ಕೋವಿಡ್ 19 ಪರಿಸ್ಥಿತಿಯೊಂದಿಗೆ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಿ: ಸುಮಿತ್ರಾ ನಾಯಕ್

ಉಡುಪಿ: ಕೋವಿಡ್ 19 ಸೋಂಕು ಇಡೀ ಜಗತ್ತಿಗೆ ತನ್ನ ಕರಾಳ ಛಾಯೆಯನ್ನು ಆವರಿಸಿ ಜನಜೀವನವನ್ನು ಅಸ್ತವ್ಯಸ್ಥ ಗೊಳಿಸಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ನೇತೃತ್ವದಲ್ಲಿ ಕೈಗೊಂಡ ಕ್ರಮಗಳಿಂದ ಭಾರತದಲ್ಲಿ ಸೋಂಕನ್ನು ನಿಯಂತ್ರಿಸುವ ಕಾರ್ಯವಾಗಿದೆ. ಸರಕಾರ ಸೂಚಿಸಿದ ನಿಯಮಾವಳಿಗಳನ್ನು ಅಷ್ಟೇ ಬದ್ಧತೆಯಿಂದ ಪಾಲಿಸಿ ಸರಕಾರದ ಪ್ರಯತ್ನಗಳಿಗೆ ಸಹಕರಿಸುವುದು ಜನಸಾಮಾನ್ಯರ ಕರ್ತವ್ಯ ಎಂದು ಉಡುಪಿ ನಗರಸಭಾ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್ ಕರೆನೀಡಿದರು.

ಅವರು ಮಣಿಪಾಲದ ಡಾ. ಟಿಎಂಎ ಪೈ ಪಾಲಿಟೆಕ್ನಿಕ್ ನಲ್ಲಿ ರಾಷ್ಟ್ರೀಯ ನಗರ ಅರೋಗ್ಯ ಅಭಿಯಾನ, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರೋಟರಿ ಕ್ಲಬ್ ಉಡುಪಿ ರಾಯಲ್, ಡಾ. ಟಿಎಂಎ ಪೈ ಪಾಲಿಟೆಕ್ನಿಕ್ ಮಣಿಪಾಲ, ನಗರ ಪ್ರಾಥಮಿಕ ಅರೋಗ್ಯ ಕೇಂದ್ರ ಹಾಗು ಹಿರೇಬೆಟ್ಟು ಪ್ರಾಥಮಿಕ ಅರೋಗ್ಯ ಕೇಂದ್ರ ಇವರ ಜಂಟಿ ಆಶ್ರಯದಲ್ಲಿ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಮತ್ತು ಕಾಲೇಜಿನ ಸಿಬ್ಬಂದಿಗಳಿಗೆ ಮೂರು ದಿನಗಳ ಉಚಿತ ಕೋವಿಡ್ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಶಾಲಾ ಕಾಲೇಜುಗಳು ಆರಂಭವಾಗುವ ಮೊದಲು ವಿದ್ಯಾರ್ಥಿಗಳ ಸುರಕ್ಷತೆಗಾಗಿ ಸರಕಾರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಉಡುಪಿ ನಗರಸಭೆಯು ತನ್ನ ವ್ಯಾಪ್ತಿಯಲ್ಲಿ ಅದನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುತ್ತಿದೆ ಎಂದರು.

ಕಾಲೇಜಿನ ಶೈಕ್ಷಣಿಕ ಸಂಯೋಜಕ ಟಿ. ರಂಗ ಪೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲ ಡೆರಿಕ್ ಮಸ್ಕರೇನಸ್ ಪ್ರಾಸ್ತಾವಿಕ ಮಾತನಾಡಿದರು. ಸಹಕಾರಿ ಭಾರತೀ ಅಧ್ಯಕ್ಷ ದಿನೇಶ್ ಹೆಗ್ಡೆ ಆತ್ರಾಡಿ, ರಾಯಲ್ ಸ್ಥಾಪಕ ಅಧ್ಯಕ್ಷ ರತ್ನಾಕರ್ ಇಂದ್ರಾಳಿ, ಸ್ನೇಹ ಸಂಗಮ ಈಶ್ವರನಗರ ಇದರ ಅಧ್ಯಕ್ಷ ಹರೀಶ್ ಜಿ ಕಲ್ಮಾಡಿ, ಕಾರ್ಯಕ್ರಮದ ಯೋಜನಾ ನಿರ್ದೇಶಕ ಸತೀಶ್ ಎನ್, ಪ್ರಾಧ್ಯಾಪಕ ಸುರೇಶ ನಾಯಕ್, ಆಶಾ ಕಾರ್ಯಕರ್ತೆ ರಮಾದೇವಿ, ವಾರ್ಡ್ ಸಮಿತಿ ಅಧ್ಯಕ್ಷ ಗಿರೀಶ್, ಪ್ರಾಥಮಿಕ ಅರೋಗ್ಯ ಕೇಂದ್ರದ ಲ್ಯಾಬ್ ಟೆಕ್ನಿಷಿಯನ್ ಸೌಮ್ಯ, ರೋಟರಿ ಸದಸ್ಯೆ ಲಕ್ಷ್ಮಿ ಪಿ ಶೆಟ್ಟಿ ಕಿನ್ನಿಮೂಲ್ಕಿ, ಉಪಸ್ಥಿತರಿದ್ದರು.

ನಗರಸಭಾ ಸದಸ್ಯ ಮಂಜುನಾಥ್ ಮಣಿಪಾಲ ಕಾರ್ಯಕ್ರಮ ಸಂಘಟಿಸಿ ಸ್ವಾಗತಿಸಿದರು. ಪ್ರಾಧ್ಯಾಪಕಿ ಅಶ್ವಿನ್ ನಿರೂಪಿಸಿದರು. ಅಮೃತಾ ವಂದಿಸಿದರು.