ಉಡುಪಿ ಜಿಲ್ಲಾಮಟ್ಟದ ಜಾನುವಾರು ಉತ್ಸವ ಜ.13ರಂದು ವಿವಿಧ ಸಂಘಟನೆಗಳ ಆಶ್ರಯದಲ್ಲಿ ಕೋಟದ ಶಾಂಭವಿ ಹಿ.ಪ್ರಾ. ಶಾಲೆ ಮೈದಾನದಲ್ಲಿ ಯಶಸ್ವಿಯಾಗಿ ಜರಗಿತು .ಗ್ರಾಮೀಣ ಭಾಗದ ರೈತರ ಹೈನುಗಾರಿಕೆ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಹಾಗೂ ಯುವ ಜನತೆಯನ್ನು ಉತ್ತೇಜಿಸುವ ಮತ್ತು ಕೃಷಿಕರಿಗೆ ಸರಕಾರದಿಂದ ದೊರೆಯುವ ಸಾಲ ಸೌಲಭ್ಯಗಳ ಕುರಿತು ಮಾಹಿತಿ ನೀಡುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು .ಮಣೂರು- ಪಡುಕರೆಯ ಶಿವಮೂರ್ತಿ ಉಪಾಧ್ಯರ ಮನೆಯಲ್ಲಿ 16ಕರುಗಳಿಗೆ ಜನ್ಮ ನೀಡಿದ ಅತ್ಯಂತ ಹಿರಿಯ ದನವೊಂದಕ್ಕೆ ಕೋಟದ ಪುಣ್ಯಕೋಟಿ ಎನ್ನುವ ಬಿರುದು ನೀಡಿ ಪೂಜೆ ಸಲ್ಲಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಯಿತು.
ಗಮನ ಸೆಳೆದ ಜಾನುವಾರು ಪ್ರದರ್ಶನ
ಕಾರ್ಯಕ್ರಮದಲ್ಲಿ ಒಂದು ಸಾವಿರಕ್ಕೂ ಅಧಿಕ ಜೆರ್ಸಿ, ಎಚ್.ಎಫ್. ದೇಶಿ ತಳಿಯ ದನ, ಕಡಸು ಹಾಗೂ ಕರು, ಎತ್ತು, ಕೋಣಗಳು ಪ್ರದರ್ಶನಗೊಂಡವು. ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಉಪ್ಪಿನಕೋಟೆಯ ಇರ್ಷಾದ್ ಅವರ ವಿಶೇಷ ತಳಿಯ ಎತ್ತು ಹಾಗೂ ಕಂಬಳದ ಕೋಣಗಳು, ದೇಶಿ ವಿದೇಶಿ ತಳಿಯ ಜಾನುವಾರುಗಳು ಗಮನಸೆಳೆದವು.
ಹೈನುಗಾರಿಕೆ ಬಗ್ಗೆ ಮಾಹಿತಿ
ಬೆಳಗ್ಗೆ 8ಗಂಟೆಗೆ ಜಾನುವಾರುಗಳ ನೊಂದಣಿ ಆರಂಭಗೊಂಡಿತು. ಆನೆಗುಡ್ಡೆ ವಿನಾಯಕ ದೇವಸ್ಥಾನದ ಮೊಕ್ತೇಸರ ರಮಣ ಉಪಾಧ್ಯ ನೋಂದಣಿಗೆ ಚಾಲನೆ ನೀಡಿದರು. ಅನಂತರ ಜಿ.ಪಂ. ಸದಸ್ಯ ರಾಘವೇಂದ್ರ ಕಾಂಚನ್ ತಾಂತ್ರಿಕ ವಿಚಾರ ಗೋಷ್ಠಿಗೆ ಚಾಲನೆ ನೀಡಿದರು.
ಅನಂತರ ನಡೆದ ಗೋಷ್ಠಿಯಲ್ಲಿ ಆಧುನಿಕ ಹೆ„ನುಗಾರಿಕೆ ವಿಷಯವಾಗಿ ಡಾ. ನಿತ್ಯಾನಂದ ಭಕ್ತ ಮತ್ತು ಆಹಾರ ಮತ್ತು ರೋಗಗಳ ನಿರ್ವಹಣೆ ವಿಷಯದ ಕುರಿತು ಡಾ. ಮಂಜುನಾಥ ಅಡಿಗ ಎನ್., ಸರಕಾರದ ರಿಯಾಯಿತಿ ಬಡ್ಡಿದರದ ಸಾಲ ಸೌಲಭ್ಯದ ಕುರಿತು ಕೋಟ ಸಹಕಾರಿ ವ್ಯಾವಸಾಯಿಕ ಸಂಘದ ಉಪಾಧ್ಯಕ್ಷ ಟಿ. ಮಂಜುನಾಥ ಮಾಹಿತಿ ನೀಡಿದರು.
ದ.ಕ. ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ. ರವಿರಾಜ್ ಹೆಗ್ಡೆ ಜಾನುವಾರು ಉತ್ಸವ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಭಾಗದ ರೈತರ ಹೈನುಗಾರಿಕೆ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು, ಆಧುನಿಕ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳಲು ಉತ್ತೇಜಿಸಲು ಇಂತಹ ಕಾರ್ಯಕ್ರಮಗಳು ಅಗತ್ಯ, ಗೋಕಳ್ಳತನ ವಿರುದ್ಧ ಕ್ರಮ ಆಗಬೇಕಿದೆ ಎಂದರು. ಜಾನುವಾರು ಉತ್ಸವ ಸಮಿತಿ ಹಾಗೂ ಕೋಟ ಸಹಕಾರಿ ವ್ಯಾವಸಾಯಿಕ ಸಂಘದ ಅಧ್ಯಕ್ಷ ತಿಮ್ಮ ಪೂಜಾರಿ ಪ್ರಸ್ತಾವಿಸಿದರು. ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ.ಕುಂದರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಕೋಟ ಪಶು ಆಸ್ಪತ್ರೆಯಲ್ಲಿ ವೈದ್ಯ ರಾಗಿ ಸೇವೆ ಸಲ್ಲಿಸಿದ ಡಾ|ಬಾಲಕೃಷ್ಣ ಶೆಟ್ಟಿ, ಡಾ|ಆನಂತ ಭಟ್, ಡಾ| ಸರ್ವೋತ್ತಮ, ಡಾ| ಮೋಹನ್ ರೆಡ್ಡಿ, ಡಾ|ರಮೇಶ್ ಉಡುಪ ಅವರನ್ನು ಗೌರವಿಸಲಾಯಿತು ಮತ್ತು ಉತ್ಸವದ ಕಾರ್ಯದರ್ಶಿಯಾಗಿ ಸೇವೆಸಲ್ಲಿಸಿದ ಡಾ| ಅರುಣ್ ಕುಮಾರ್ ಶೆಟ್ಟಿ, ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಆನಂದ ಸಿ.ಕುಂದರ್ ಅವರನ್ನು ಸಮ್ಮಾನಿಸಲಾಯಿತು. ಹೆ„ನುಗಾರಿಕೆಯನ್ನು ಪ್ರೋತ್ಸಾಹಿಸುವ ಸಲುವಾಗಿ ದಾನಿಗಳಾದ ಆನಂದ ಸಿ.ಕುಂದರ್, ಪ್ರೇಮಾ ತಿಮ್ಮ ಪೂಜಾರಿ ಮತ್ತು ಜಗದೀಶ್ ಕಾರಂತ ಐರೋಡಿ, ಪಂಚವರ್ಣ ಯುವಕ ಮಂಡಲ ಕೋಟ ಇವರು ಅರ್ಹ ಹೆ„ನುಗಾರರಿಗೆ ಉಚಿತ ಜಾನುವಾರಗಳನ್ನು ಕೊಡುಗೆಯಾಗಿ ನೀಡಿದರು.