ್ನಡ ಜಿಲ್ಲೆ ಸಹಿತ ನಮ್ಮ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟವಾಗಬೇಕು. ಈ ರೀತಿಯ ಹತ್ಯೆಗಳು ಇಲ್ಲಿಗೆ ಕೊನೆಯಾಗಬೇಕು. ಮುಂದಕ್ಕೆ ಯಾವುದೇ ಹತ್ಯೆ ನಡೆಯಬಾರದು. ನೈಜ ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂಬುದು ನಮ್ಮ ಆಶಯ. ಹತ್ಯೆಯಾದ ಮೂವರು ಯುವಕರ ಮನೆಯವರೂ ಇದೇ ಆಶಯ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಕ್ಷಣ ನೈಜ ಆರೋಪಿಗಳ ಬಂಧನವಾಗಬೇಕು. ಧರಣಿ ಕೂರುವ ತೀರ್ಮಾನದ ಹಿಂದೆ ಯಾವುದೇ ಸ್ವಾರ್ಥ, ರಾಜಕೀಯ ಉದ್ದೇಶ ಇಲ್ಲ. ನನ್ನ ತೀರ್ಮಾನಕ್ಕೆ ಬೆಂಬಲ ನೀಡುವುದು ಜನತೆಗೆ ಬಿಟ್ಟ ವಿಷಯ ಎಂದರು.
ಹತ್ಯೆಯಾದ ಮೂರು ಕುಟುಂಬಗಳನ್ನು ಭೇಟಿ ಮಾಡಿ ಆ ಕುಟುಂಬಗಳ ಹಿನ್ನೆಲೆ, ಮುಂದಿನ ಪರಿಸ್ಥಿತಿಗಳ ಬಗ್ಗೆ ಚರ್ಚಿಸಿದ್ದೇನೆ. ಮುಂದಿನ ಬೆಳವಣಿಗೆ ನೋಡಿಕೊಂಡು ವಿಧಾನಸಭೆಯಲ್ಲೂ ಈ ಬಗ್ಗೆ ಧ್ವನಿ ಎತ್ತುತ್ತೇನೆ ಎಂದು ಹೆಚ್.ಡಿ.ಕೆ ಹೇಳಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಬಿ.ಎಂ. ಫಾರೂಕ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಬಿ. ಸದಾಶಿವ, ದ.ಕ. ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ, ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಮುಖಂಡ ಮಹಮ್ಮದ್ ಕುಂಞ್ ಉಪಸ್ಥಿತರಿದ್ದರು.