ಶ್ರೀಕೃಷ್ಣನ ಜನ್ಮವನ್ನು ಸ್ಮರಿಸುವ ಪವಿತ್ರ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಸೆಪ್ಟೆಂಬರ್ 4ರಂದು ಆಚರಿಸಲಾಗುತ್ತಿದೆ. ಅಷ್ಟಮಿ ತಿಥಿ ಹಾಗೂ ರೋಹಿಣಿ ನಕ್ಷತ್ರದ ಸಂಯೋಗದಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಿಸುವುದು ಸಂಪ್ರದಾಯವಾಗಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೆಪ್ಟೆಂಬರ್ 4ರಂದು ರಾತ್ರಿ 11.16ರವರೆಗೆ ಅಷ್ಟಮಿ ತಿಥಿ ಇರಲಿದೆ. ರೋಹಿಣಿ ನಕ್ಷತ್ರವು ರಾತ್ರಿ 11.14ರವರೆಗೆ ಇರಲಿದೆ. ಹೀಗಾಗಿ ಅಷ್ಟಮಿ ತಿಥಿ ಹಾಗೂ ರೋಹಿಣಿ ನಕ್ಷತ್ರ ಇರುವ ಅವಧಿಯಲ್ಲಿ ಕೃಷ್ಣನ ಪೂಜೆ ಹಾಗೂ ವ್ರತದ ಪ್ರಮುಖ ಆಚರಣೆಗಳನ್ನು ನೆರವೇರಿಸುವುದು ಶ್ರೇಯಸ್ಕರ ಎಂದು ಹೇಳಲಾಗುತ್ತದೆ.
ಮಧ್ಯರಾತ್ರಿಯಲ್ಲೇ ಕೃಷ್ಣನ ಪೂಜೆ ಏಕೆ?
ಸಾಮಾನ್ಯವಾಗಿ ಹಬ್ಬ-ಹರಿದಿನಗಳನ್ನು ಹಗಲಿನ ವೇಳೆಯಲ್ಲಿ ಆಚರಿಸಲಾಗುತ್ತದೆ. ಆದರೆ ಶ್ರೀಕೃಷ್ಣನು ಅಷ್ಟಮಿ ತಿಥಿಯ ರೋಹಿಣಿ ನಕ್ಷತ್ರದಲ್ಲಿ ಮಧ್ಯರಾತ್ರಿಯಲ್ಲಿ ಜನಿಸಿದನು ಎಂಬ ನಂಬಿಕೆ ಇದೆ. ಹೀಗಾಗಿ ಕೃಷ್ಣ ಜನ್ಮಾಷ್ಟಮಿಯ ಪೂಜೆಯನ್ನು ರಾತ್ರಿ ವೇಳೆ, ವಿಶೇಷವಾಗಿ ಮಧ್ಯರಾತ್ರಿಯ ಸಂದರ್ಭದಲ್ಲಿ ನೆರವೇರಿಸಲಾಗುತ್ತದೆ.
ಶ್ರೀಕೃಷ್ಣನ ಜನನದೊಂದಿಗೆ ಜಗತ್ತಿನಲ್ಲಿದ್ದ ಅಂಧಕಾರ ದೂರವಾಗಿ ಸತ್ಯ, ನ್ಯಾಯ ಮತ್ತು ನಿಷ್ಠೆ ನೆಲೆಗೊಂಡವು ಎಂಬ ಧಾರ್ಮಿಕ ನಂಬಿಕೆಯೂ ಇದೆ.


ವ್ರತ ಆಚರಣೆ ಹೇಗೆ?
ಕೃಷ್ಣ ಜನ್ಮಾಷ್ಟಮಿಯಂದು ವ್ರತ ಆಚರಿಸುವವರು ಸಾಮಾನ್ಯವಾಗಿ ದಿನವಿಡೀ ಉಪವಾಸವಿದ್ದು, ರಾತ್ರಿ ಕೃಷ್ಣನ ಪೂಜೆ ನೆರವೇರಿಸುತ್ತಾರೆ. ವಯೋವೃದ್ಧರು, ಅಶಕ್ತರು ಹಾಗೂ ಅನಾರೋಗ್ಯದಿಂದ ಬಳಲುತ್ತಿರುವವರು ಸಂಪೂರ್ಣ ಉಪವಾಸ ಮಾಡಲು ಸಾಧ್ಯವಾಗದಿದ್ದರೆ ಹಣ್ಣುಗಳನ್ನು ಸೇವಿಸಿ ವ್ರತ ಆಚರಿಸಬಹುದು.
ಬೆಳ್ಳಿ, ಬಂಗಾರ ಅಥವಾ ತಾಮ್ರದಿಂದ ತಯಾರಿಸಿದ ಶ್ರೀಕೃಷ್ಣನ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುವ ಪದ್ಧತಿಯಿದೆ. ಬಾಲಕೃಷ್ಣನ ವಿಗ್ರಹವನ್ನು ಪೂಜಿಸುವುದು ವಿಶೇಷ ಫಲಪ್ರದ ಎಂಬ ನಂಬಿಕೆಯಿದೆ. ಕೆಲವರು ಕೃಷ್ಣನ ಭಾವಚಿತ್ರಕ್ಕೂ ಪೂಜೆ ಸಲ್ಲಿಸುತ್ತಾರೆ. ನಂದಗೋಪ ಸೇರಿದಂತೆ ಕೃಷ್ಣನ ಕುಟುಂಬದ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸುವ ಸಂಪ್ರದಾಯವೂ ಇದೆ.
ಪೂಜೆಯನ್ನು ಗಣಪತಿ ಆರಾಧನೆಯಿಂದ ಆರಂಭಿಸಿ, ಅಂತ್ಯದಲ್ಲಿ ದಾನ-ಧರ್ಮ ಮಾಡುವ ಮೂಲಕ ಪೂರ್ಣಗೊಳಿಸಲಾಗುತ್ತದೆ. ಈ ಬಾರಿ ಜನ್ಮಾಷ್ಟಮಿ ಶುಕ್ರವಾರದಂದು ಬರುತ್ತಿರುವುದರಿಂದ ದಕ್ಷಿಣೆ ಇಟ್ಟು ತಾಂಬೂಲ ನೀಡುವುದು ಕೂಡ ಸಂಪ್ರದಾಯದ ಭಾಗವಾಗಿದೆ.




ಮಕ್ಕಳಿಗೆ ಬೆಣ್ಣೆ, ಕೃಷ್ಣನಿಗೆ ಅವಲಕ್ಕಿ ನೈವೇದ್ಯ:
ಶ್ರೀಕೃಷ್ಣನಿಗೆ ರುಚಿಕರವಾದ ಆಹಾರವೆಂದರೆ ಬಹಳ ಇಷ್ಟ ಎಂಬ ನಂಬಿಕೆ ಇದೆ. ಹೀಗಾಗಿ ಜನ್ಮಾಷ್ಟಮಿಯಂದು ನೈವೇದ್ಯಕ್ಕಾಗಿ ವಿವಿಧ ಬಗೆಯ ಕರಿದ ತಿಂಡಿ-ತಿನಿಸುಗಳನ್ನು ತಯಾರಿಸಲಾಗುತ್ತದೆ.
ಕೃಷ್ಣನಿಗೆ ಅತ್ಯಂತ ಪ್ರಿಯವಾದ ಅವಲಕ್ಕಿಯನ್ನು ವಿಶೇಷ ಖಾದ್ಯವಾಗಿ ತಯಾರಿಸಿ ನೈವೇದ್ಯ ಮಾಡಲಾಗುತ್ತದೆ. ಪೂಜೆಯ ಬಳಿಕ ಮನೆಯ ಮಕ್ಕಳಿಗೆ ಬೆಣ್ಣೆ ತಿನ್ನಿಸುವುದು ಕೂಡ ಕೃಷ್ಣ ಜನ್ಮಾಷ್ಟಮಿಯ ವಿಶೇಷ ಆಚರಣೆಗಳಲ್ಲಿ ಒಂದಾಗಿದೆ.
ಗೋವಿನ ಪೂಜೆಗೆ ವಿಶೇಷ ಮಹತ್ವ:
ಈ ದಿನ ಗೋವಿನ ಪೂಜೆ ಮಾಡುವುದಕ್ಕೂ ಧಾರ್ಮಿಕವಾಗಿ ವಿಶೇಷ ಮಹತ್ವವಿದೆ. ವಿಶೇಷವಾಗಿ ಗರ್ಭ ಧರಿಸಿದ ಗೋವಿನ ಪೂಜೆಯಿಂದ ಜನ್ಮಕುಂಡಲಿಯಲ್ಲಿರುವ ಸಂತಾನ ದೋಷಗಳು ಪರಿಹಾರವಾಗುತ್ತವೆ ಎಂಬ ಜ್ಯೋತಿಷ್ಯ ನಂಬಿಕೆಯಿದೆ.
ಕಂಸನ ಸಂಹಾರಕ್ಕಾಗಿ ಕೃಷ್ಣನ ಅವತಾರ:
ಪುರಾಣಗಳ ಪ್ರಕಾರ, ದುಷ್ಟ ರಾಜನಾದ ಕಂಸನಿಗೆ ತನ್ನ ಸೋದರಿಯ ಗರ್ಭದಲ್ಲಿ ಜನಿಸುವ ಎಂಟನೇ ಪುತ್ರನಿಂದಲೇ ಮರಣ ಸಂಭವಿಸಲಿದೆ ಎಂಬ ಭವಿಷ್ಯವಾಣಿ ತಿಳಿದಿತ್ತು. ಹೀಗಾಗಿ ತನ್ನ ಸೋದರಿ ದೇವಕಿ ಹಾಗೂ ಆಕೆಯ ಪತಿ ವಸುದೇವರನ್ನು ಸೆರೆಮನೆಯಲ್ಲಿ ಬಂಧಿಸಿಟ್ಟನು.
ದೇವಕಿಗೆ ಜನಿಸಿದ ಮಕ್ಕಳನ್ನು ಕಂಸನು ಕೊಲ್ಲುತ್ತಿದ್ದನು. ಆದರೆ ಎಂಟನೇ ಮಗನಾಗಿ ಜನಿಸಿದ ಶ್ರೀಕೃಷ್ಣನನ್ನು ವಸುದೇವರು ಕಂಸನ ಕಣ್ಣಿಗೆ ಬೀಳದಂತೆ ಗೋಕುಲಕ್ಕೆ ಕರೆದೊಯ್ದು ರಕ್ಷಿಸಿದರು. ಬಳಿಕ ವಿಧಿಯಂತೆ ಶ್ರೀಕೃಷ್ಣನೇ ಕಂಸನನ್ನು ಸಂಹರಿಸಿದನು ಎಂಬುದು ಪುರಾಣ ಕಥನ.
ಹೀಗಾಗಿ ಕೃಷ್ಣ ಜನ್ಮಾಷ್ಟಮಿಯು ಕೇವಲ ಹಬ್ಬವಲ್ಲದೆ ಅಧರ್ಮದ ವಿರುದ್ಧ ಧರ್ಮದ ವಿಜಯ, ಅಂಧಕಾರದ ವಿರುದ್ಧ ಬೆಳಕಿನ ಗೆಲುವಿನ ಸಂಕೇತವಾಗಿಯೂ ಆಚರಿಸಲಾಗುತ್ತದೆ.









































