ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಹಾಸನದ ಕೃಷಿಕನನ್ನು ರಕ್ಷಿಸಿದ ಮಂಗಳೂರು ಪೊಲೀಸರು

ಮಂಗಳೂರು: ನಗರದ ಹೊರವಲಯದ ಕೂಳೂರು ಸೇತುವೆ Kuloor Bridge ಸಮೀಪದ ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಹಾಸನ ಜಿಲ್ಲೆಯ Hassan District ಜಿಲ್ಲೆಯ ಕೃಷಿಕನನ್ನು ಪಣಂಬೂರು ಪೊಲೀಸರು ಸಮಯಪ್ರಜ್ಞೆಯಿಂದ ರಕ್ಷಿಸಿದ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಸಮೀಪದ ಹಳ್ಳಿಯ ನಿವಾಸಿಯಾಗಿರುವ ಕೃಷಿಕ ಆರೋಗ್ಯ ಹಾಗೂ ಹಣಕಾಸಿನ ಸಮಸ್ಯೆಯಿಂದ ಮನನೊಂದು ಶುಕ್ರವಾರ ಬೆಳಗ್ಗೆ ಮನೆಯಿಂದ ಯಾರಿಗೂ ತಿಳಿಸದೆ ಹೊರಟಿದ್ದರು. ಮೊಬೈಲ್‌ಫೋನ್ ಆನ್‌ನಲ್ಲಿದ್ದ ಕಾರಣ ಮನೆಯವರು ನಿರಂತರ ಕರೆ ಮಾಡಿ ಮನೆಗೆ ಮರಳುವಂತೆ ಮನವಿ ಮಾಡಿಕೊಂಡರೂ, ತಮ್ಮಿರುವ ಸ್ಥಳವನ್ನು ತಿಳಿಸದೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಕರೆ ಕಡಿತಗೊಳಿಸುತ್ತಿದ್ದರು ಎಂದು ತಿಳಿದುಬಂದಿದೆ.

ಆತಂಕಗೊಂಡ ಕುಟುಂಬಸ್ಥರು ಪರಿಚಯದ ನಿವೃತ್ತ ಪೊಲೀಸ್ ಅಧಿಕಾರಿಯ ಮೂಲಕ ಪಣಂಬೂರು ಪೊಲೀಸ್ ನಿರೀಕ್ಷಕ ಸಲೀಂ ಅಬ್ಬಾಸ್ Saleem Abbas ಅವರನ್ನು ಸಂಜೆ ಸುಮಾರು 5:30ರ ವೇಳೆಗೆ ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ತಕ್ಷಣವೇ ಹಿರಿಯ ಅಧಿಕಾರಿಗಳ ಗಮನಕ್ಕೆ ವಿಷಯ ತಂದು ಕಾರ್ಯಾಚರಣೆ ಆರಂಭಿಸಲಾಯಿತು.

ಪೊಲೀಸ್ ಆಯುಕ್ತರ ಕಚೇರಿಯ ಸಹಾಯದಿಂದ ಕೃಷಿಕನ ಮೊಬೈಲ್ ಲೊಕೇಶನ್ ಪತ್ತೆ ಹಚ್ಚಿದ ಪೊಲೀಸರು, ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವೇಳೆ ಅವರನ್ನು ಸುರಕ್ಷಿತವಾಗಿ ರಕ್ಷಿಸುವಲ್ಲಿ ಯಶಸ್ವಿಯಾದರು.

ಕಾರ್ಯಾಚರಣೆಯಲ್ಲಿ ಉಪ ಪೊಲೀಸ್ ನಿರೀಕ್ಷಕ ಜ್ಞಾನಶೇಖರ್, ಎಎಸ್ಸೆ ಸುಬ್ರಹ್ಮಣ್ಯ ಹಾಗೂ ಸಿಬ್ಬಂದಿ ಸುರೇಂದ್ರ, ದೀಪಕ್, ಇಮಿಯಾಝ್, ರಾಕೇಶ್, ಫಕಿರೇಶ್, ಶರಣ ಬಸವ, ಅನ್ವರ್ ಮತ್ತು ಮಂಜುನಾಥ್ ಭಾಗವಹಿಸಿದ್ದರು.