ಜವಾಬ್ದಾರಿ ನೀಡಿದ ಹುದ್ದೆಗಳಿಗೆ ನ್ಯಾಯ ಸಲ್ಲಿಸುವುದು ಪಕ್ಷದ ಕಾರ್ಯಕರ್ತನ ಆದ್ಯ ಕರ್ತವ್ಯ: ಕೋಟ ಶ್ರೀನಿವಾಸ್ ಪೂಜಾರಿ

ಉಡುಪಿ: ಮುಂದಿನ ಲೋಕಸಭಾ ಚುನಾವಣೆಗೆ ಪಕ್ಷದ ವರಿಷ್ಠರು ಭರದ ತಯಾರಿ ನಡೆಸಿದ್ದು ಮತ್ತೊಮ್ಮೆ ಪಕ್ಷವನ್ನು ಅಧಿಕಾರಕ್ಕೆ ತರಲು ಅನೇಕ ಯೋಜನೆಗಳನ್ನು ಮತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಪಕ್ಷದಲ್ಲಿರುವ ಎಲ್ಲ ನಿಷ್ಠಾವಂತ ಕಾರ್ಯಕರ್ತರಿಗೆ ಅವರವರ ಅರ್ಹತೆಗೆ ತಕ್ಕಂತೆ ವಿವಿಧ ಸ್ಥರಗಳಲ್ಲಿ ಜವಾಬ್ದಾರಿಗಳನ್ನು ನೀಡಿದ್ದು ಪಕ್ಷದ ಯೋಜನೆಗಳನ್ನು ಶಿರಸಾ ಕಾರ್ಯರೂಪಕ್ಕೆ ತರುವುದು ಅವರ ಕರ್ತವ್ಯವಾಗಿರುತ್ತದೆ ಮತ್ತು ಪಾಲಿಸುವಲ್ಲಿ ತನ್ನ ಕೆಳಸ್ತರದ ಕಾರ್ಯಕರ್ತರಿಗೆ ಪ್ರೇರೇಪಣೆಯಾಗಿ ನಿಲ್ಲುವುದು ಕೂಡ ಅಗತ್ಯವಾಗಿರುತ್ತದೆ ಎಂದು ರಾಜ್ಯ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಮತ್ತು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಕೋಟ ಶ್ರೀನಿವಾಸ್ ಪೂಜಾರಿ ಸೂಚನೆ ನೀಡಿದರು.
ಅವರು ಬುಧವಾರ ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಬಿಜೆಪಿ ವಿವಿಧ ಸ್ತರಗಳ ಸಂಚಾಲಕರುಗಳು, ಪ್ರಭಾರಿಗಳು, ಮತ್ತು ಜನಪ್ರತಿನಿಧಿಗಳನ್ನೊಳಗೊಂಡ  ಲೋಕಸಭಾ ಚುನಾವಣಾ ಪೂರ್ವತಯಾರಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಚುನಾವಣೆ ಹತ್ತಿರ ಬರುತ್ತಿರುವ ಈ ಅವಧಿಗಳು ಅತ್ಯಂತ ನಿರ್ಣಾಯಕವಾಗಿದ್ದು  ಇದರಲ್ಲಿ ಯಾವುದೇ ಹೊಂದಾಣಿಕೆಯಿಲ್ಲದೆ ಕಾರ್ಯ ನಿರ್ವಹಣೆ ಅಗತ್ಯ ಮತ್ತು ಅದರ ವರದಿಗಳನ್ನು ನಿರಂತರವಾಗಿ ವರಿಷ್ಠರಿಗೆ ತಲುಪಿಸಬೇಕಾಗುತ್ತದೆ ಎಂದರು.
ಚುನಾವಣಾ ತಯಾರಿಯಾಗಿ ಮುಂದೆ ಕೇಂದ್ರ ಸರಕಾರದ ಯೋಜನೆಗಳನ್ನು ಮತದಾರರಿಗೆ ತಲುಪಿಸಲು ಪ್ರತಿದಿನವೆಂಬಂತೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅವಿಶ್ರಾಂತರಾಗಿ ಕಾರ್ಯಕರ್ತರು ಸಕ್ರಿಯರಾಗಿ ದುಡಿಯಬೇಕಾಗಿದೆ ಎಂದು ಅವರು ಈ ಸಂದರ್ಭದಲ್ಲಿ ನುಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್ ಕುಮಾರ್ ಶೆಟ್ಟಿ, ಕುಯಿಲಾಡಿ ಸುರೇಶ್ ನಾಯಕ್, ಸಂಧ್ಯಾ ರಮೇಶ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ್ ಬಾಬು, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಶಾಮಲಾ ಕುಂದರ್ ಮತ್ತು ಉದಯಕುಮಾರ್ ಶೆಟ್ಟಿ, ಜಿಲ್ಲೆಯ ಎಲ್ಲ ಮಂಡಲಗಳ ಪ್ರಮುಖರುಗಳು, ಎಲ್ಲ ವಿಧಾನಸಭಾ ಕ್ಷೇತ್ರದ ಪ್ರಭಾರಿಗಳು, ನಗರಸಭಾ ಸದಸ್ಯರುಗಳು, ಗ್ರಾಮ ಮತ್ತು ತಾಲೂಕು ಪಂಚಾಯತ್ ಸದಸ್ಯರುಗಳು ಉಪಸ್ಥಿತರಿದ್ದರು.