ಇಂದಿರಾಗೆ ಮಿಡಿಯಿತು ಸಹಸ್ರಾರು ಹೃದಯ: ಮುದ್ದಿನ ಆನೆಗೆ ಕಣ್ಣೀರ ವಿದಾಯ

ಕುಂದಾಪುರ: ಕಳೆದೊಂದು ವಾರದಿಂದ ತೀವ್ರ ಅನಾರೋಗ್ಯಕ್ಕೀಡಾಗಿ ಮಂಗಳವಾರ ಸಂಜೆ ಮೃತಪಟ್ಟ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಆನೆ ಇಂದಿರಾ ಅಂತ್ಯ ಸಂಸ್ಕಾರ ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಬುಧವಾರ ನೆರವೇರಿತು.
ಜಗತ್ಪ್ರಸಿದ್ದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದಲ್ಲಿ ೨೨ ವರ್ಷಗಳಿಂದ ದೇವಿಗೆ ಸೇವೆ ಸಲ್ಲಿಸುತ್ತಿದ್ದ ಇಂದಿರಾ ವಾರಗಳಿಂದೀಚೆಗೆ ಜ್ವರದಿಂದ ಬಳಲಿತ್ತು. ವೈದ್ಯರು ಚಿಕಿತ್ಸೆ ನೀಡಿದ್ದಲ್ಲದೇ ಸುಮಾರು ೫೦ಕ್ಕೂ ಅಧಿಕ ಬಾಟಲಿ ಗ್ಲೂಕೋಸ್ ಕೊಟ್ಟು ಇಂದಿರಾ ಚೇತರಿಕೆಗೆ ಹರಸಾಹಸಪಟ್ಟಿದ್ದರೂ ಚಿಕಿತ್ಸೆಗೆ ಸ್ಪಂದಿಸದೆ ಆನೆ ಇಹಲೋಕ ತ್ಯಜಿಸಿದೆ.

ದೇವಸ್ಥಾನಕ್ಕೆ ಬರುವ ಭಕ್ತರು ನೀಡುವ ಕಾಣಿಕೆ, ಬಾಳೆಹಣ್ಣುಗಳನ್ನು ಪಡೆದು ಅವರಿಗೆ ಸೌಮ್ಯವಾಗಿ ಆಶೀರ್ವಾದ ಮಾಡುತ್ತಿದ ಇಂದಿರಾ ಯಾವತ್ತು ಭಕ್ತರಿಗೆ ತೊಂದರೆಯನ್ನುಂಟು ಮಾಡಿರಲಿಲ್ಲ. ಇಂದಿರಾ ದಿಢೀರ್ ಸಾವು ಭಕ್ತರು ಹಾಗೂ ದೇವಳದ ಆಸುಪಾಸಿನ ಮಂದಿಗೆ ದಿಗ್ಭ್ರಮೆಯನ್ನುಂಟುಮಾಡಿದೆ.

ಕೊಲ್ಲೂರಿನಲ್ಲಿ ಸ್ವಯಂಪ್ರೇರಿತ ಬಂದ್:
ಎಲ್ಲರಿಗೂ ಪ್ರೀತಿಪಾತ್ರವಾಗಿದ್ದ ಇಂದಿರಾ ಸಾವಿಗೆ ಸಾರ್ವಜನಿಕರು ಕಂಬನಿ ಮಿಡಿದಿದ್ದು, ಕೊಲ್ಲೂರಿನಲ್ಲಿ ಆಟೋ ರಿಕ್ಷಾ, ಜೀಪು ಸಂಚಾರವನ್ನು ಸ್ಥಗಿತಗೊಳಿಸಿದ್ದಲ್ಲದೇ ಬಹುತೇಕ ಅಂಗಡಿ ಮಾಲೀಕರು ತಮ್ಮ ಅಂಗಡಿಗಳನ್ನು ಮುಚ್ಚಿ ಇಂದಿರಾ ಸಾವಿಗೆ ಶೋಕ ವ್ಯಕ್ತಪಡಿಸಿದ್ದಾರೆ.


ದಿನನಿತ್ಯವೂ ಸೇವೆ:
ಬಾಳೆಹೊನ್ನೂರಿನ ಮಧು ಎನ್ನುವರು ದೇವಳಕ್ಕೆ ದಾನವಾಗಿ ಕೊಟ್ಟಿದ್ದ ಆನೆಗೆ ಅಂದಿನ ಮೊಕ್ತೇಸರ ಅಪ್ಪಣ್ಣ ಹೆಗ್ಡೆ ನೇತೃತ್ವದಲ್ಲಿ ಇಂದಿರಾ ಎಂದು ನಾಮಕರಣ ಮಾಡಲಾಗಿತ್ತು. ಅಂದಿನಿಂದ ಬರೋಬ್ಬರಿ ಇಪ್ಪತ್ತೆರಡು ವರ್ಷ ದೇವಿಯ ಸೇವೆಯಲ್ಲಿ ತೊಡಗಿದ್ದ ಇಂದಿರಾ ಪದ್ದತಿಯಂತೆ ನಿತ್ಯ ಬೆಳಗ್ಗೆ ದೇವಳದ ಮುಖ್ಯ ದ್ವಾರದ ಮೂಲಕ ಪ್ರವೇಶಿಸಿ ಮೂರು ಸುತ್ತು ಪ್ರದಕ್ಷಿಣೆ ಸಲ್ಲಿಸಿ ಬಳಿಕ ಧ್ವಜಕ್ಕೆ ಹಾಗೂ ಅಧಿಕಾರಿ ಹಾಗೂ ವ್ಯವಸ್ಥಾಪನ ಸಮಿತಿ ಕೊಠಡಿಗೆ ಹಾರೈಸಿ ದೇವಸ್ಥಾನದ ಹೊರ ಆವರಣದ ತನ್ನ ಸ್ಥಾನದಲ್ಲಿ ಮಾವುತನ ಸಮೇತ ಬಂದು ನಿಂತು ಭಕ್ತರನ್ನು ಸಂತುಷ್ಟಗೊಳಿಸುತ್ತಿತ್ತು.

 ಹರಿಯಿತು ಕಣ್ಣೀರು:
ತೀವ್ರ ಜ್ವರದಿಂದ ಸಾವನ್ನಪ್ಪಿದ ಆನೆಯನ್ನು ನೋಡಲು ತಡರಾತ್ರಿಯ ತನಕವೂ ಜನರು ಆಗಮಿಸಿ ಅಂತಿಮ ದರ್ಶನ ಪಡೆದಿದ್ದಲ್ಲದೇ ಬುಧವಾರ ಮುಂಜಾನೆಯಿಂದಲೂ ಸುರಿವ ಮಳೆಯನ್ನೂ ಲೆಕ್ಕಿಸದೆ ಸಹಸ್ರಾರು ಮಂದಿ ಕೊಲ್ಲೂರಿನ ಕಲ್ಯಾಣಿಗುಡ್ಡೆಗೆ ಇಂದಿರಾ ಅಂತಿಮ ದರ್ಶನಕ್ಕೆ ಆಗಮಿಸಿದ್ದರು. ಬಹುತೇಕರು ಹೂ, ಗಂಧದ ಹಾರ, ಅಗರಬತ್ತಿ ತಂದು ಅರ್ಪಿಸಿ, ಗಜರಾಣಿಗೆ ಸುತ್ತುಹಾಕಿ ಆಕೆಯನ್ನು ಸ್ಪರ್ಷಿಸಿ ಕಣ್ಣಂಚಲ್ಲಿ ನೀರು ಹಾಕಿದರು ಇಂದಿರಾ ನಿತ್ಯ ನಿಲ್ಲುತ್ತಿದ್ದ ಜಾಗ ಇದೀಗ ಬಿಕೋ ಎನ್ನುತ್ತಿದೆ.

ಮರಣೋತ್ತರ ಪರೀಕ್ಷೆ:
ಅರಣ್ಯ ಇಲಾಖೆ ಹಾಗೂ ಸಕ್ಕರೆಬೈಲಿನಿಂದ ಬಂದ ನುರಿತ ವೈದ್ಯರಿಂದ ನಾಲ್ಕೈದು ಗಂಟೆಗಳ ಕಾಲ ಮರಣೋತ್ತರ ಪರೀಕ್ಷೆ ನಡೆಯಿತು. ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರ ಸಮೇತ ಅಧಿಕಾರಿಗಳು ಸಿಬ್ಬಂದಿಗಳು ಕೂಡ ನೋವಿನಲ್ಲಿಯೇ ಇಂದಿರಾಳನ್ನು ಪಂಚಭೂತಗಳಲ್ಲಿ ಲೀನಗೊಳಿಸುವ ಪ್ರಕ್ರಿಯೆಯಲ್ಲಿ ಭಾಗಿಯಾಗಿದರು. ಸಕಲ ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸಿ ಗಜ ಕಳಷ ಹೋಮವನ್ನು ನಡೆಸಲಾಯಿತು. ಇಂದಿರಾ ಇರುತ್ತಿದ್ದ ಶೆಡ್ ಸಮೀಪದಲ್ಲಿಯೇ ಕ್ವಿಂಟಾಲುಗಟ್ಟಲೇ ಕಟ್ಟಿಗೆ, ಐದು ಡಬ್ಬಿ ತುಪ್ಪ, ಗಂಧದ ಮೂಲಕ ಚಿತೆ ಸಿದ್ದಪಡಿಸಿ ಮುಸ್ಸಂಜೆ ಹೊತ್ತಿಗೆ ಅಗ್ನಿಸ್ಪರ್ಷ ಮಾಡಲಾಯಿತು.

ಕೊಲ್ಲೂರು ಮೂಕಾಂಬಿಕ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ, ಹಿರಿಯ ಸದಸ್ಯರಾದ ವಂಡಬಳ್ಳಿ ಜಯರಾಮ ಶೆಟ್ಟಿ ಸೇರಿದಂತೆ ಸದಸ್ಯರುಗಳು, ಮಾಜಿ ಅಧ್ಯಕ್ಷ ಅಪ್ಪಣ್ಣ ಹೆಗ್ಡೆ, ವಿವಿಧ ಪಕ್ಷಗಳ ಮುಖಂಡರು, ಅರಣ್ಯ, ಪೊಲೀಸ್ ಇಲಾಖಾಧಿಕಾರಿಗಳು ಭೇಟಿ ನೀಡಿದ್ದರು.

ಚಿಕಿತ್ಸೆ ನೀಡಿದರೆ ಆನೆ ಉಳಿಯುತ್ತಿತ್ತು:
ಕರ್ನಾಟಕದ ಶ್ರೀಮಂತ ದೇವಾಲಗಳಲ್ಲೊಂದಾದ ಕೊಲ್ಲೂರು ದೇವಳದಲ್ಲಿ ಆನೆ ಸಾಕುವುದಕ್ಕೆ ಆರ್ಥಿಕವಾದ ಸಂಕಷ್ಟವೇನಿಲ್ಲ. ಕಳೆದ ಕೆಲ ದಿನಗಳಿಂದ ಅಸ್ವಸ್ಥಗೊಂಡು ಬಳಲುತ್ತಿದ್ದರೂ ಇಂದಿರಾಗೆ ಸಕಾಲದಲ್ಲಿ ಚಿಕಿತ್ಸೆ ನೀಡಿಲ್ಲವೆಂದು ಸಾರ್ವಜನಿಕರು ಆಕ್ರೋಶಗಳನ್ನು ಹೊರಹಾಕಿದ್ದಾರೆ. ತೀವ್ರ ಜ್ವರದಿಂದ ಬಳಲುತ್ತಿದ್ದ ಇಂದಿರಾಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಿದ್ದರೆ ಉಳಿಸಿಕೊಳ್ಳಬಹುದಿತ್ತು. ಇಂದಿರಾ ಸಾವಿಗೆ ಬೇಜವಾಬ್ದಾರಿಯೆ ಕಾರಣ ಎಂಬ ಬಲವಾದ ಆರೋಪಗಳು ಸ್ಥಳೀಯವಾಗಿ ಕೇಳಿಬರುತ್ತಿವೆ.