ಕೋಝಿಕ್ಕೋಡ್ ರೈಲಿನಲ್ಲಿ ಬೆಂಕಿ ಪ್ರಕರಣ: ಶಂಕಿತ ಆರೋಪಿಯ ಬಂಧನ

ಕೋಝಿಕ್ಕೋಡ್ : ಅಲಪ್ಪುಳ-ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಕರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಶಂಕಿತ ಶಾರುಖ್ ಸೈಫಿ ಎಂಬಾತನನ್ನು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳದ ಸಹಯೋಗದಿಂದ ಕೇರಳ ಪೊಲೀಸರ ವಿಶೇಷ ತಂಡ ಮಹಾರಾಷ್ಟ್ರ ತಲುಪಿ ಮಂಗಳವಾರ ರಾತ್ರಿ ರತ್ನಗಿರಿಯಿಂದ ಬಂಧಿಸಿದೆ.

ರೈಲಿಗೆ ಬೆಂಕಿ ಹಚ್ಚಿದ್ದ ಆರೋಪಿಗೂ ಸುಟ್ಟ ಗಾಯಗಳಾಗಿದ್ದು, ರತ್ನಗಿರಿ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು. ಆಸ್ಪತ್ರೆಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾಗ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್)ದ ಕೈಗೆ ಸಿಕ್ಕಿಬಿದ್ದಿದ್ದಾನೆ.

ಈ ಮಧ್ಯೆ ಕೇರಳದ ಎಟಿಎಸ್ ತಂಡ ಶಾಹೀನ್ ಬಾಗ್ ತಲುಪಿ ಶಾರುಖ್ ಸೈಫಿ ಮನೆಯನ್ನು ಶೋಧಿಸಿದೆ.

ಅಲಪ್ಪುಳ-ಕಣ್ಣೂರು ಎಕ್ಸಿಕ್ಯೂಟಿವ್ ರೈಲಿನಲ್ಲಿ ಪ್ರಯಾಣಿಕರಿಗೆ ಬೆಂಕಿ ಹಚ್ಚಿದ ವ್ಯಕ್ತಿಯ ರೇಖಾಚಿತ್ರವನ್ನು ಪೊಲೀಸರು ಬಿಡುಗಡೆ ಮಾಡಿದ್ದರು. ಪ್ರತ್ಯಕ್ಷದರ್ಶಿ ರಾಝಿಕ್ ನೀಡಿದ ಮಾಹಿತಿಯ ಆಧಾರದ ಮೇಲೆ ಶಂಕಿತನ ರೇಖಾಚಿತ್ರವನ್ನು ಸಿದ್ಧಪಡಿಸಲಾಗಿದೆ. ವರದಿಗಳ ಪ್ರಕಾರ, ಶಂಕಿತನನ್ನು ಹೆಚ್ಚಿನ ತನಿಖೆಗಾಗಿ ಕೇರಳಕ್ಕೆ ಕರೆದೊಯ್ಯಲಾಗುತ್ತದೆ.

ಪ್ರಯಾಣಿಕರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ, ಭಾನುವಾರ ರೈಲು ನಿಂತಾಗ ರೈಲಿನಿಂದ ಹಾರಿ ಶಂಕಿತ ಆರೋಪಿ ಪರಾರಿಯಾಗಿದ್ದ. ಘಟನೆಯಲ್ಲಿ ಎಂಟು ಜನರಿಗೆ ಸುಟ್ಟ ಗಾಯಗಳಾಗಿದ್ದು, ಒಂದು ಮಗು ಸೇರಿದಂತೆ ಮೂವರು ಬೆಂಕಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನದ ಭಾಗವಾಗಿ ಹೊರಗೆ ಹಾರಿದ್ದು, ರೈಲು ಹಳಿಗಳ ಮೇಲೆ ಶವವಾಗಿ ಪತ್ತೆಯಾಗಿದ್ದರು. ಇದೇ ವೇಳೆ ಎಳತ್ತೂರು ರೈಲು ನಿಲ್ದಾಣದ ಬಳಿಯ ಹಳಿಯಲ್ಲಿ ದುಷ್ಕರ್ಮಿಯ ಬ್ಯಾಗ್ ಪತ್ತೆಯಾಗಿತ್ತು. ಬ್ಯಾಗ್‌ನಿಂದ ಅರ್ಧ ಬಾಟಲ್ ಪೆಟ್ರೋಲ್, ಕರಪತ್ರಗಳು, ಮೊಬೈಲ್ ಫೋನ್ ಮತ್ತು ಬಟ್ಟೆಗಳನ್ನು ಹೋಲುವ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.