ಹಿರಿಯಡ್ಕ: ಕೋಟ್ನಕಟ್ಟೆ ಫ್ರೆಂಡ್ಸ್ ಸರ್ಕಲ್ ಹಿರಿಯಡ್ಕ ಇದರ 31ನೇ ವಾರ್ಷಿಕೋತ್ಸವ ಸಮಾರಂಭದ ನಿಮಿತ್ತ ಭೌತಿಕ್ ಕಾರ್ಯಕ್ರಮವು ಜ.26 ರಂದು ಜರುಗಿತು.
ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಕೊಡವೂರು ನಗರಸಭೆ ಸದಸ್ಯ ವಿಜಯ್ ಕೊಡವೂರು, ಶ್ರೀರಾಮನಂತ ಮಗ, ಲಕ್ಷ್ಮಣ – ಭರತರಂತ ತಮ್ಮಂದಿರು, ಸೀತೆಯಂತ ಪತ್ನಿ ಇದ್ದಂತಹ ದೆಷ ನಮ್ಮದು. ಅಂಬೇಡ್ಕರ್, ವಿವೇಕಾನಂದ, ನಾರಾಯಣ ಗುರುಗಳಂತಹ ಮಹಾನ್ ವ್ಯಕ್ತಿಗಳನ್ನು ಕಂಡಂತಹ ನಮ್ಮ ದೇಶದಲ್ಲಿ ಇಂದು ಕೋಟ್ಯಂತರ ಜನ ಯಾಕೆ ನಿರ್ಗತಿಕರಾಗಿದ್ದಾರೆ? ಪ್ರತಿವರ್ಷ ಸಾವಿರಾರು ಹೆಣ್ಣು ಮಕ್ಕಳು ಕಾಣೆಯಾಗುತ್ತಿದ್ದರೆ, ಮಕ್ಕಳನ್ನು ಹೆತ್ತ ಪೋಷಕರು ವೃದ್ಧಾಶ್ರಮದಲ್ಲಿ ಉಳಿಯುವ ಪರಿಸ್ಥಿತಿ. ಸಮಾಜವನ್ನು ಸುಧಾರಿಸಲು, ಕೌಟುಂಬಿಕ ಹಾಗೂ ಸಮಾಜದ ಒಳಿತಿಗಾಗಿ ಮಕ್ಕಳಿಗೆ ಸಂಸ್ಕಾರದ ತಿಳುವಳಿಕೆ ಅವಶ್ಯ ಎಂದು ಹೇಳಿದರು.
ಸ್ಥಳೀಯ ಉದ್ಯಮಿ ಹಾಗು ಸಮಾಜ ಸೇವಕ ಅನಿಲ್ ಶೆಟ್ಟಿ ಮಾಂಬೆಟ್ಟು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ನಿವೃತ್ತ ಇಂಜಿನಿಯರ್ ಹಾಗೂ ರೋಟರಿ ಕ್ಲಬ್ ಮಣಿಪಾಲ ಟೌನ್ ನ ನಿಕಟ ಪೂರ್ವ ಅಧ್ಯಕ್ಷ ಗಣೇಶ್ ನಾಯಕ್ ಉಪಸ್ಥಿತರಿದ್ದರು.
ಈ ಸಂಧರ್ಭದಲ್ಲಿ ಶ್ರೀ ಸಿಂಹವಾಹಿನಿ ದುರ್ಗಾಪರಮೇಶ್ವರಿ ಗದ್ದಿಗೆ ಅಮ್ಮನವರ ದೇವಸ್ಥಾನ, ಶ್ರೀಕ್ಷೇತ್ರ ಗಂಪ ಇದರ ಅರ್ಚಕ ರಾಜು ನಾಯ್ಕ ಇವರನ್ನು ಸನ್ಮಾನಿಸಲಾಯಿತು. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ರಾಜು ನಾಯ್ಕ, ಕೋಟ್ನಕಟ್ಟೆಯಲ್ಲಿ ಸುಗಮ ಸಂಚಾರಕ್ಕೆ ಒಂದು ವೃತ್ತವನ್ನು ನಿರ್ಮಿಸುವ ಅವಶ್ಯಕತೆ ಇದ್ದು ಕೋಟ್ನಕಟ್ಟೆ ಫ್ರೆಂಡ್ಸ್ ಸರ್ಕಲ್ ನ ಹೆಸರಿನಲ್ಲಿ ನಿರ್ಮಾಣವಾಗಲಿ ಎಂದು ಹಾರೈಸಿದರು.
ಕು|ದಿವ್ಯ ಮರಾಠೆ ಪಾರ್ಥಿಸಿದರು. ಸಂಘದ ಅಧ್ಯಕ್ಷ ದೇವದಾಸ್ ಮರಾಠೆ ಸ್ವಾಗತಿಸಿದರು. ಕಾರ್ಯದರ್ಶಿ ದಿವಾಕರ ಹಿರಿಯಡ್ಕ ವರದಿ ವಾಚಿಸಿದರು. ರಾಮಚಂದ್ರ ನಾಯಕ್ ವಂದಿಸಿದರು. ಬಾಲಕೃಷ್ಣ ಬಿ.ಕೆ ನಿರೂಪಿಸಿದರು.
ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮದ ನಂತರ ಚೈತನ್ಯ ಕಲಾವಿದರು ಬೈಲೂರು ಇವರಿಂದ ”ವಾರ್ಡ್ ನಂಬರ್ 2″ ಎಂಬ ಹಾಸ್ಯಮಯ ತುಳು ನಾಟಕವನ್ನು ಪ್ರದರ್ಶಿಸಲಾಯಿತು.