ಹಣೆಗೆ ಕುಂಕುಮ ಹಾಕಿದವರೆಲ್ಲರೂ ಸಿದ್ದರಾಮಯ್ಯರಿಗೆ ಭಯೋತ್ಪಾದಕರಂತೆ ಕಾಣುತ್ತಾರೆ: ಕೋಟ ವ್ಯಂಗ್ಯ

ಉಡುಪಿ: ಹಣೆಗೆ ಕುಂಕುಮ ಹಾಕಿದವರೆಲ್ಲರೂ ಸಿದ್ದರಾಮಯ್ಯ ಅವರಿಗೆ ಭಯೋತ್ಪಾದಕರಂತೆ ಕಾಣುತ್ತಿದ್ದಾರೆ, ಅಂತಹ ಸಿದ್ದರಾಮಯ್ಯ ಅವರ ಹೇಳಿಕೆಗೆಲ್ಲಾ ನಾವು ಪ್ರತಿಕ್ರಿಯೆ ನೀಡಬೇಕಾಗಿಲ್ಲ ಎಂದು ರಾಜ್ಯ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕಾವಿ, ನಾಮ ಧರಿಸುವ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಟೀಕೆಗೆ ಉತ್ತರಿಸಿದ ಕೋಟ ಅವರು,
ಯೋಗಿ ಆದಿತ್ಯನಾತ್ ಅವರು ಸಿಎಂ ಆಗಿ ಮಾಡಿರುವ ಕೆಲಸವನ್ನು ದೇಶವೇ ಮೆಚ್ಚುತ್ತಿದೆ. ಅಂತಹ ರಾಷ್ಟ್ರಭಕ್ತನ ಅವಹೇಳನ ಮಾಡಿದ್ರೆ ಚುನಾವಣೆಯಲ್ಲಿ ಜನರೇ ಸಿದ್ಧರಾಮಯ್ಯನಿಗೆ  ಪಾಠ‌ ಕಲಿಸ್ತಾರೆ ಎಂದು ಎಚ್ಚರಿಕೆ ನೀಡಿದರು.
ರಾಹುಲ್ ನಾಮ ಹಾಕಲ್ವಾ
ಈ ಸಿದ್ಧರಾಮಯ್ಯ ಚುನಾವಣೆಗೆ ನಾಮಪತ್ರ ಹಾಕುವಾಗ ನಾಮ ಧರಿಸಿದ್ದನ್ನು ನಾನು  ಕಂಡಿದ್ದೇನೆ, ಅವರು ಚುನಾವಣೆ ಮುನ್ನಾದಿನ ನಾಮ ಧರಿಸಿ ದೇವಸ್ಥಾನಕ್ಕೂ ಹೋಗಿದ್ದಾರೆ. ಅವರ ನಾಯಕ ರಾಹುಲ್ ಗಾಂಧಿ ಅವರೂ ದೇವಸ್ಥಾನಕ್ಕೆ ಭೇಟಿ ಕೊಡುವಾಗ ಉದ್ದದ ನಾಮ ಧರಿಸುತ್ತಾರೆ. ರಾಜಕೀಯ ಮಾಡುವುದಕ್ಕೆ ಅವರಿಗೆ ನಾಮ ಕಾವಿ ಎಲ್ಲಾ ಬೇಕಾಗುತ್ತದೆ ಎಂದರು.
ಬಿಜೆಪಿಗೆ ನಾಮ, ಕಾವಿ ಆಧ್ಯಾತ್ಮ ದ ಸಂಕೇತ, ಆದರೆ ಸಿದ್ರಾಮಯ್ಯ, ರಾಹುಲ್ ಗಾಂಧಿಗೆ ನಾಮ ಚುನಾವಣೆಯ ಸಂಕೇತ, ಈ ಕಾಂಗ್ರೆಸಿಗರಿಗೆ ಚುನಾವಣೆ ಬಂದ್ರೆ ನಾಮ, ಕಾವಿ, ದೇವಸ್ಥಾನ ನೆನಪಾಗುತ್ತದೆ. ಅಂತಹವರಿಗೆ ಕಾವಿ, ನಾಮದ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ ಎಂದು ಕೋಟ ತೀವ್ರವಾಗಿ ಹೇಳಿದರು.
ಪಾಕಿಗೆ ಕಾಂಗ್ರೆಸ್ ಮೇಲೆ ಪ್ರೀತಿ
ಪಾಕಿಸ್ತಾನಕ್ಕೆ ಕಾಂಗ್ರೆಸ್ ಪಕ್ಷದ ಮೇಲೆ ಬಹಳ ಪ್ರೀತಿ ಇದೆ. ಯಾಕೆಂದರೇ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಪಾಕಿಸ್ತಾನ ಪ್ರೇರಿತ ಭಯೋತ್ಪಾದಕರ ಮೇಲೆ ಕ್ರಮ ಕೈಗೊಂಡಿಲ್ಲ. ಮುಂಬೈಯ ತಾಜ್ ಹೊಟೇಲ್ ಗೆ ಅಟ್ಯಾಕ್ ಆದಾಗಲೂ ಕಠಿಣ ಕ್ರಮ ಜರುಗಿಸಿಲ್ಲ. ಆದ್ದರಿಂದ ಪಾಕ್ ಗೆ ಇವತ್ತೂ ಕಾಂಗ್ರೆಸ್ ಮೇಲೆ ಪ್ರೀತಿ ಇದೆ ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಆದರೇ ಪ್ರದಾನಿ ಮೋದಿ ಅವರು ಪಾಕ್ ಗೆ ಕಠಿಣ ಸಂದೇಶ ರವಾನಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಂಜಾಬ್ ರಾಜ್ಯದ ಕಾಂಗ್ರೆಸ್ ಸಿಎಂ ಅಮರೀಂದರ್ ಸಿಂಗ್ ಕೂಡಾ ಮೋದಿ ಅವರನ್ನು ಶ್ಲಾಘಿಸಿದ್ದಾರೆ, ಏರ್ ಸ್ಟ್ರೈಕ್ ಗೆ ಸಾಕ್ಷಿ ಕೇಳೋದು ರಾಷ್ಟ್ರಕ್ಕೆ ಮಾಡುವ ಅಪಮಾನ ಎಂದಿದ್ದಾರೆ. ಆದರೇ ಕಾಂಗ್ರೆಸ್ ಪಕ್ಷದ ಉಳಿದವರಿಗೆ ಇದು ಅರ್ಥವಾಗುತ್ತಿಲ್ಲ ಎಂದವರು ಟೀಕಿಸಿದರು.
ಇದು ಹಿಂದಿನ ಭಾರತ ಅಲ್ಲ, ಇದು ಮೋದಿ ಭಾರತ. ಸೈನಿಕರಿಗೆ ಕಲ್ಲು ಹೊಡೆಯುವವರು ಮುಗ್ಧ ಯುವಕರು ಅನ್ನೋದನ್ನು ಇನ್ನಾಗರೂ ನಿಲ್ಲಿಸಿ ಎಂದವರು ಕಾಂಗ್ರೆಸ್ ನಾಯಕರಿಗೆ ಸಲಹೆ ಮಾಡಿದರು.