ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಕೊಡವೂರು ಗ್ರಾಮದ ಸರಕಾರಿ ಜಾಗದ ಸರ್ವೇ ನಂ 53/6 ರಲ್ಲಿನ 67ಸೆಂಟ್ಸ್ ಜಾಗವನ್ನು ಕಲ್ಮತ್ ಮಸೀದಿಗೆ ಹಸ್ತಾಂತರ ಮತ್ತು ರದ್ದತಿ ಮಾಡಿರುವ ಪ್ರಕ್ರಿಯೆಗಳಲ್ಲಿ ನನ್ನ ಯಾವುದೇ ರೀತಿಯ ಹಸ್ತಕ್ಷೇಪ ಇಲ್ಲ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸ್ಪಷ್ಟಪಡಿಸಿದ್ದಾರೆ.
ನಾನು ಶಾಸಕನಾಗಿದ್ದಾಗ ವಕ್ಫ್ ಬೋರ್ಡ್ ನ ಮುಖಾಂತರ ಕಲ್ಮತ್ ಮಸೀದಿ ಹೆಸರಿಗೆ 67ಸೆಂಟ್ಸ್ ಸರ್ಕಾರಿ ಜಾಗ ವರ್ಗಾಯಿಸಿದ್ದೇನೆ ಎನ್ನುವ ಆಪಾದನೆಯ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದರಲ್ಲಿ ಯಾವುದೇ ಹುರುಳಿಲ್ಲ. ಇದು ನನ್ನ ವಿರುದ್ಧ ಅಪಪ್ರಚಾರ ಮಾಡುವ ಬಳಸುತ್ತಿರುವ ಪಿತೂರಿ ಅಷ್ಟೇ ಎಂದಿದ್ದಾರೆ.
ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಕ್ಷೇತ್ರದಲ್ಲಿರುವ ಎಲ್ಲಾ ಇಲಾಖೆಗಳಲ್ಲಿ ಸಮಸ್ಯೆಗಳನ್ನು ಅನುಭವಿಸುತ್ತಿರುವ ಜನಸಾಮಾನ್ಯರು ಸಮಸ್ಯೆ ಪರಿಹಾರಕ್ಕಾಗಿ ಮತ್ತು ಹೊಸ ಯೋಜನೆಗಳ ಅನುಷ್ಟಾನಕ್ಕಾಗಿ ಸಾವಿರಾರು ಅರ್ಜಿಗಳು ಬರುತ್ತವೆ. ಅಂತಹ ಅರ್ಜಿಗಳನ್ನು ಸಂಬಂದಪಟ್ಟ ಇಲಾಖೆಗಳಿಗೆ ಪರಿಶೀಲಿಸಿ ಕ್ರಮವಹಿಸುವಂತೆ ರವಾನಿಸುವುದು ಜನಪ್ರತಿನಿಧಿಗಳ ಜವಾಬ್ದಾರಿ. ಪ್ರಜಾಪ್ರಭುತ್ವದಲ್ಲಿ ಓರ್ವ ಜನಪ್ರತಿನಿಧಿಯಾಗಿ ಜಾತಿ-ಮತ, ವರ್ಣ-ಭೇದ, ಧರ್ಮವನ್ನು ನೋಡಿ ಅರ್ಜಿಗಳನ್ನು ಸ್ವೀಕರಿಸುವುದು ಅಥವಾ ಪರಿಹರಿಸುವುದು ಕಾನೂನು ಬದ್ಧವಲ್ಲ. ಯಾವುದೇ ತಾರತಮ್ಯ ಮಾಡದೇ ಜವಾಬ್ದಾರಿಯನ್ನು ನಿರ್ವಹಿಸುವುದು ಶಾಸಕನ ಕರ್ತವ್ಯ. ನನ್ನ ಅವಧಿಯಲ್ಲಿ ಅದನ್ನು ನಾನು ಸಮರ್ಥವಾಗಿ ನಿಭಾಯಿಸಿಕೊಂಡು ಬಂದಿದ್ದೇನೆ ಎಂದು ಹೇಳಿದ್ದಾರೆ.
ಕೊಡವೂರು ಗ್ರಾಮದಲ್ಲಿ ಕಲ್ಮತ್ ಮಸೀದಿಗೆ ಜಾಗದ ಹಸ್ತಾಂತರದ ಪ್ರಕ್ರಿಯೆ 2018ರಲ್ಲಿ ನಡೆದಿರುವ ಬಗ್ಗೆ ಮಾಹಿತಿ ಇದೆ. ಅದೇ ವರ್ಷದ ಮೇ ತಿಂಗಳಿನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ನಾನು ಸೋತು ಅಧಿಕಾರ ಕಳೆದುಕೊಂಡಿದ್ದೆ. 2018ರ ಬಳಿಕ ಈ ಎಲ್ಲಾ ಸರಕಾರಿ ಪ್ರಕ್ರಿಯೆಗಳು ಸರಕಾರಿ ಇಲಾಖೆಗಳ ಮೂಲಕವೇ ಆಗಿದೆ. ಆದರೂ ನನ್ನ ವಿರುದ್ಧ ಅಪಪ್ರಚಾರ ಮಾಡಲು ಈ ವಿಚಾರವನ್ನು ಬಳಸಲಾಗುತ್ತಿದೆ ಎಂದು ದೂರಿದರು.
ಈ ಜಾಗಕ್ಕೆ ಸಂಬಂಧಪಟ್ಟಂತೆ ವೈಯುಕ್ತಿಕವಾಗಿ ನಾನು ಯಾವ ಇಲಾಖೆಯ ಅಧಿಕಾರಿಯನ್ನು ಸಂಪರ್ಕಿಸಿ ಚರ್ಚಿಸಿಲ್ಲ, ಯಾವ ಅಧಿಕಾರಿಗಳು ನನ್ನನ್ನು ಸಂಪರ್ಕಿಸಿಲ್ಲ ಎಂದು ಪ್ರಮೋದ್ ಸ್ಪಷ್ಟಪಡಿಸಿದ್ದಾರೆ.