ಕುಬ್ಜಾ ನದಿಯಲ್ಲಿ ಪತ್ತೆಯಾಯ್ತು ಮಗುವಿನ ಶವ: ಕುಂದಾಪುರ ಮಗು ಅಪಹರಣ ಪ್ರಕರಣಕ್ಕೆ ತಿರುವು

ಕುಂದಾಪುರ: ಯಡಮೊಗೆ ಅಪಹರಣಕ್ಕೊಳಗಾಗಿತ್ತೆನ್ನಲಾದ ಮಗು ಕಾರೂರು ಸಮೀಪದ ಕುಬ್ಜಾ ನದಿಯಲ್ಲಿ ಶವವಾಗಿ ಪತ್ತೆಯಾಗಿದೆ. ಈ ಮೂಲಕ ಮಗುವಿನ ಅಪಹರಣ ಪ್ರಕರಣ ಕೊಂಚ ತಿರುವು ಪಡೆದಿದ್ದು, ಪ್ರಕರಣದ ಸುತ್ತ ಹಲವು ಅನುಮಾನುಗಳು ಹುಟ್ಟಿಕೊಂಡಿವೆ.

ಕುಂದಾಪುರ ತಾಲೂಕಿನ ಯಡಮೊಗೆಯ ಕುಮ್ಟಿಬೇರು ಎಂಬಲ್ಲಿ ಗುರುವಾರ ಮುಂಜಾನೆ ಸಂತೋಷ್ ನಾಯ್ಕ್ ಅವರ ಪತ್ನಿ ರೇಖಾ ತನ್ನಿಬ್ಬರು ಮಕ್ಕಳೊಂದಿಗೆ ಮಲಗಿದ್ದಾಗ ಅಪರಿಚಿತನೋರ್ವ ಬಂದು ಒಂದು ವರ್ಷದ ಮಗು ಸಾನ್ವಿಕಾಳನ್ನು ಅಪಹರಣ ಮಾಡಿ ಬಳಿಕ ಮನೆ ಬಳಿಯ ಕುಬ್ಜಾ ನದಿಯಲ್ಲಿ ಸಾಗಿ ಪರಾರಿಯಾಗಿದ್ದನು ಎನ್ನಲಾಗಿತ್ತು. ತಾಯಿ ರೇಖಾ ಇನ್ನೋರ್ವ ಮಗನೊಂದಿಗೆ ನೀರಿನಲ್ಲಿಳಿದು ಮಗುವನ್ನು ರಕ್ಷಿಸುವ ಪ್ರಯತ್ನ ಮಾಡಿದರೂ ಅದು ಅಸಾಧ್ಯವಾಗಿತ್ತು, ಅಪಹರಣಕಾರ ಮರೆಯಾಗಿದ್ದ ಎಂದು ರೇಖಾ ಪೊಲೀಸರಿಗೆ ಹೇಳಿಕೆ ನೀಡಿದ್ದರು.

ಖುದ್ದು ಉಡುಪಿ ಎಸ್ಪಿ ನಿಶಾ ಜೇಮ್ಸ್ ಸ್ಥಳದಲ್ಲಿ ಸಂಜೆಯವರೆಗೂ ಹಾಜರಿದ್ದು ತನಿಖೆಗೆ ಮಾರ್ಗದರ್ಶನ ನೀಡಿದ್ದು ಹಲವರ ವಿಚಾರಣೆಯನ್ನು ನಡೆಸಲಾಗಿತ್ತು. ಗಂಭೀರ ಪ್ರಕರಣವಾದ ಕಾರಣ ಕುಂದಾಪುರ ಡಿವೈಎಸ್ಪಿ ದಿನೇಶ್ ಕುಮಾರ್ ನೇತೃತ್ವ ತನಿಖೆ ಮುಂದುವರೆದಿತ್ತು.
ಶುಕ್ರವಾರದಂದು ಕೂಡ ಡಿವೈಎಸ್ಪಿ ನೇತೃತ್ವ ಸಾರ್ವಜನಿಕರು ಕುಬ್ಜಾ ಹೊಳೆಯಲ್ಲಿ ಹುಡುಕಾಟ ನಡೆಸಿದ್ದು ಮನೆಯಿಂದ ಅರ್ಧ ಕಿ.ಮೀ. ದೂರದ ಕಾರೂರು ಎಂಬಲ್ಲಿ ಹೊಳೆಯಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದ್ದು ಈ ಬಳಿಕ ಹಲವು ಅನುಮಾನಗಳು ವ್ಯಕ್ತವಾಗಿದೆ‌.

ಪ್ರಕರಣ ಬೇರೆಯದ್ದೇ ತಿರುವು ಪಡೆಯುವ ಸಾಧ್ಯತೆಯಿದ್ದು ಪೊಲೀಸರಿಂದ ಮಗುವಿನ ತಾಯಿ-ತಂದೆಯ ತೀವೃ ವಿಚಾರಣೆ ನಡೆಯುತ್ತಿದೆ. ಸ್ಥಳಕ್ಕೆ ಪೊಲೀಸ್ ಉನ್ನತಾಧಿಕಾರಿಗಳು ಭೇಟಿ ನೀಡಿದ್ದಾರೆ.

ಮಗುವಿನ ಶವ ಸಿದ್ದಾಪುರ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ‌. ಮಣಿಪಾಲದಲ್ಲಿ ಮರಣೋತ್ತರ ಪರೀಕ್ಷೆ ನಡೆಸುವ ಸಾಧ್ಯತೆಗಳಿದೆ.