ಕುಂದಾಪುರ: ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ ಕೋಟ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿ.ಪಂ ಸದಸ್ಯ ರಾಘವೇಂದ್ರ ಕಾಂಚನ್ ಬಾರಿಕೆರಿ ಸೇರಿದಂತೆ ಆರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣದ ಪ್ರಮುಖ ಎಂಟು ಆರೋಪಿಗಳ ಪೈಕಿ ಆರು ಜನರನ್ನು ಬಂಧಿಸಿರುವ ಉಡುಪಿ ಎಸ್ಪಿ ಹಾಗೂ ಡಿಸಿಐಬಿ ಪೊಲೀಸರು ಶುಕ್ರವಾರ ಸಂಜೆ ಆರೋಪಿಗಳನ್ನು ಕುಂದಾಪುರ ಹೆಚ್ಚುವರಿ ಜೆಎಮ್ಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಧೀಶ ಶ್ರೀಕಾಂತ್ ಹೆಚ್ಚಿನ ವಿಚಾರಣೆಗಾಗಿ ಫೆ.೧೫ರ ತನಕ ಅಂದರೆ ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದಾರೆ.
ಪ್ರಕರಣದಲ್ಲಿ ಭಾಗಿಯಾಗಿದ್ದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ರೌಡಿಶೀಟರ್ ಹರೀಶ್ ರೆಡ್ಡಿ, ಆತನ ಸಹೋದರನಾದ ರಾಜಶೇಖರ ರೆಡ್ಡಿ, ಪ್ರಕರಣದ ಮೊದಲು ಹಾಗೂ ನಂತರ ನಿರಂತರ ಹರೀಶ್ ರೆಡ್ಡಿಯ ಜೊತೆಗೆ ಮೊಬೈಲ್ ಸಂಪರ್ಕದಲ್ಲಿದ್ದ ಕೋಟ ಜಿಲ್ಲಾ ಪಂಚಾಯಿತಿ ಸದಸ್ಯ ಬಿಜೆಪಿ ಮುಖಂಡ ರಾಘವೇಂದ್ರ ಕಾಂಚನ್ ಬಾರಿಕೆರಿ, ಜಿ. ರವಿ ಯಾನೆ ಮೆಡಿಕಲ್ ರವಿ, ಮಹೇಶ್ ಗಾಣಿಗ, ರವಿಚಂದ್ರ ಪೂಜಾರಿ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳು. ಹರೀಶ್ ರೆಡ್ಡಿ ಸಹೋದರ ಚಂದ್ರಶೇಖರ್ ರೆಡ್ಡಿ ಹಾಗೂ ಗಣೇಶ್ ಎಂಬುವರು ತಲೆ ಮರೆಸಿಕೊಂಡಿದ್ದು, ಅವರ ಪತ್ತೆಗೆ ಪೊಲೀಸ್ ಇಲಾಖೆ ಬಲೆ ಬೀಸಿದೆ.
ತಲವಾರುಗಳ ವಶ:
ಡಿಸಿಐಬಿ ತಂಡವು ಆರೋಪಿಗಳನ್ನು ಬಂಧಿಸಿದ ಬಳಿಕ ಆರೋಪಿಗಳ ಹೇಳಿಕೆ ಪಡೆದು ಫೆ. ೮ರ ಶುಕ್ರವಾರ ಆರೋಪಿಗಳನ್ನು ಸ್ಥಳ ಮಹಜರು ನಡೆಸಲಾಯಿತು. ಈ ಸಂದರ್ಭ ಕೃತ್ಯಕ್ಕೆ ಬಳಸಿ ಎಸೆಯಲಾದ ತಲವಾರುಗಳನ್ನು ಬಾಳೆಬೆಟ್ಟು ತಿರುವಿನಲ್ಲಿ ಬಿಸಾಡಿದ್ದನ್ನು ಆರೋಪಿಗಳು ತೋರಿಸಿದ್ದು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ನ್ಯಾಯಾಲಯ ಆವರಣದಲ್ಲಿ ಜಮಾಯಿಸಿದರು:
ಕೊಲೆ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುತ್ತಿರುವ ಮಾಹಿತಿ ತಿಳಿದು ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಕುಂದಾಪುರ ನ್ಯಾಯಾಲಯದ ಆವರಣದ ಒಳಗಡೆ ಹಾಗೂ ಹೊರಗಡೆ ಜಮಾಯಿಸಿದ್ದರು. ಸುದೀರ್ಘ ಮೂರ್ನಾಲ್ಕು ಅಧಿಕ ಗಂಟೆಗಳ ಕಾಲ ನ್ಯಾಯಾಲಯದ ಹೊರಗಡೆ ಬೀಡುಬಿಟ್ಟ ಯುವಕರು ಆರೋಪಿಗಳನ್ನು ಮರಳಿ ಕರೆದುಕೊಂಡು ಹೋಗುವ ತನಕವೂ ಕೋರ್ಟ್ ಆವರಣದಲ್ಲಿದ್ದು ವೀಕ್ಷಿಸಿದರು.
ಶಾಸಕ ಹಾಲಾಡಿ ಆಪ್ತ ರಾಘು ಬಾರಿಕೆರಿ!
ಬಿಜೆಪಿಯಿಂದ ಕೋಟ ಜಿ.ಪಂ ಸದಸ್ಯನಾಗಿ ಆಯ್ಕೆಯಾಗಿದ್ದ ರಾಘವೇಂದ್ರ ಕಾಂಚನ್ ಕುಂದಾಫುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಆಪ್ತನಾಗಿ ಗುರುತಿಸಿಕೊಂಡಿದ್ದ. ಅಲ್ಲದೇ ಆ ಭಾಗದಲ್ಲಿ ಯುವಕರ ಸಂಘ ಕಟ್ಟಿಕೊಂಡಿದ್ದು, ಇದಕ್ಕೆ ವಿರುದ್ದವಾಗಿ ಕೋಟದಲ್ಲಿ ಇನ್ನೊಂದು ಸಂಘಟನೆ ಹುಟ್ಟಿಕೊಂಡಿದ್ದು ಅದರ ಮುಖಂಡನಾಗಿ ಭರತ್ ಶ್ರೀಯಾನ್ ಗುರುತಿಸಿಕೊಂಡಿದ್ದ. ತನ್ನ ಸಂಘಟನೆಗೆ ಪರ್ಯಾಯವಾಗಿ ಬೇರೊಂದು ಸಂಘಟನೆ ಹುಟ್ಟುಹಾಕಿ ಸಾಕಷ್ಟು ಹೆಸರು ಗಳಿಸಿದ್ದ.ತನ್ನ ಸಂಘಟನೆಗೆ ಪರ್ಯಾಯವಾಗಿ ಬೇರೊಂದು ಸಂಘಟನೆ ಹುಟ್ಟುಹಾಕಿ ಸಾಕಷ್ಟು ಹೆಸರು ಗಳಿಸಿದ್ದ ಭರತ್ ಮೇಲೆ ರಾಘವೇಂದ್ರ ಬಾರಿಕೆರಿಗೆ ಮುನಿಸಿತ್ತು. ಇದೇ ದ್ವೇಷದಲ್ಲಿ ಸಂಚು ನಡೆಸಿ ಭರತನನ್ನು ಕೊಲೆ ಮಾಡಿರಬಹುದೆಂಬ ಬಲವಾದ ಶಂಕೆ ವ್ಯಕ್ತವಾಗಿದೆಯಾದರೂ ಪೊಲೀಸ್ ತನಿಖೆಯ ವೇಳೆ ನಿಜಾಂಶ ಬಯಲಿಗೆ ಬರಬೇಕಿದೆ.