ಕೋಟ ಜೋಡಿ ಕೊಲೆ ಪ್ರಕರಣದಲ್ಲಿ ಬಿಜೆಪಿಯ ನಿಜವಾದ ಬಣ್ಣ ಬಯಲಾಗಿದೆ:ಸೊರಕೆ

ಕುಂದಾಪುರ: ಯಾವೊಬ್ಬ ವ್ಯಕ್ತಿ ಸತ್ತರೂ ಸ್ಥಳಕ್ಕೆ ಧಾವಿಸಿ ಆತ ಯಾವ ಜಾತಿ, ಧರ್ಮ ಎಂದು ವಿಚಾರಿಸಿಕೊಂಡು ಬೆಂಕಿ ಹಚ್ಚುವ ಕೆಲಸ ಮಾಡಿದವರೇ ಇಂದು ಕೋಟ ಜೋಡಿ ಕೊಲೆ ಕೃತ್ಯವನ್ನು ಮುಚ್ಚಿಡುವ ಕೆಲಸಕ್ಕೆ ಮುಂದಾಗಿದ್ದಾರೆ. ಕೋಟ ಜೋಡಿ ಕೊಲೆ ಪ್ರಕರಣದಲ್ಲಿ ಬಿಜೆಪಿಯ ನಿಜವಾದ ಬಣ್ಣ ಬಯಲಾಗಿದೆ ಎಂದು ಮಾಜಿ ಸಚಿವ ವಿನಯಕುಮಾರ ಸೊರಕೆ ಹೇಳಿದರು.

ಬ್ಲಾಕ್ ಕಾಂಗ್ರೆಸ್ ಕೋಟ ವತಿಯಿಂದ ಜೋಡಿ ಕೊಲೆ ಪ್ರಕರಣ ಖಂಡಿಸಿ ಕೊಲೆಯಲ್ಲಿ ಭಾಗಿಯಾದ ಜಿ.ಪಂ ಸದಸ್ಯ ರಾಘವೇಂದ್ರ ಕಾಂಚನ್ ಬಾರಿಕೆರಿ ರಾಜೀನಾಮೆಗೆ ಆಗ್ರಹಿಸಿ ಸೋಮವಾರ ಕೋಟ ಬಸ್ ನಿಲ್ದಾಣ ಬಳಿ ನಡೆದ ಬೃಹತ್ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಅಮಾನುಷವಾಗಿ ಕೊಲೆ ಮಾಡುವ ವ್ಯಕ್ತಿಗಳು ಯಾರು ಮತ್ತು ಯಾವ ಪಕ್ಷಕ್ಕೆ ಸೇರಿದವರು, ಯಾರು ಕೊಲೆಗಡುಕರಿಗೆ ರಕ್ಷಣೆ ಕೊಡುವವರು ಎನ್ನುವ ಬಗ್ಗೆ ಬೇರೆ ಉದಾಹರಣೆ ಬೇಕಿಲ್ಲ. ಪರೇಶ್ ಮೇಸ್ತಾ ಪ್ರಕರಣದಲ್ಲಿ ಗಲಭೆ ಎಬ್ಬಿಸಿದವರು ಇಂದು ಸಿಬಿಐ ತನಿಖೆ ಎತ್ತ ಸಾಗಿದೆ ಎಂಬುವುದರ ಬಗ್ಗೆ ಗಮನ ಹರಿಸುತ್ತಿಲ್ಲ. ಪ್ರವೀಣ್ ಪೂಜಾರಿ, ವಿನಾಯಕ ಬಾಳಿಗ, ಬಂಟ್ವಾಳದ ಹರೀಶ್ ಪೂಜಾರಿಯವರನ್ನು ಕೊಂದವರೇ ಬಿಜೆಪಿಗರು. ಈ ಪ್ರತಿಭಟನೆ ಕೇವಲ ಕೋಟಕ್ಕೆ ಮಾತ್ರ ಸೀಮಿತವಲ್ಲ. ಇಡೀ ಉಡುಪಿ ಜಿಲ್ಲೆಗೆ ಪ್ರತಿಭಟನೆಯನ್ನು ವಿಸ್ತರಿಸುವ ಮೂಲಕ ಯತೀಶ್ ಹಗೂ ಭರತ್ ಕುಟುಂಬಕ್ಕೆ ನ್ಯಾಯ ಸಿಗುವ ರೀತಿಯಲ್ಲಿ ಹೋರಾಟ ಮಾಡಲು ನಾವೆಲ್ಲರೂ ಬದ್ದರಾಗಿದ್ದೇವೆ. ಕೋಟ ವ್ಯಾಪ್ತಿಯಲ್ಲಿ ನಡೆದಂತಹ ಎಲ್ಲಾ ಕ್ರಿಮಿನಲ್ ಪ್ರಕರಣಗಳಲ್ಲೂ ಜನಪ್ರತಿನಿಧಿಯಾದ ಓರ್ವ ವ್ಯಕ್ತಿ ಸಕ್ರಿಯವಾಗಿ ಭಾಗವಹಿಸಿದ ದಾಖಲೆಗಳಿವೆ ಎಂದು ಸೊರಕೆ ಆರೋಪಿಸಿದರು.

ಕಳೆದ ಬಾರಿ ಕೋಟ ಶ್ರೀನಿವಾಸ ಪೂಜಾರಿಯವರು ರಾಜ್ಯ ಸಚಿವರಾಗಿ ಈ ಭಾಗಕ್ಕೆ ಆಗಮಿಸಿದ ವೇಳೆಯಲ್ಲಿ ಅವರ ಕಾರಿಗೆ ಕಲ್ಲು ತೂರಿ ಪ್ರತಿಭಟಿಸಿದವರು ಯಾರು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಒಂದು ಪಕ್ಷದ ಜನಪ್ರತಿನಿಧಿಯಾದವನು ಕೊಲೆ ಪ್ರಕರಣದಲ್ಲಿ ಭಾಗಿಯಾದ ಸಂದರ್ಭದಲ್ಲಿ ತಕ್ಷಣ ಅವರನ್ನು ಪಕ್ಷದಿಂದ ತೆಗೆದು ಹಾಕುವುದು ಆ ಪಕ್ಷದ ನೈತಿಕ ಗುಣವನ್ನು ಎತ್ತಿ ತೋರಿಸುತ್ತದೆ ಎಂದರು.

ಜೋಡಿ ಕೊಲೆ ಪ್ರಕರಣವನ್ನು ಯಾವ ರೀತಿ ಸಮರ್ಥಿಸಿಕೊಳ್ಳುವಿರಿ?

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಯಾರಾದರೂ ಸತ್ತರೆ ಅವ ನಮ್ಮವ ಎಂದು ಹೇಳಿ ಗಲಭೆ ಎಬ್ಬಿಸುವ ಸಂಸದೆ ಶೋಭಾ ಕರಂದ್ಲಾಜೆಗೆ ಕೊಲೆಗೀಡಾದ ಅಮಾಯಕ ಯುವಕರಾದ ಭರತ್ ಹಾಗೂ ಯತೀಶ್ ನಮ್ಮವರೆನಿಸಲಿಲ್ಲ. ರಕ್ತಚರಿತ್ರೆಯನ್ನು ಬರೆಯಲು ಹೊರಟ ಶೋಭಾ ಕರಂದ್ಲಾಜೆಯವರೇ ನೀವು ಕೋಟ ಜೋಡಿ ಕೊಲೆಯನ್ನು ಯಾವ ರೀತಿ ಸಮರ್ಥಿಸಿಕೊಳ್ಳುವಿರಿ, ನಿಮ್ಮ ಪಕ್ಷದ ಚುನಾಯಿತ ಸದಸ್ಯ ಮಾಡಿಸಿದ ಈ ಕೊಲೆಗೆ ಯಾವ ರೀತಿ ಉತ್ತರ ಹೇಳುವಿರಿ ಎಂದು ಸಂಸದೆ ಕರಂದ್ಲಾಜೆಯನ್ನು ಪ್ರಶ್ನಿಸಿದರು. ಮಾಜಿ ಶಾಸಕ ಗೋಪಾಲ ಭಂಡಾರಿ ಮಾತನಾಡಿದರು.

ಪ್ರತಿಭಟನೆಯ ಬಳಿಕ ಕೋಟ ಜೋಡಿ ಕೊಲೆ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಕೋಟ ಠಾಣಾಧಿಕಾರಿ ಮುಖಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಬಿಜೆಪಿ ಯುವಕರೂ ಭಾಗಿ:

ಭರತ್, ಯತೀಶ್ ಕೊಲೆ ಸೂತ್ರಧಾರ ಎಂದು ಹೇಳಲಾಗುತ್ತಿರುವ ಬಿಜೆಪಿ ಜಿ.ಪಂ ಸದಸ್ಯ ರಾಘವೇಂದ್ರ ಕಾಂಚನ್ ಬಾರಿಕೆರಿ ವಿರುದ್ದ ಬಿಜೆಪಿ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶದ ಬರಹಗಳನ್ನು ಪ್ರಕಟಿಸುತ್ತಿರುವ ಬೆನ್ನಲ್ಲೇ ಸ್ನೇಹಿತರ ಸಾವಿಗೆ ಕಾರಣರಾದವರ ವಿರುದ್ದ ನಡೆದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಭಾಗವಹಿಸಿರುವ ದೃಶ್ಯ ಕಂಡುಬಂದಿತು. ಯತೀಶ್ ಹಾಗೂ ಭರತ್ ಕೊಲೆ ಪ್ರಕರಣ ಖಂಡಿಸಿ ಬ್ಲಾಕ್ ಕಾಂಗ್ರೆಸ್ ಸೋಮವಾರ ನಡೆಸಿರುವ ಪ್ರತಿಭಟನಾ ಸಭೆಯಲ್ಲಿ ಬಿಜೆಪಿ ಯುವಕರು, ಭರತ್ ಹಾಗೂ ಯತೀಶ್ ಸ್ನೇಹಿತರು ನಿಂತುಕೊಂಡೆ ಪ್ರತಿಭಟನೆಯಲ್ಲಿ ಭಾಗವಹಿಸಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ರಾಕೇಶ್ ಮಲ್ಲಿ, ಎಐಸಿಸಿ ಸದಸ್ಯ, ಯುವನಾಯಕ ಅಮೃತ ಶೆಣೈ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜನಾರ್ಧನ ತೋನ್ಸೆ, ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್, ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಇಸ್ಮಾಯಿಲ್ ಆತ್ರಾಡಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಶೆಟ್ಟಿ, ಮುಖಂಡರಾದ ವಿಕಾಸ್ ಹೆಗ್ಡೆ, ರೋಶನಿ ಒಲಿವೇರಾ, ಇಚ್ಛತಾರ್ಥ ಶೆಟ್ಟಿ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಯತೀಶ್ ಸಹೋದರ ಮನೋಜ್ ಉಪಸ್ಥಿತರಿದ್ದರು.