ಸನ್‌ರೈಸರ್ಸ್ ಆಟಗಾರನಿಗೆ ಕೋವಿಡ್: ಇಂದಿನ ಪಂದ್ಯದ ಮೇಲೆ ಕರಿಛಾಯೆ!

ದುಬೈ: ಸನ್‌ರೈಸರ್ಸ್ ಹೈದರಾಬಾದ್ ತಂಡದ ಓರ್ವ ಆಟಗಾರನಲ್ಲಿ ಕೋವಿಡ್ ಸೋಂಕು ದೃಢಪಟ್ಟಿದ್ದು, ಈ ಹಿನ್ನೆಲೆಯಲ್ಲಿ ದುಬೈಯಲ್ಲಿ ಇಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯ ನಡೆಯಬಹುದೇ ಎಂಬ ಅನುಮಾನ ಉಂಟಾಗಿದೆ.

ತಂಡೆದೆಲ್ಲ ಆಟಗಾರರನ್ನು ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗುತ್ತಿದ್ದು, ಫಲಿತಾಂಶ ನೆಗೆಟಿವ್ ಬಂದರೆ ಮಾತ್ರ ಪಂದ್ಯ ನಿಗದಿತ ವೇಳಾಪಟ್ಟಿಯಂತೆ ನಡೆಯಲಿವೆ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಐಪಿಎಲ್ ಅಧಿಕೃತ ಟ್ವೀಟ್ ಮಾಡಿದ್ದು, ಸನ್‌ರೈಸರ್ಸ್ ತಂಡದ ಎಡಗೈ ವೇಗಿ ಟಿ. ನಟರಾಜನ್ ಅವರಿಗೆ ಕೋವಿಡ್ ಸೋಂಕು ತಗುಲಿರುವುದನ್ನು ದೃಢಪಡಿಸಿದೆ. ಅಲ್ಲದೆ ಅವರ ನಿಕಟ ಸಂಪರ್ಕದಲ್ಲಿದ್ದ ಆರು ಮಂದಿ ಪ್ರತ್ಯೇಕ ವಾಸದಲ್ಲಿದ್ದಾರೆ ಎಂದು ಪ್ರಕಟಣೆಯಲ್ಲಿ ಹೇಳಿದೆ.

ಸಹ ಆಟಗಾರ ವಿಜಯ್ ಶಂಕರ್, ತಂಡದ ವ್ಯವಸ್ಥಾಪಕ ವಿಜಯ್ ಕುಮಾರ್, ಫಿಸಿಯೋಥೆರಪಿಸ್ಟ್ ಶ್ಯಾಮ್ ಸುಂದರ್ ಜೆ, ವೈದ್ಯ ಅಂಜನಾ ವಣ್ಣನ್, ಲಾಜಿಸ್ಟಿಕ್ ಮ್ಯಾನೇಜರ್ ತುಷಾರ್ ಖಾಡೇಕರ್ ಹಾಗೂ ನೆಟ್ ಬೌಲರ್ ಪೆರಿಯಸಾಮಿ ಗಣೇಶನ್ ಪ್ರತ್ಯೇಕ ವಾಸದಲ್ಲಿದ್ದಾರೆ.