ಕೋಟ: ಎಟಿಎಂ ಒಡೆದು ಹಣ ದೋಚಿದ ಕಳ್ಳರು

ಕೋಟ: ಕಳ್ಳರ ತಂಡವೊಂದು ಕೆನರಾ ಬ್ಯಾಂಕ್ ನ ಎಟಿಎಂಗೆ ಕನ್ನ ಹಾಕಿರುವ ಘಟನೆ ಮಾಬುಕಳ ಬಸ್ ನಿಲ್ದಾಣದ ಹತ್ತಿರದ ಹೆಬ್ಬಾರ್ ಕಾಂಪ್ಲೆಕ್ಸ್ ನಲ್ಲಿರುವ ಹಂಗರಕಟ್ಟೆ ಶಾಖೆಯ ಕೆನರಾ ಬ್ಯಾಂಕ್ ನಲ್ಲಿ ಇಂದು ಬೆಳಕಿಗೆ ಬಂದಿದೆ.

ಗುರುವಾರ ತಡ ರಾತ್ರಿ ಕಳ್ಳರು ಎಟಿಎಂ ಹೊರಗಡೆ ಇರುವ ಸಿಸಿಟಿವಿ ಕ್ಯಾಮರಾ ಹಾಗೂ  ಸೈರನ್  ಕೇಬಲ್ ನ್ನು ತುಂಡು ಮಾಡಿದ್ದು, ಒಳಗಡೆ ಇದ್ದ ಎಟಿಎಂ ಯಂತ್ರವನ್ನು ಒಡೆಯಲು ಯತ್ನಿಸಿದ್ದಾರೆ. ಈ ವೇಳೆ  ಪೂರ್ತಿಯಾಗಿ ಒಡೆಯಲು ಸಾಧ್ಯವಾಗದಿದ್ದರೂ ರಿಜೆಕ್ಟ್ ಬಾಕ್ಸ್ ನಲ್ಲಿರುವ ಸುಮಾರು 17,000 ರೂ. ನಗದು ದೋಚಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಳಕ್ಕಾಗಮಿಸಿದ ಎಎಸ್ಪಿ ಕುಮಾರ ಚಂದ್ರ, ಡಿವೈಎಸ್ಪಿ ಸುಧಾಕರ್ ನಾಯ್ಕ, ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತಪದ್ಮನಾಭ, ಬ್ರಹ್ಮಾವರ ಠಾಣಾಧಿಕಾರಿ ಗುರುನಾಥ್ ಹಾದಿಮನೆ, ಕೋಟ ಆರಕ್ಷಕ ಠಾಣಾಧಿಕಾರಿ ಸಂತೋಷ್ ಬಿ.ಪಿ. ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.