ಕೊರಂಗ್ರಪಾಡಿ ಅಪಘಾತ: ಗಾಯಾಳು ವಿದ್ಯಾರ್ಥಿ ಮೃತ್ಯು

ಉಡುಪಿ, ಜೂ.24: ಕೊರಂಗ್ರಪಾಡಿ ಸಮೀಪ ಜೂ.19ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಉದ್ಯಾವರ ಕೊರಂಗ್ರಪಾಡಿಯ ಎಂಇಟಿ ಆಂಗ್ಲ ಮಾಧ್ಯಮ ಶಾಲೆಯ ಎಸೆಸೆಲ್ಸಿ ವಿದ್ಯಾರ್ಥಿ ರೋಶನ್ (16) ಎಂಬವರು ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಪಣಿಯಾಡಿ ಬುಡ್ನಾರು ನಿವಾಸಿ ರಿಯಾಝ್ ಎಂಬವರ ಏಕೈಕ ಪುತ್ರರಾಗಿದ್ದ ರೋಶನ್, ಜೂ.19ರಂದು ಬೆಳಗ್ಗೆ ತನ್ನ ತಂದೆಯ ರಿಕ್ಷಾದಲ್ಲಿ ವಿಶೇಷ ತರಗತಿಗಾಗಿ ಶಾಲೆಗೆ ತೆರಳುತ್ತಿದ್ದರು. ಕುಕ್ಕಿಕಟ್ಟೆ ಕಡೆಯಿಂದ ಕೊರಂಗ್ರಪಾಡಿ ಕಡೆಗೆ ಹೋಗುತ್ತಿದ್ದ ರಿಕ್ಷಾ ವಾಹನವೊಂದನ್ನು ಓವರ್ ಟೇಕ್ ಮಾಡುವ ಭರದಲ್ಲಿ ಎದುರಿನಲ್ಲಿ ಬರುತ್ತಿದ್ದ ಬಸ್‌ಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ.
ಇದರ ಪರಿಣಾಮ ರಿಕ್ಷಾ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಗಂಭೀರವಾಗಿ ಗಾಯಗೊಂಡ ರೋಶನ್ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಅಪಘಾತದಲ್ಲಿ ರಿಯಾಝ್ ಕೂಡ ಅಲ್ಪಸ್ವಲ್ಪ ಗಾಯಗೊಂಡಿದ್ದರು. ಮೃತರ ಅಂತ್ಯಕ್ರಿಯೆ ಸಂಜೆ ಇಂದ್ರಾಳಿ ಮಸೀದಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.