ವಿಶ್ವಪ್ರಸನ್ನ ತೀರ್ಥ ಶ್ರೀಗಳ ಆಶೀರ್ವಾದ ಪಡೆದ ಕೋಟ: ಗೋ ಸಂರಕ್ಷಣೆಗೆ ಸರ್ಕಾರ ಮುಂದಾಗಬೇಕು: ವಿಶ್ವಪ್ರಸನ್ನ ಶ್ರೀ

ಉಡುಪಿ: ಬ್ರಹ್ಮಾವರದ ನೀಲಾವರ  ಗೋಶಾಲೆ‌ಯಲ್ಲಿರುವ ಶಾಖಾ ಮಠದಲ್ಲಿ ಚಾತುರ್ಮಾಸ್ಯ ವೃತ ಕೈಗೊಂಡಿರುವ ಅಯೋಧ್ಯೆಯ ಶ್ರೀರಾಮ ಮಂದಿರದ ಟ್ರಷ್ಟಿಗಳಲ್ಲಿ ಒಬ್ಬರಾದ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದರನ್ನು ರಾಜ್ಯ ಹಿಂದೂ ಧಾರ್ಮಿಕ ದತ್ತಿ, ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿಯಾಗಿ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಸ್ವಾಮೀಜಿಯವರು ಆಶೀರ್ವಚನ ನೀಡುತ್ತಾ, ಕೊರೊನಾ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಇರುವ ಗೋಶಾಲೆಗಳು ಸಂಕಷ್ಟಕ್ಕೆ ಒಳಗಾಗಿರುವುದರಿಂದ, ಗೋವುಗಳ ಸಂರಕ್ಷಣೆಗೆ ರಾಜ್ಯ ಸರ್ಕಾರ ಧಾವಿಸಬೇಕು. ಈ ಕುರಿತು ತಾವು ಗಮನಹರಿಸಬೇಕೆಂದು ಸಚಿವರಿಗೆ ಸೂಚಿಸಿದರು.
ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭವ್ಯ ಶ್ರೀರಾಮಮಂದಿರದ ಶಿಲಾನ್ಯಾಸ ಕಾರ್ಯಕ್ರಮ ನೆರವೇರುವುದರ ಹಿನ್ನೆಲೆಯಲ್ಲಿ, ಅಂದು ರಾಜ್ಯದಾದ್ಯಂತ ಇರುವ ದೇವಸ್ಥಾನಗಳಲ್ಲಿ, ಲೋಕಕಲ್ಯಾಣಾರ್ಥವಾಗಿ ಶ್ರೀರಾಮ ಮಂದಿರ ನಿರ್ವಿಘ್ನವಾಗಿ ನಿರ್ಮಾಣವಾಗಲಿ ಎಂಬ ಆಶಯವನಿಟ್ಟುಕೊಂಡು ದೇವರಲ್ಲಿ ಪ್ರಾರ್ಥನೆ ಸಲ್ಲಿಸುವುದಕ್ಕೆ ಬೇಕಾಗುವಂತಹ ಕ್ರಮಕೈಗೊಳ್ಳುವುದು ಸೂಕ್ತ ಎಂಬ ಸಲಹೆ ನೀಡಿದರು.
ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಕರ್ನಾಟಕದ ಕೋಟ್ಯಾಂತರ ಭಕ್ತರ ಕಡೆಯಿಂದ ಕಾಣಿಕೆ ಸಲ್ಲಿಸಲು ಸಹ ಯೋಚನೆ ಮಾಡುವುದು ಉತ್ತಮ ಎಂದವರು ತಿಳಿಸಿದರು.
ಮುಂದಿನ ದಿನಗಳಲ್ಲಿ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮಮಂದಿರದ ವೀಕ್ಷಣೆಗೆ ಹಾಗೂ ಶ್ರೀರಾಮನ ದರ್ಶನಕ್ಕೆ ರಾಜ್ಯದಿಂದ ಕೋಟ್ಯಾಂತರ ಭಕ್ತರು ತೆರಳುವುದರಿಂದ, ಅವರ ವಾಸ್ತವ್ಯಕ್ಕಾಗಿ ಯಾತ್ರೀ ನಿವಾಸದ ಮಾದರಿಯಲ್ಲಿ ಕರ್ನಾಟಕ ಭವನ ನಿರ್ಮಾಣ ಮಾಡುವ ಸಲುವಾಗಿ, ಸ್ಥಳ ಕಾಯ್ದಿರಿಸಲು ಉತ್ತರಪ್ರದೇಶದ ಸರ್ಕಾರಕ್ಕೆ ಈಗಲೇ ಪ್ರಸ್ತಾವನೆಯನ್ನು ಸಲ್ಲಿಸುವುದು ಮತ್ತು ಕರ್ನಾಟಕ ಸರ್ಕಾರದ ಮೂಲಕ ಯಾತ್ರಿ ನಿವಾಸ ನಿರ್ಮಾಣ ಮಾಡಲು ಸರ್ಕಾರ  ಮುಂದಾಗಬೇಕು ಎಂಬ ಅಭಿಪ್ರಾಯ ಪಟ್ಟರು.
ಸಚಿವರು ಸ್ವಾಮೀಜಿಗಳ ಅಭಿಪ್ರಾಯವನ್ನು ಆಲಿಸಿ, ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಿ ಅಂತಿಮ  ತೀರ್ಮಾನ ಕೈಗೊಳ್ಳುತ್ತೇವೆ. ಶ್ರೀರಾಮಮಂದಿರದ ನಿರ್ಮಾಣಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಹಾಗೂ ಗೋವುಗಳ ಸಂರಕ್ಷಣೆಗೆ ನಮ್ಮ ಸರ್ಕಾರವು ಬದ್ಧವಾಗಿದೆ ಎಂದು ತಿಳಿಸಿದರು.