ಬ್ರಹ್ಮಾವರ: ರಾಜ್ಯದ 30 ಜಿಲ್ಲೆಗಳ 100 ಎ ದರ್ಜೆಯ ದೇವಸ್ಥಾನ ಮತ್ತು ಬಿ ಮತ್ತು ಸಿ ದೇವಸ್ಥಾನಗಳಲ್ಲೂ ಸಾಮೂಹಿಕ ವಿವಾಹಕ್ಕೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ನೀಲಾವರ ಮಹತೋಭಾರ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ರಾಜ್ಯ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ದೇವಸ್ಥಾನಗಳಲ್ಲಿ ಏಪ್ರಿಲ್ ನಲ್ಲಿ ನಡೆಯುವ ಸಪ್ತಪದಿ ಸಾಮೂಹಿಕ ಸರಳ ವಿವಾಹದ ಕಾರ್ಯಕ್ರಮದ ಬಗ್ಗೆ ಮಾಹಿತಿ ಮತ್ತು ಪ್ರಚಾರ ನೀಡವ ಸಲುವಾಗಿ ಆರಂಭಿಸಲಾದ ಸಪ್ತಪದಿ ರಥಕ್ಕೆ ಚಾಲನೆ ನೀಡಿ ಮಾತನಾಡಿದರು.
ಹಳ್ಳಿ ಹಳ್ಳಿಗೂ ರಥ: ಈ ಸರಳ ವಿವಾಹದ ಮಾಹಿತಿ ತಲುಪಿಸುವ ಸಲುವಾಗಿ ಪ್ರತಿಯೊಂದು ಹಳ್ಳಿಗೂ ಈ ರಥವನ್ನು ಪ್ರಚಾರವಾಗಿ ಬಳಸಿಕೊಳ್ಳುವ ವ್ಯವಸ್ಥೆಮಾಡಲಾಗಿದೆ. ಪಕ್ಷ ಭೇದ ಮರೆತು, ಸರ್ಕಾರಿ ಕೆಲಸವಾಗದೇ, ಮನೆಕೆಲಸದಂತೆ ಈ ಸಾಮೂಹಿಕ ಸರಳ ವಿವಾಹದಲ್ಲಿ ಸರ್ವರು ಭಾಗವಹಿಸಲಿದ್ದಾರೆ ಎಂದವರು ತಿಳಿಸಿದರು.
ಜಿ. ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ತಾ. ಪಂ. ಸದಸ್ಯೆ ನಳಿನ್ ಪ್ರದೀಪ್ ರಾವ್, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎನ್. ರಘುರಾಮ್ ಮಧ್ಯಸ್ಥ, ಅರ್ಚಕ ರಾಘವೇಂದ್ರ ಅಡಿಗ, ದೇವಳದ ಕಾರ್ಯನಿರ್ವಹಣಾಧಿಕಾರಿ ಮತ್ತು ಸಪ್ತಪದಿ ಸರಳ ವಿವಾಹ ಕಾರ್ಯಕ್ರಮದ ಉಡುಪಿ ಜಿಲ್ಲಾ ನೋಡಲ್ ಅಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ಮಂದಾರ್ತಿ ದೇಗುಲದ ಕಾರ್ಯನಿರ್ವಹಣಾಧಿಕಾರಿ ಎಸ್.ಪಿ.ಬಿ. ಮಹೇಶ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರು, ಗ್ರಾಮಸ್ಥರು, ಭಕ್ತರು, ಸಿಬ್ಬಂದಿ ಉಪಸ್ಥಿತರಿದ್ದರು. ವ್ಯವಸ್ಥಾಪನಾ ಸಮಿತಿ ಸದಸ್ಯ ಸುಧೀರ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಗುಣಶೀಲ ಅಮೀನ್ ನಿರೂಪಿಸಿದರು.