ಕೊಲ್ಲೂರಿನ ಮುದ್ದಿನ ಆನೆ ಇಂದಿರಾ ಇನ್ನಿಲ್ಲ!: ಲೋಕ ಬಿಟ್ಟು ಹೋದಳು ಪ್ರೀತಿಯ ಇಂದಿರಾ

ಕುಂದಾಪುರ :ಕೊಲ್ಲೂರು ಶ್ರೀಮುಕಾಂಬಿಕಾ ದೇವಾಲಯದ ಹೆಣ್ಣಾನೆ ಇಂದಿರಾ (62) ಮಂಗಳವಾರ ಅನಾರೋಗ್ಯದಿಂದ ಮೃತಪಟ್ಟಿದೆ.
ಅತ್ಯಂತ ಸಾಧು ಸ್ವಭಾವದ ಈ ಆನೆ ದೇವಾಲಯಕ್ಕೆ ನಿತ್ಯ ಬರುವ ಸಾವಿರಾರು ಮಂದಿ ಭಕ್ತರ, ಪ್ರವಾಸಿಗರ ಆಕರ್ಷಣೆಗೆ ಕಾರಣವಾಗಿತ್ತು.
ಮಂಗಳವಾರ ಬೆಳಿಗ್ಗೆ ಅದರ ಶೆಡ್ ನಲ್ಲಿ ನಿಂತಲ್ಲಿಯೇ ಕುಸಿದು ಬಿತ್ತು, ತಕ್ಷಣ ಪಶು ವೈದ್ಯರನ್ನು ಕರೆಸಲಾಯಿತು. ಅವರು ಪರೀಕ್ಷಿಸಿ ತಲೆಗೆ ಜ್ವರ ಏರಿದೆ ಎಂದು ಹೇಳಿದ್ದು, ಔಷಧೋಪಚಾರ ನಡೆಸಿದ್ದರು, ಆದರೇ ಮಲಗಿದ್ದಲ್ಲಿಂದ ಏಳದ ಇಂದಿರಾ ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದೆ.

ಬಾಳೆಹೊನ್ನೂರಿನ ಉದ್ಯಮಿ ಮಧು ಎನ್ನುವವರು ದಾನವಾಗಿ ನೀಡಿದ ಇಂದಿರಾ ಆನೆ ತನ್ನ 40 ವರ್ಷ ವಯಸ್ಸಿನಲ್ಲಿ ಕೊಲ್ಲೂರು ದೇವಿಯ ಸೇವೆಗೆ ನಿಯೋಜಿತವಾಗಿತ್ತು. ಅದು ಅಯ್ಯಣ್ಣ ಎಂಬ ಒಬ್ಬನೇ ಮಾವುತ ನೋಡಿಕೊಳ್ಳುವಷ್ಟು ಮೃಧು ಸ್ವಭಾವನನ್ನು ಹೊಂದಿತ್ತು. ದೇವಾಲಯದ ಪ್ರತಿದಿನದ ಪೂಜೆ, ವಿಶೇಷ ಉತ್ಸವಗಳ ಸಂದರ್ಭದಲ್ಲಿ ಇಂದಿರಾ ದೇವಾಲಯದ ಹೆಬ್ಬಾಗಿಲಿಗೆ ಬರುತ್ತಿತ್ತು.

ಕರ್ನಾಟಕದ ಶ್ರೀಮಂತ ದೇವಾಲಯಗಳಲ್ಲೊಂದಾದ ಕೊಲ್ಲೂರಿನಲ್ಲಿ ಆನೆ ಸಾಕುವುದಕ್ಕೆ ಆರ್ಥಿಕವಾಗಿ ಸಂಕಷ್ಟವೇನಿಲ್ಲ. ಆದ್ದರಿಂದ ವಿಶಾಲವಾದ ಆವರಣದಲ್ಲಿ, ಇಂದಿರಾ ಆನೆಗೆ ಅತ್ಯಂತ ಪ್ರಿಯವಾದ ಬೈನೆಮರದ ಗರಿ (ಸೋಗೆ) ಮತ್ತು ತರಕಾರಿ, ಬೇಳೆ, ಬಾಳೆಹಣ್ಣುಗಳನ್ನು ತಿನ್ನಿಸಿ ಚೆನ್ನಾಗಿ ಸಾಕಲಾಗುತ್ತಿತ್ತು.


ಹಿಂದೆ ಇಲ್ಲಿ ಗಜೇಂದ್ರ ಎಂಬ ಬಾರೀ ದೇಹದ ಗಂಡಾನೆಯೂ ಇತ್ತು, ಆದರೇ ಅದಕ್ಕೆ ಮದವೇರಿದಾಗ ಅದನ್ನು ತಡೆಯುವುದು ಕಷ್ಟವಾಗುತ್ತಿತ್ತು. ಆದ್ದರಿಂದ ಅದನ್ನು 10 ವರ್ಷಗಳ ಹಿಂದೆ ಸಕ್ಕರೆಬೈಲಿಗೆ ಕಳುಹಿಸಲಾಗಿದೆ. ಅಲ್ಲಿಂದ ಇಂದಿರಾ ದೇವಾಲಯದ ಏಕೈಕ ಆನೆಯಾಗಿತ್ತು.

ನಾಳೆ ಕೊಲ್ಲೂರು ಪೇಟೆ ಸ್ವಯಂ ಬಂದ್:
ಕೊಲ್ಲೂರಿಗೆ ಬರುವ ಪ್ರತಿಯೊಬ್ಬ ಭಕ್ತರಿಗೂ ಇಂದಿರಾ ಅನೆ ಅತ್ಯಂತ ಆಕರ್ಷಣೆಯ ಕೇಂದ್ರವಾಗಿತ್ತು, ಅದಕ್ಕೆ ಬಾಳೆ ಹಣ್ಣು ತೆಂಗಿನ ಕಾಯಿ ತಿನ್ನಿಸಿ ಅದರೊಂದಿಗೆ ಒಂದು ಸೆಲ್ಪಿ ಕ್ಲಿಕ್ಕಿಸುವುದು ನಿತ್ಯ ಸಾಮಾನ್ಯ ದೃಶ್ಯವಾಗಿತ್ತು.
ಕೊಲ್ಲೂರಿನ ಪ್ರತಿಯೊಬ್ಬರಿಗೂ ಇಂದಿರಾ ಅತ್ಯಂತ ಪ್ರಿಯವಾಗಿತ್ತು. ಅದು ಸತ್ತಿರುವ ವಿಷಯ ತಿಳಿದು ಕೊಲ್ಲೂರು ಪೇಟೆಯ ಜನರು ಬಂದು ಅಂತಿಮ ದರ್ಶನ ಪಡೆದು ಕಣ್ಣೀರು ಮಿಡಿಯುತ್ತಿದ್ದರು. ಅದರ ಗೌರವಾರ್ಥ ಇಂದು ಕೊಲ್ಲೂರು ಪೇಟೆಯಲ್ಲಿ  ಬಂದ್ ಆಚರಿಸಲಾಗಿದೆ.
ಬುಧವಾರ ದೇವಾಲಯದ ವತಿಯಿಂದ ಧಾರ್ಮಿಕ ವಿಧಿಗಳನ್ನು ನಡೆಸಿ ಅನೆಯ ಅಂತ್ಯಸಂಸ್ಕಾರಗಳನ್ನು ನಡೆಸಲಾಗುತ್ತದೆ.