ಕೊಡವೂರು ದಿವ್ಯಾಂಗ ರಕ್ಷಣಾ ಸಮಿತಿ ವತಿಯಿಂದ ದಿವ್ಯಾಂಗರಿಗೆ ಉಡುಗೊರೆ ಹಸ್ತಾಂತರ

ಕೊಡವೂರು: ಕೊಡವೂರು ದಿವ್ಯಾಂಗ ರಕ್ಷಣಾ ಸಮಿತಿಯ ವತಿಯಿಂದ ನಡೆಯಲು ಹಾಗೂ ದುಡಿಯಲು ಅಶಕ್ತರಾಗಿರುವ ದಿವ್ಯಾಂಗರಿಗೆ ವೀಲ್ ಚೇರ್, ವಾಟರ್ ಬೆಡ್, ವಾಕರ್, ಹೊಲಿಗೆ ಯಂತ್ರ ಮತ್ತು ಅಕ್ಕಿಯನ್ನು ಮನೆ ಮನೆಯಿಂದ ಗುಜರಿ ಸಂಗ್ರಹಿಸಿ ನೀಡುತ್ತಿದ್ದೇವೆ ಎಂದು ದಿವ್ಯಾಂಗ ರಕ್ಷಣಾ ಸಮಿತಿಯ ಸಂಚಾಲಕ ಮತ್ತು ಉಡುಪಿ ನಗರಸಭೆ ಸದಸ್ಯ ಕೆ ವಿಜಯ್ ಕೊಡವೂರು ತಿಳಿಸಿದರು.

ನಾವು ಸಂಬಂಧಿಕರ ಗೃಹ ಪ್ರವೇಶಕ್ಕೆ ಅಥವಾ ಮನೆಯ ಹತ್ತಿರದ ನಮ್ಮ ಸ್ನೇಹಿತರ ಶುಭ ಕಾರ್ಯಕ್ಕೆ ಉಡುಗೊರೆಯನ್ನು ನೀಡಿ ಅವರ ಮುಂದಿನ ಜೀವನ ಸುಖಕರವಾಗಿರಲಿ ಎಂದು ಹಾರೈಸುತ್ತೇವೆ.
ನಮ್ಮ ಪರಿಸರದಲ್ಲಿ ನಮ್ಮ ಸಮಾಜದಲ್ಲಿರುವ ದೀನ ದುರ್ಬಲರು, ದುಡಿಯಲು ಮತ್ತು ನಡೆಯಲು ಸಾಧ್ಯವಿಲ್ಲದ ಬದುಕೇ ಕಷ್ಟಕರ ಆಗಿರುವ ದಿವ್ಯಾಂಗ ಜನರ ಬಗ್ಗೆ ಗಮನ ಕೊಡುವ ಅವಶ್ಯಕತೆ ಇದೆ. ಅವರ ಅಪೇಕ್ಷೆಗಳು ತುಂಬಾ ಇದ್ದು ಅದನ್ನು ಪೂರೈಸುವ ಜವಾಬ್ದಾರಿ ನಮ್ಮದಾಗಿದೆ. ಅದಕ್ಕಾಗಿ ಮನೆಯಲ್ಲಿರುವ ಗುಜರಿ ಸಾಮಗ್ರಿಗಳನ್ನು ಜನರು ದಿವ್ಯಾಂಗ ರಕ್ಷಣಾ ಸಮಿತಿಗೆ ನೀಡಿದಲ್ಲಿ ಅದನ್ನು ಮಾರಿ ಬಂದ ಹಣದಲ್ಲಿ ಸಮಿತಿಯ ವತಿಯಿಂದ ಅವರಿಗೆ ಬೇಕಾಗುವ ಸಾಮಗ್ರಿಗಳನ್ನು ನೀಡಲಾಗುವುದು.

ಕಳೆದ 2 ವರ್ಷಗಳಿಂದ ಅವರಿಗೆ ಬೇಕಾಗುವ ಮೆಡಿಕಲ್ ಕಿಟ್, ಅಕ್ಕಿ, ವಾಕರ್, ವೀಲ್ ಚೇರ್, ಹೊಲಿಗೆ ಯಂತ್ರ, ಔಷಧಿಗೆ ಧನ ಸಹಾಯ, ಹೀಗೆ ಹತ್ತು ಹಲವು ಸಮಾಗ್ರಿಗಳನ್ನು ನೀಡುತ್ತಲೆ ಬಂದಿದ್ದೇವೆ. ಜನರೂ ಕೂಡಾ ಮುಂದಿನ ದಿನಗಳಲ್ಲಿ ಸಮಿತಿಯ ಕೆಲಸಗಳಲ್ಲಿ ಸಹಕರಿಸಬೇಕು. ಈಗಾಗಲೇ ಕೊಡವೂರು ವಾರ್ಡಿನ ಪ್ರತಿ ಮನೆಯಿಂದ ಸಾಮಗ್ರಿಗಳನ್ನು ಸಂಗ್ರಹಿಸುತ್ತಿದ್ದು ಮುಂದಿನ ದಿನಗಳಲ್ಲಿ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಸಂಗ್ರಹಿಸಿ ಇದರಿಂದ ಬಂದ ಹಣದಿಂದ ದಿವ್ಯಾಂಗ ಜನರಿಗೆ ಉಡುಗೊರೆಯನ್ನು ನೀಡಿದರೆ ಅವರಿಗೂ ಆಸರೆಯಾಗಲಿದೆ ಎಂದು ವಿಜಯ್ ಕೊಡವೂರು ತಿಳಿಸಿದರು.

ಈ ಸಂದರ್ಭದಲ್ಲಿ ಅಣ್ಣಪ್ಪ ಶೆಟ್ಟಿ ಜುಮಾದಿ ನಗರ, ಅಜಿತ್ ಸೇನರ ಜಿಡ್ಡ, ವಿನಯ್ ಗರ್ಡೆ ಮತ್ತಿತರರು ಉಪಸ್ಥಿತರಿದ್ದರು.