ದೊಡ್ಡಣ್ಣಗುಡ್ಡೆ ಶ್ರೀದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಕೋಟಿ ಗೀತಾಲೇಖನ ಯಜ್ಞ ಅಭಿಯಾನಕ್ಕೆ ಚಾಲನೆ

ಉಡುಪಿ: ಇಲ್ಲಿನ ದೊಡ್ಡಣ್ಣಗುಡ್ಡೆಯ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಭಾವಿ ಪರ್ಯಾಯ ಶ್ರೀಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಗಳ ಜಾಗತಿಕ ಮಟ್ಟದ ಆಧ್ಯಾತ್ಮಿಕ ಆಂದೋಲನ ಕೋಟಿ ಗೀತಾಲೇಖನ ಯಜ್ಞ ಸ೦ಕಲ್ಪ ಅಭಿಯಾನವು ಕ್ಷೇತ್ರದ ಧರ್ಮದರ್ಶಿ ಶ್ರೀರಮಾನಂದ ಗುರೂಜಿ ಲೇಖನ ದೀಕ್ಷ ಬದ್ಧರಾಗುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.

ಶ್ರೀ ಚಕ್ರಪೀಠ ಸುರಪೂಜಿತೆಯ ಸನ್ನಿಧಾನದಲ್ಲಿ ನೆರವೇರಿದ ಸರಳ ಸಮಾರಂಭದಲ್ಲಿ ಮಾತನಾಡಿದ ಶ್ರೀ ಗುರೂಜಿಯವರು, ಶ್ರೀಕೃಷ್ಣ ಪರಮಾತ್ಮನ ಮುಖಕಮಲದಿಂದ ಹೊರಹೊಮ್ಮಿದ ಭಗವಾನ್ ಶ್ರೀ ವೇದವ್ಯಾಸರಿಂದ ರಚಿಸಲ್ಪಟ್ಟ ಶ್ರೀಮದ್ಭಗವದ್ಗೀತೆಯನ್ನು ಕೋಟಿ ಕೋಟಿ ಜನರು ಬರೆದು ಗುರುಮುಖೇನ ಉಡುಪಿ ಶ್ರೀಕೃಷ್ಣನಿಗೆ ಅರ್ಪಿಸುವ ಈ ಕೋಟಿ ಗೀತಾಲೇಖನ ಯಜ್ಞದಲ್ಲಿ ಪಾಲ್ಗೊಂಡು ಪುಣ್ಯಕೋಟಿ ಗಳಾಗೋಣ. ಚತುರ್ವೇದಗಳ ಸಾರರೂಪವಾಗಿ ಶ್ರೀಕೃಷ್ಣಪರಮಾತ್ಮ ಉದ್ಗರಿಸಿದ ಗೀತೆಯನ್ನು ಸ್ವಹಸ್ತದಿಂದ ಲಿಪಿಬದ್ಧಗೊಳಿಸುವ ಈ ವಿಶೇಷ ಅವಕಾಶವನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು.
ಭಗವದನುಗ್ರಹದಿಂದ ನಮ್ಮನ್ನು ನಾವೇ ಉದ್ಧರಿಸಿಕೊಳ್ಳುವ ಈ ಕೈಂಕರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.

ಗೀತಾ ಪ್ರಚಾರಕ ನಾರಾಯಣ ತಂಡದ ಮಹೀತೋಷ ಆಚಾರ್ಯ ಗೀತಾ ಲೇಖನದ ಬಗ್ಗೆ ಮಾಹಿತಿ ನೀಡಿದರು.

ಪ್ರಜ್ಞಾ ಇಂಟರ್ ನ್ಯಾಷನಲ್ ಶಾಲೆಯ ಪ್ರಾಂಶುಪಾಲೆ ಶ್ರೀಮತಿ ಉಷಾ ರಮಾನಂದ, ಶಿಕ್ಷಕವೃಂದ, ಶಾಲಾ ಪರಿವೀಕ್ಷಕಿ ಕುಮಾರಿ ಸ್ವಾತಿ ಆಚಾರ್ಯ, ಉದ್ಯಮಿ ಆನಂದ ಬಾಯಿರಿ, ಅರ್ಚಕ ಅನೀಶ್ ಆಚಾರ್ಯ ಉಪಸ್ಥಿತರಿದ್ದರು.

ಕ್ಷೇತ್ರದ ಮುಖ್ಯ ವ್ಯವಸ್ಥಾಪಕಿ ಶ್ರೀಮತಿ ಕುಸುಮಾ ನಾಗರಾಜ ಕಾರ್ಯಕ್ರಮ ನಿರ್ವಹಿಸಿದರು. ಗುರೂಜಿಯವರ ಪ್ರೇರಣಿಯಂತೆ, ಕ್ಷೇತ್ರದಲ್ಲಿ ಉಪಸ್ಥಿತರಿದ್ದ ಭಕ್ತರು ಗೀತಾಲೇಖನ ದೀಕ್ಷೆ ಸ್ವೀಕರಿಸಿದರು.