ಉಡುಪಿ: ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ಇವರ ವತಿಯಿಂದ “ಹಾವು -ನಾವು” ತುಳು ನಾಡಿನಲ್ಲಿ ನಾಗಾರಾಧನೆಯ ಹಿಂದಿರುವ ಸತ್ಯಾಂಶಗಳು ಧಾರ್ಮಿಕ ಹಾಗೂ ವೈಜ್ಞಾನಿಕ ಚಿಂತನೆಯ ಮಾಹಿತಿಯ ಕಾರ್ಯಕ್ರಮ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಮಾತನಾಡಿ, ಧರ್ಮ ಹಾಗೂ ವಿಜ್ಞಾನ ಬಗ್ಗೆ ವಿಶಿಷ್ಟ ಕಾರ್ಯಕ್ರಮ ಇದಾಗಿದೆ. ಧಾರ್ಮಿಕ ಹಿನ್ನಲೆಯುಳ್ಳ ನಾಗಬನ ಪರಿಸರದ ಉಳಿಯುವಿಕೆಗೆ ಕೊಡುಗೆ ನೀಡಿದೆ. ನಾಗಬನವನ್ನು ವನವನ್ನಾಗಿಸಿ ಪರಿಸರವನ್ನು ರಕ್ಷಿಸಿ, ಶುದ್ಧತೆಗೆ ಆದ್ಯತೆ ನೀಡಬೇಕು. ಕುರುಡು ನಂಬಿಕೆಯಿಲ್ಲದೆ, ಪೂಜೆಯಲ್ಲಿ ವೈಜ್ಞಾನಿಕತೆಯಿದ್ದು ಶುದ್ಧ ನಂಬಿಕೆ ಹಾಗೂ ಭಾವ ಮುಖ್ಯವಾಗಿರುತ್ತದೆ. ಹಾವುಗಳಲ್ಲಿರುವ ವಿವಿಧತೆ ಹಾಗೂ ಅವುಗಳ ಬಗ್ಗೆ ನಮಗಿರುವ ಭಯವನ್ನು ದೂರ ಮಾಡಿ ಅವುಗಳನ್ನು ಸಂರಕ್ಷಿಸುವುದರ ಬಗ್ಗೆ ನಡೆಸಿದ ಈ ಕಾರ್ಯಕ್ರಮವು ಉಪಯುಕ್ತವಾಗಿರುತ್ತದೆ ಎಂದರು.
ಅದಮಾರು ಕಿರಿಯ ಮಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು,ಪಲಿಮಾರು ಕಿರಿಯ ಮಠಾಧೀಶರಾದ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಭಾಗವಹಿಸಿದ್ದರು.
ವಿದ್ವಾನ್.ಕೊಳಕಾಡಿ ವಾದಿರಾಜ ಉಪಾಧ್ಯ ಇವರು ಧಾರ್ಮಿಕ ಚಿಂತನೆ ನಡೆಸಿದರು. ಪುತ್ತೂರಿನ ಉರಗತಜ್ಞರಾದ ಡಾ.ರವೀಂದ್ರನಾಥ್ ಐತಾಳ್ ಇವರು ಹಾವುಗಳ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.
ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ತಿನ ಅಧ್ಯಕ್ಷರಾದ ವಿಷ್ಣುಪ್ರಸಾದ್ ಪಾಡಿಗಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು, ಕೋಶಾಧಿಕಾರಿಗಳಾದ ಕುಮಾರಸ್ವಾಮಿ ಉಡುಪ ವಂದಿಸಿದರು.