ಪಕ್ಷ ಬಿಟ್ಟು ಹೋಗುವವರಿದ್ದರೆ ಗೌರವದಿಂದ ಕಳಿಸಿಕೊಡೋಣ: ಪ್ರಮೋದ್ ಮಧ್ವರಾಜ್ ವಿರುದ್ಧ ಗುಡುಗಿದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ

ಉಡುಪಿ: ನನ್ನಿಂದಲೇ ಪಕ್ಷವೆಂದು ಬ್ಲ್ಯಾಕ್ ಮೇಲ್ ಮಾಡಬಹುದೆಂದು ಭಾವಿಸಿದ್ದರೆ ಅದು ಅವರ ಭ್ರಮೆ. ಕಾಂಗ್ರೆಸ್ ನಲ್ಲಿ ವ್ಯಕ್ತಿ ಪೂಜೆಗೆ ಅವಕಾಶವಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಯಾರೂ ಶಾಶ್ವತವಲ್ಲ, ಕಾಂಗ್ರೆಸ್‌ ನಲ್ಲಿ ಇರುವುದೇ ಒಂದು ಸೌಭಾಗ್ಯ. ಪಕ್ಷ ಬಿಟ್ಟು ಹೋಗುವವರಿದ್ದರೆ ಅವರನ್ನು ಗೌರವದಿಂದ ಕಳಿಸಿಕೊಡೋಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪರೋಕ್ಷವಾಗಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ಗುಡುಗಿದರು.

ಭಾನುವಾರ ನಡೆದ ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಸಮಾವೇಶಕ್ಕೆ ಗೈರಾಗಿದ್ದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಗೆ ಪರೋಕ್ಷ ಎಚ್ಚರಿಕೆ ನೀಡಿದರು.

ಮನೆಯ ಚೌಕಟ್ಟಿನಲ್ಲಿ ಭಿನ್ನಾಭಿಪ್ರಾಯಗಳಿರುವುದು ನಿಜ. ಅದನ್ನು ಮನೆಯೊಳಗೆ ಪರಿಹಾರ ಮಾಡಿಕೊಳ್ಳಬೇಕು. ಅದಕ್ಕಾಗಿ ಪಕ್ಷವನ್ನು ಬಲಿ ಕೊಡಬಾರದು ಎಂದು ಪಕ್ಷದ ಭಿನ್ನ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಚಾಡಿ ಹೇಳೋದು ಬಿಡಿ. ನಾನಂತೂ ಯಾವ ಚಾಡಿನೂ ಕೇಳಲ್ಲ. ಎಲ್ಲಿ ತ್ಯಾಗ, ಪರಿಶ್ರಮ ಇರುವುದಿಲ್ಲವೋ ಅಲ್ಲಿ ಫಲ ಇರುವುದಿಲ್ಲ. ಜಿಲ್ಲೆಯಲ್ಲಿ ಒಬ್ಬರು ಕಾಂಗ್ರೆಸ್ ಶಾಸಕರು ಇಲ್ಲ, ಕಾರ್ಯಕರ್ತರು ಏನು ಮಾಡ್ಬೇಕು ಎಂದು ಪ್ರಶ್ನಿಸಿದ ಅವರು, ಮೊದಲು ಶಿಸ್ತು ಬೇಕು. ಅಧಿಕಾರ ಎಲ್ಲರಿಗೂ ಸಿಗುತ್ತೆ ಎಂದು ಹೇಳಿದರು.