ಕುಂದಾಪುರ; ಜ.೨೬ ರಂದು ಕೋಟ ಚಿಕ್ಕನಕೆರೆ ಎಂಬಲ್ಲಿ ತಡರಾತ್ರಿ ನಡೆದಿದ್ದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ೧೬ ಮಂದಿ ಆರೋಪಿಗಳನ್ನು ಶುಕ್ರವಾರ ಕುಂದಾಪುರ ಹೆಚ್ಚುವರಿ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಕಾಂತ ಅವರ ಮುಂದೆ ಹಾಜರುಪಡಿಸಲಾಗಿದೆ.
ಪೊಲೀಸರಿಂದ ಬಂಧನಕ್ಕೊಳಗಾಗಿ ಇಂದಿನವರೆಗೆ ನ್ಯಾಯಾಂಗ ಬಂಧನದಲ್ಲಿದ್ದ ಅಭಿಷೇಕ್ ಪಾಲನ್, ರೊಟ್ಟಿ ನಾಗರಾಜ್, ಸಂತೋಷ್ ಕುಂದರ್, ಪ್ರಣವ್ ರಾವ್, ಪವನ್ ಅಮೀನ್, ವಿರೇಂದ್ರ ಆಚಾರ್ಯ, ರಿತೇಶ್ ಕರ್ಕೇರಾ, ಶಂಕರ ಮೊಗವೀರ ಹಾಗೂ ಪೊಲೀಸ್ ಕಸ್ಟಡಿಯಲ್ಲಿದ್ದ ರಾಜಶೇಖರ ರೆಡ್ಡಿ, ಹರೀಶ್ ರೆಡ್ಡಿ, ರಾಘವೇಂದ್ರ ಕಾಂಚನ್, ಮಹೇಶ್ ಗಾಣಿಗ, ರವಿಚಂದ್ರ ಹಾಗೂ ರವೀಂದ್ರ ಅವರಿಗೆ ಮಾ.೧ ವರೆಗೆ ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದೆ.
ಗುರುವಾರ ಬಂಧಿಸಲ್ಪಟ್ಟ ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ಚಂದ್ರಶೇಖರ ರೆಡ್ಡಿ ಹಾಗೂ ಸುಜಯ್ಗೆ ಫೆ.೨೦ರವರೆಗೆ ಪೊಲೀಸ್ ಕಸ್ಟಡಿ ನೀಡಲಾಗಿದೆ.
ಜಾಮೀನಿಗಾಗಿ ಅರ್ಜಿ:
ಪ್ರಕರಣದಲ್ಲಿ ಆರೋಪಿಗಳಾಗಿರುವ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಪೊಲೀಸ್ ಸಿಬ್ಬಂದಿಗಳಾದ ಪವನ್ ಅಮೀನ್, ವಿರೇಂದ್ರ ಆಚಾರ್ಯ ಹಾಗೂ ಕಾಲೇಜು ವಿದ್ಯಾರ್ಥಿಯಾಗಿರುವ ಪ್ರಣವ್ ರಾವ್ಗೆ ಜಾಮೀನು ನೀಡುವಂತೆ ಮನವಿ ಸಲ್ಲಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ. ಕುಂದಾಪುರದ ಹಿರಿಯ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ಆರೋಪಿಗಳ ಪರವಾಗಿ ವಾದ ಮಂಡಿಸಿದ್ದಾರೆ.
ಆರೋಪಿಗಳು ಘಟನೆಯ ಸಂದರ್ಭದಲ್ಲಿ ನೇರವಾಗಿ ಭಾಗಿಯಾಗಿಲ್ಲ. ಪ್ರಕರಣದ ಒಳ ಸಂಚು ಹಾಗೂ ಪ್ರಚೋದನೆಯಲ್ಲಿ ಭಾಗಿಯಾಗಿಲ್ಲ. ಅವರ ಮೇಲಿರುವ ಸಾಕ್ಷಿ ನಾಶ ಹಾಗೂ ಆರೋಪಿಗಳು ತಪ್ಪಿಸಿಕೊಳ್ಳಲು ಸಹಕರಿಸಿದ್ದಾರೆ ಎನ್ನುವ ಆರೋಪಗಳು ಜಾಮೀನು ಪರಿಗಣನೆಗೆ ಅರ್ಹವಾಗಿರುವ ಪ್ರಕರಣವಾಗಿರುವುದರಿಂದ ಜಾಮೀನು ಅರ್ಜಿಯನ್ನು ಶೀಘ್ರವೇ ಇತ್ಯರ್ಥ ಪಡಿಸುವಂತೆ ರವಿಕಿರಣ್ ಮುರ್ಡೇಶ್ವರ ವಾದ ಮಂಡಿಸಿದ್ದಾರೆ.
ಪ್ರಾಸಿಕ್ಯೂಶನ್ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಸುಮಂಗಲ ನಾಯಕ್ ನಾಳೆ ಮಂಡಿಸಲಿರುವುದರಿಂದಾಗಿ ಪ್ರಕರಣದ ವಿಚಾರಣೆಯನ್ನು ಶನಿವಾರಕ್ಕೆ ಮುಂದೂಡಲಾಗಿದೆ.