ಉಡುಪಿ: ಅದಮಾರು ಮಠದ ಪರ್ಯಾಯ ಮಹೋತ್ಸವಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ಹಾಕಿರುವ ಸ್ವಾಗತ ಕಮಾನುಗಳು ಪರ್ಯಾಯದ ವೈಭವಕ್ಕೆ ಮತ್ತಷ್ಟು ಮೆರಗು ನೀಡುತ್ತಿವೆ. ರಥಬೀದಿಗೆ ಸಂಪರ್ಕಿಸುವ ತೆಂಕಪೇಟೆ ಮಾರ್ಗದಲ್ಲಿ ತೆಂಗಿನ ಚಿಪ್ಪುಗಳಿಂದ ಶೃಂಗಾರಗೊಂಡಿರುವ ಬೃಹತ್ ಸ್ವಾಗತ ಕಮಾನು ಜನರನ್ನು ಆಕರ್ಷಿಸುತ್ತಿದೆ. ನಗರದ ಪ್ರಮುಖ ಪ್ರವೇಶದ್ವಾರಗಳಲ್ಲಿ ಅವಳಡಿಸಿರುವ ಸ್ವಾಗತ ಗೋಪುರಗಳು ವಿವಿಧ ಸಂಸ್ಕೃತಿ, ಪರಂಪರೆಯ ಶೈಲಿಯಲ್ಲಿ ಬಿಂಬಿಸುತ್ತಿವೆ. ಆದರೆ ತೆಂಕಪೇಟೆಯ ಸ್ವಾಗತ ಕಮಾನು ಬುಡಕಟ್ಟು ಸಮುದಾಯದ ಸಾಂಪ್ರದಾಯಿಕ ಶೈಲಿಯಲ್ಲಿ ಕಂಗೊಳಿಸುತ್ತಿದೆ.
ಕೊರಗ ಯುವಕರಿಂದ ಕುಸರಿ ಕಾರ್ಯ:
ಕೊರಗ ಯುವ ಸಂಘಟನೆಯ ಸುದರ್ಶನ್ ಕೋಟ್ ಹಾಗೂ ಶರತ್ ಕುಂಭಾಶಿ ನೇತೃತ್ವದ ತಂಡ ಈ ಕಾಮಾನಿನ ವಿನ್ಯಾಸ ಕಾರ್ಯವನ್ನು ಮಾಡಿದೆ. ಇದಕ್ಕೆ ಬೇಕಾದ ಎಲ್ಲ ಕುಸರಿ ಕಾರ್ಯವನ್ನು ಕುಂಭಾಶಿಯಲ್ಲಿ ಮಾಡಲಾಗಿದ್ದು, ಇಲ್ಲಿಗೆ ತಂದು ಜೋಡಣೆ ಮಾಡಲಾಗಿದೆ. ಕಮಾನು ನಿರ್ಮಾಣಕ್ಕೆ 9 ದಿನಗಳು ಹಿಡಿದಿದ್ದು, 5 ದಿನ ಹಗಲು ಹಾಗೂ 4 ದಿನ ಹಗಲು ಮತ್ತು ರಾತ್ರಿ ಕೆಲಸ ಮಾಡಿದ್ದಾರೆ. ಯುವಕರ ಶ್ರಮದ ಫಲವಾಗಿ ಅದ್ಭುತ ಕಲಾತ್ಮಕವಾದ ಕಾಮಾನು
ನಿರ್ಮಾಣವಾಗಿದೆ. ಈ ತಂಡ ಈಗಾಗಲೇ ಬೀಚ್ ಉತ್ಸವ, ಧಾರ್ಮಿಕ ಉತ್ಸವ, ಜಾತ್ರೆಗಳಲ್ಲಿ ಕಲಾತ್ಮಕ ಮತ್ತು ಸಾಂಪ್ರದಾಯಿಕ ರೀತಿಯಲ್ಲಿ ವಿವಿಧ ವಿನ್ಯಾಸ ತಯಾರಿಸಿದ್ದಾರೆ. ವೇದಿಕೆ ಅಲಂಕಾರ, ಸ್ವಾಗತ ಕಾಮಾನು ಹಾಗೂ ಬುಟ್ಟಿ ಹೆಣೆಯುವ ಕಾಯಕದಲ್ಲಿ ಈ ಯುವಕರು ತೊಡಗಿಕೊಂಡಿದ್ದಾರೆ.
ವಿವಿಧ ವಿನ್ಯಾಸದ ಬುಟ್ಟಿ ಹೆಣೆದು ಜಾತ್ರೆ ಹಾಗೂ ಉತ್ಸವಗಳಲ್ಲಿ ಪ್ರದರ್ಶನ ಮತ್ತು ಮಾರಾಟ ಮಾಡುತ್ತಿದ್ದಾರೆ. ಸಾಂಪ್ರದಾಯಿಕ ಶೈಲಿಯ ಕಲೆಯನ್ನು ಈ ತಂಡ ರೂಢಿಸಿಕೊಂಡಿದೆ. ಕಲಾವಿದ ಪುರೋಷತ್ತಮ ಅಡ್ವೆ ಮಾರ್ಗದರ್ಶನದಲ್ಲಿ ಯುವಕರು ಕೆಲಸ ಮಾಡುತ್ತಿದ್ದಾರೆ ಎನ್ನುತ್ತಾರೆ ಕೊರಗ ಯುವ ಸಂಘಟನೆಯ ಗಣೇಶ್ ವಿ. ಕೊರಗ ಕುಂಭಾಶಿ.